ಮೈಸೂರು : ಚಾಮುಂಡೇಶ್ವರಿ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡುವ ಮೂಲಕ ಚಾಮುಂಡೇಶ್ವರಿ ವರ್ಧಂತಿ ಸಂಭ್ರಮದಿಂದ ನೆರವೇರಿತು. ವರ್ಧಂತಿಗೆ ರಾಜವಂಶಸ್ಥರು ಚಾಲನೆ ನೀಡಿದರು.
ಆಷಾಢ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದಲ್ಲಿ ವರ್ಧಂತಿಗೆ ಚಾಲನೆ ನೀಡಲಾಯಿತು. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಸ್ಥಾಪನೆ ಮಾಡಿದ್ದರು. ಹೀಗಾಗಿ ಅಂದಿನಿಂದ ಈ ದಿನವನ್ನು ಚಾಮಂಡೇಶ್ವರಿ ವರ್ಧಂತಿ ದಿನ ಎಂದು ಆಚರಿಸಿಕೊಂಡ ಬರಲಾಗಿದೆ.
ಈ ದಿನ ಮಾತ್ರ ಚಾಮುಂಡಿಗೆ ಚಾಮುಂಡಿ ಅಲಂಕಾರ ಮಾಡುವುದು ವಿಶೇಷ. ಮುಖ್ಯವಾಗಿ ಚಾಮುಂಡೇಶ್ವರಿಯ ಮೂಲ ಮೂರ್ತಿಗೆ ಈ ಅಲಂಕಾರ ಮಾಡುವುದು ವರ್ಧಂತಿ ದಿನದ ವಿಶೇಷ.
ಚಾಮುಂಡೇಶ್ವರಿಯನ್ನು ಸ್ಥಾಪನೆ ಮಾಡಿದ ಈ ದಿನವನ್ನು ಚಾಮುಂಡೇಶ್ವರಿ ವರ್ಧಂತಿ ಉತ್ಸವ ಎಂದು ಆಚರಣೆ ಮಾಡುತ್ತೇವೆ. ಇಂದು ದೇವಸ್ಥಾನದಲ್ಲಿ ಬೆಳಗ್ಗೆ ಅಭ್ಯಂಜನ ಸ್ನಾನ ಮಾಡಿಸಿ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನಂತರ ತಾಯಿಗೆ ಅವರ ಹುಟ್ಟುಹಬ್ಬದ ಈ ದಿನ ಚಾಮುಂಡೇಶ್ವರಿ ಅಲಂಕಾರ ಮಾಡಲಾಗಿದೆ. ನಂತರ 9.30ಕ್ಕೆ ಮಹಾ ಮಂಗಳಾರತಿಯ ನಂತರ ರಾಜವಂಶಸ್ಥರು ವರ್ಧಂತಿ ಉತ್ಸವಕ್ಕೆ ಚಾಲನೆ ನೀಡುವರು. ಬಳಿಕ ದೇವಸ್ಥಾನದ ಸುತ್ತ ಉತ್ಸವ ಮೂರ್ತಿಯ ಉತ್ಸವ ನಡೆದ ಬಳಿಕ ರಾತ್ರಿ ದರ್ಬಾರ್ ಉತ್ಸವ ಮಾಡುವ ಮೂಲಕ ವರ್ಧಂತಿಯ ಧಾರ್ಮಿಕ ಆಚರಣೆ ಮುಕ್ತಾಯ ಆಗಲಿದೆ’ ಎನ್ನುತ್ತಾರೆ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರು.




