Mysore
13
overcast clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಮೈಸೂರಿನ ಅಭಿರುಚಿ ಪ್ರಕಾಶನಕ್ಕೆ ೩೦ರ ಹರಯ

ಗಿರೀಶ್ ಹುಣಸೂರು

ಕನ್ನಡದ ಖ್ಯಾತ ಲೇಖಕರಾದ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕಥಾ ಸಂಕಲನದ ಇಂಗ್ಲಿಷ್ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಪ್ರಶಸ್ತಿಯ ಗೆಲುವಿನಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನದ ಪಾತ್ರವೂ ಹಿರಿದು. ಜೀವನ ಸಾಗಿಸಲು ಅನಿವಾರ್ಯ ಪರಿಸ್ಥಿತಿಯಲ್ಲಿ ಸೈಕಲ್‌ನಲ್ಲಿ ಬೀದಿ ಬೀದಿಯಲ್ಲಿ ಪುಸ್ತಕ ಮಾರುತ್ತಾ ಪ್ರಕಾಶನ ಕ್ಷೇತ್ರಕ್ಕೆ ಕಾಲಿರಿಸಿದ ಮೈಸೂರಿನ ಎ.ಗಣೇಶ್, ನೋಡ ನೋಡುತ್ತಲೇ ಈ ಕ್ಷೇತ್ರದಲ್ಲಿ ೩೦ ವರ್ಷಗಳನ್ನು ಕ್ರಮಿಸಿ ಮೈಸೂರಿನ ಸಾಹಿತ್ಯ ವಲಯದಲ್ಲಿ ‘ಅಭಿರುಚಿ ಗಣೇಶ್’ ಎಂದೇ ಜನಜನಿತರಾಗಿದ್ದಾರೆ.

ಹಾಗೆ ನೋಡಿದರೆ ಅಭಿರುಚಿ ಗಣೇಶ್ ಅವರು ಪ್ರಕಾಶನ ಕ್ಷೇತ್ರಕ್ಕೆ ಕಾಲಿರಿಸಿದಾಗ ಅವರ ಜೀವನ ಹೂ ಹಾಸಿನ ಹಾದಿಯಾಗಿರಲಿಲ್ಲ. ಕಳೆದ ೩೦ ವರ್ಷಗಳ ಹೋರಾಟ ಗಣೇಶ್ ಅವರ ಪ್ರಕಾಶನದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.

ಮೈಸೂರಿನ ವೀರನಗೆರೆಯವರಾದ ಗಣೇಶ್ ಅವರ ತಂದೆ ಅಂಕಪ್ಪ, ತಾಯಿ ಪುಟ್ಟ ನರಸಮ್ಮ, ಪೋಷಕರು ಹೂವಿನ ವ್ಯಾಪಾರ ಮಾಡುತ್ತಿದ್ದರು. ಆದರೆ, ಜೀವನ ಮಾತ್ರ ಮುಳ್ಳಿನ ಹಾದಿಯಾಗಿತ್ತು. ಮನೆಗೆ ಹಿರಿಯ ಮಗನಾದ ಗಣೇಶ್ ಅವರು ಬಿಡುವಿನ ವೇಳೆಯಲ್ಲಿ ಹೂವು ಮಾರಿ, ಶಾಲೆಗೆ ಹೋಗಬೇಕಿತ್ತು. ಹೀಗಿರುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ರಾದ ಗಣೇಶ್ ಅವರಿಗೆ ಮನೆಯಲ್ಲಿ ಬೈಗುಳಗಳ ಸುರಿಮಳೆಯಾಗಿತ್ತು. ಬೇಸತ್ತು ಮನೆ ಬಿಟ್ಟು ಬಳ್ಳಾರಿ ತಲುಪಿದ ಗಣೇಶ್, ಅಲ್ಲಿನ ಹೂವಿನ ಮಂಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲ ಕಾಲದ ನಂತರ ಅಲ್ಲಿಯೂ ಸರಿ ಹೋಗದೆ, ಹೋಟೆಲ್‌ನಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿದರು. ಬಳ್ಳಾರಿಯಿಂದ ಚಿತ್ರ ದುರ್ಗಕ್ಕೆ ಬಂದು ಅಲ್ಲಿಯೂ ಹೋಟೆಲ್‌ನಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿಕೊಂಡರು. ಮತ್ತೆ ಮನೆಗೆ ವಾಪಸ್ಸಾಗಿ ಹೂವು ಮಾರಿಕೊಂಡು ಇದ್ದರಾದರೂ ಮನೆ ಯವರಿಂದ ಬೈಗುಳ ತಪ್ಪಲಿಲ್ಲ. ಇದರಿಂದ ರೋಸಿಹೋಗಿ ಮನೆಯನ್ನು ಶಾಶ್ವತವಾಗಿ ತೊರೆದುಬಂದರು.

ಹೀಗೆ ಮನೆ ತೊರೆದು ಬಂದವರನ್ನು ಕೈ ಹಿಡಿದು ಮುನ್ನಡೆಸುತ್ತಿರುವುದು ಪುಸ್ತಕ ಪ್ರಕಾಶನ. ವೀರನಗೆರೆಯ ಇವರ ಮನೆಯ ಹಿಂದೆ ಇದ್ದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಉದ್ಯೋಗಿ ಡಾ.ಅಕ್ಕಮಹಾದೇವಿ ಅವರ ಮನೆಗೆ ಬಿಡಿ ಹೂವು ತರಲು ಹೋಗುತ್ತಿದ್ದಾಗ, ಅವರು ಮನೆಗೆ ತರಿಸಿಕೊಳ್ಳುತ್ತಿದ್ದ ವೃತ್ತಪತ್ರಿಕೆಗಳನ್ನು ಗಮನಿಸುತ್ತಿದ್ದ ಗಣೇಶ್ ಅವರಿಗೆ ಸಾಹಿತ್ಯಾಸಕ್ತಿ ಬೆಳೆಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸ್ ಮಾಡಿಕೊಂಡ ಗಣೇಶ್, ಪಿಯುಸಿ ವ್ಯಾಸಂಗಕ್ಕಾಗಿ ಸಂಜೆ ಕಾಲೇಜು ಸೇರಿಕೊಂಡರು. ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಅಕ್ಕಮಹಾದೇವಿ ಅವರ ತಾಯಿ ಚಿಕ್ಕಮ್ಮ, ಡಿ.ವಿ.ಕೆ. ಮೂರ್ತಿ ಅವರಿಗೆ ಹೇಳಿ ಕೃಷ್ಣಮೂರ್ತಿಪುರಂನಲ್ಲಿದ್ದ ಪ್ರಕಾಶನದಲ್ಲಿ ಕೆಲಸ ಕೊಡಿಸಿದ್ದರು. “ಡಿ.ವಿ.ಕೆ.ಮೂರ್ತಿ ಅವರು ನನ್ನ ಪುಸ್ತಕ ವ್ಯವಹಾರ ನಿರ್ವಹಣೆ ಕಂಡು ಖುಷಿಯಾಗಿ ೧೯೯೩ರಲ್ಲಿ ಹೊಸ ಸೈಕಲ್ ಕೊಡಿಸಿದರು. ಅದರಲ್ಲಿ ಕೃಷ್ಣಮೂರ್ತಿಪುರಂ, ಸರಸ್ವತಿಪುರಂ, ಕುವೆಂಪುನಗರ ಮೊದಲಾದ ಕಡೆಗಳಿಗೆ ಹೋಗಿ ಸೊಪ್ಪು, ತರಕಾರಿಗಳಂತೆ ಪುಸ್ತಕಗಳನ್ನು ಮಾರುತ್ತಿದ್ದೆ. ಹೀಗಾಗಿ ನನ್ನಲ್ಲಿಯೂ ಸಾಹಿತ್ಯ ಅಭಿರುಚಿ ಬೆಳೆಯಿತು” ಎನ್ನುತ್ತಾರೆ ಗಣೇಶ್.

ಆ ಸಮಯದಲ್ಲಿ ಎಂ.ವೀರಪ್ಪ ಮೊಯಿಲಿ ಅವರ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಪುಸ್ತಕ ಮಳಿಗೆಗಳನ್ನು ಆರಂಭಿಸಲು ಪ್ರೋತ್ಸಾಹಧನ ನೀಡುವ ಯೋಜನೆ ಅನುಷ್ಠಾನಗೊಳಿಸಿತು. ಗಣೇಶ್, ಸೈಕಲ್‌ನಲ್ಲಿ ಪುಸ್ತಕ ಮಾರುತ್ತಿದ್ದುದನ್ನು ಗಮನಿಸಿದ್ದ ಪ್ರಾಧಿಕಾರದ ಸದಸ್ಯರೂ ಆಗಿದ್ದ ವಿಜ್ಞಾನ ಲೇಖಕ ಜಿ.ಟಿ.ನಾರಾಯಣ ರಾವ್ ಅವರು ಶಿಫಾರಸು ಮಾಡಿ ೨೫ ಸಾವಿರ ರೂ. ಪ್ರೋತ್ಸಾಹಧನ ಕೊಡಿಸಿದರು.

ಆ ಸಂದರ್ಭದಲ್ಲಿ ನಗರಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಭಾಮಿ ವಿ.ಶೆಣೈ ಅವರ ಪರ ಪ್ರಚಾರಕ್ಕೆ ತೆರಳಿದ್ದಾಗ ಮನೆ ಮನೆಗೆ ಕರಪತ್ರ ಹಂಚುವಾಗ ಸರಸ್ವತಿಪುರಂನ ೧೪ನೇ ಮುಖ್ಯರಸ್ತೆಯಲ್ಲಿ ಖಾಲಿ ಮಳಿಗೆ ಕಂಡ ಜಿ.ಟಿ.ನಾರಾಯಣರಾವ್ ಅವರು ಇಲ್ಲಿ ಪುಸ್ತಕ ಮಳಿಗೆ ಆರಂಭಿಸುವಂತೆ ಸಲಹೆ ನೀಡಿದರು. ಆದರೆ, ಮಳಿಗೆಗೆ ಮುಂಗಡ ನೀಡಲು ಹಣ ಬೇಕಲ್ಲ? ಮುಂಗಡವಾಗಿ ನೀಡಲು ಅಗತ್ಯವಿದ್ದ ಹತ್ತು ಸಾವಿರ ರೂ. ಇವರ ಬಳಿ ಇರಲಿಲ್ಲ. ಡಾ.ಅಕ್ಕಮಹಾದೇವಿಯವರ ಗೆಳತಿ ಡಾ.ಉಷಾದೇವಿ ಅವರ ಗಮನಕ್ಕೆ ಈ ವಿಷಯ ಹೋಯಿತು. ಅವರು, ತಮ್ಮ ಫೆಲೋಶಿಪ್ ಹಣವನ್ನು ನನಗೆ ನೀಡಿ ಸಹಕರಿಸಿದರು. ಪುಸ್ತಕ ರ‍್ಯಾಕ್‌ಗಳನ್ನು ತರಲು ಸ್ನೇಹಿತರು ಸಾಲ ನೀಡಿದರು ಎಂದು ನೆನೆಯುತ್ತಾರೆ ಗಣೇಶ್.

ಇದರ ಮಧ್ಯೆ ಗಾನ ಭಾರತೀಯ ‘ತಿಲ್ಲಾನ’ ಪತ್ರಿಕೆಯನ್ನು ಮನೆ ಮನೆಗೆ ಹಾಕುತ್ತಿದ್ದರಿಂದ ತಿಂಗಳಿಗೆ ೩೦೦ ರೂ. ಸಿಗುತ್ತಿತ್ತು. ಮಳಿಗೆಯಲ್ಲಿ ಸರ್ಕ್ಯೂಲೇಟಿಂಗ್ ಲೈಬ್ರರಿ ಆರಂಭಿಸಿದ್ದೆ. ಕಾದಂಬರಿಕಾರ ಪ್ರೊ.ಕೃಷ್ಣಮೂರ್ತಿ ಹನೂರು ಅವರ ಪ್ರೋತ್ಸಾಹದೊಂದಿಗೆ ೧೯೯೫ರ ಮಾರ್ಚ್ ೧೭ರಂದು ಅಧಿಕೃತವಾಗಿ ‘ಅಭಿರುಚಿ ಪ್ರಕಾಶನ’ ಆರಂಭವಾಯಿತು. ಆ ವೇಳೆಗೆ ಹೊರಬಂದ ‘ಲಂಕೇಶ್-೬೦’ ಪುಸ್ತಕ ಮಾರಾಟದಿಂದ ೪೦ ಸಾವಿರ ರೂ. ಕೈಗೆ ಬಂತು. ‘ಜಾಜಿ ಹೂವಿನ ಕಟ್ಟು’, ‘ಅಜ್ಜಿ ಮಾದ’ ಅಭಿರುಚಿ ಪ್ರಕಾಶನದಿಂದ ಹೊರತಂದ ಮೊದಲ ಪುಸ್ತಕಗಳು ಎನ್ನುತ್ತಾರೆ ಗಣೇಶ್.

ಇದರೊಂದಿಗೆ ನನಗೆ ಸಾಹಿತ್ಯಕ, ವೈಚಾರಿಕ ವಲಯದ ಗೆಳೆತನ ಸಿಕ್ಕಿತು. ೨೦೦೨ರಲ್ಲಿ ಹಾಸನದಲ್ಲಿ ನಡೆದ ಪ್ರತಿಭಟನೆಯಲ್ಲಿ ಲೇಖಕಿ ಬಾನು ಮುಷ್ತಾಕ್ ಅವರನ್ನು ಪೊಲೀಸರು ಬಂಽಸಿದ್ದರು. ಈ ವಿಷಯ ತಿಳಿದ ಪ್ರೊ.ಕೆ. ರಾಮದಾಸ್ ಅವರು ನನ್ನನ್ನು ಹಾಸನಕ್ಕೆ ಜೊತೆಗೆ ಕರೆದೊಯ್ದರು. ಪೊಲೀಸ್ ಠಾಣೆಯಿಂದ ಬಾನು ಮುಷ್ತಾಕ್ ಅವರನ್ನು ಬಿಡಿಸಿ, ಅವರ ಮನೆಗೆ ಕರೆದೊಯ್ದಾಗ ಮಾತುಕತೆ ವೇಳೆ ನನ್ನನ್ನು ಅವರಿಗೆ ಪರಿಚಯಿಸಿ ನಿಮ್ಮ ಬರಹಗಳನ್ನು ಅಭಿರುಚಿ ಪ್ರಕಾಶನದ ಮೂಲಕವೇ ಪ್ರಕಟಿಸಿ ಎಂದು ಸಲಹೆ ನೀಡಿದ್ದರು. ಅಂದಿನಿಂದ ಬಾನು ಮುಷ್ತಾಕ್ ಅವರ ಪರಿಚಯ, ಒಡನಾಟ ಶುರುವಾಯಿತು.

ಮೊದಲು ಬಾನು ಮುಷ್ತಾಕ್ ಅವರ ಸಣ್ಣ ಕತೆಗಳ ಕಥಾಸಂಕಲನ ‘ಸಫೀರಾ’ ಪ್ರಕಟಿಸಿದರು. ಅಲ್ಲಿಂದ ಬಾನು ಮುಷ್ತಾಕ್ ಅವರ ಪುಸ್ತಕಗಳನ್ನು ಪ್ರಕಟಿಸುವ ಸಂಪೂರ್ಣ ಹೊಣೆ ಗಣೇಶ್ ಅವರದಾಯಿತು. ಕಳೆದ ೩೦ ವರ್ಷಗಳಲ್ಲಿ ತಮ್ಮ ಪ್ರಕಾಶನದಿಂದ ೪೪೫ ಕೃತಿಗಳನ್ನು ಪ್ರಕಟಿಸಿದ್ದಾರೆ.

” ಚಿತ್ರದುರ್ಗದಲ್ಲಿ ಹೋಟೆಲ್ ಸಪ್ಲೈಯರ್ ಕೆಲಸ ಮಾಡುವಾಗಲೇ ಮೈಸೂರಿಗೆ ಬಂದು ಪರೀಕ್ಷೆ ಬರೆದು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿಕೊಂಡ ಗಣೇಶ್, ಪಿಯುಸಿ ವ್ಯಾಸಂಗಕ್ಕಾಗಿ ಸಂಜೆ ಕಾಲೇಜು ಸೇರಿಕೊಂಡಿದ್ದರು. ಡಾ. ಅಕ್ಕಮಹಾದೇವಿ ಅವರ ತಾಯಿ ಚಿಕ್ಕಮ್ಮ , ಡಿ.ವಿ.ಕೆ.ಮೂರ್ತಿ ಅವರಿಗೆ ಹೇಳಿ ಕೃಷ್ಣಮೂರ್ತಿಪುರಂನಲ್ಲಿದ್ದ ಪ್ರಕಾಶನದಲ್ಲಿ ಕೆಲಸ ಕೊಡಿಸಿದ್ದರು.”

ಅಭಿರುಚಿ ಗಣೇಶ್‌ 

” ಗಣೇಶ್ ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಬಲ್ಲೆ. ನಾನು ಮೇಷ್ಟ್ರಾಗಿದ್ದಾಗಿನಿಂದಲೂ ಪುಸ್ತಕ ಬರೆಯುತ್ತಿದ್ದೆ. ಆಗಿನ್ನೂ ಗಣೇಶ್ ಪ್ರಕಾಶನ ಆರಂಭಿಸಿರಲಿಲ್ಲ. ಹೀಗಾಗಿ ಪ್ರಾರಂಭದ ಮೂರು ಪುಸ್ತಕಗಳನ್ನು ಬಿಟ್ಟರೆ ನನ್ನ ಎಲ್ಲಾ ಪುಸ್ತಕಗಳನ್ನೂ ಗಣೇಶ್ ತಮ್ಮ ಅಭಿರುಚಿ ಪ್ರಕಾಶನದಿಂದಲೇ ಪ್ರಕಟಿಸಿದ್ದಾರೆ. ಈತ ವ್ಯವಹಾರದಲ್ಲಿ ಸಭ್ಯ. ತಾನಾಯಿತು ತನ್ನ ಕೆಲಸವಾಯಿತು ಎಂದು ಕೆಲಸ ಮಾಡುತ್ತಾ ಹೋಗುತ್ತಿದ್ದಾರೆ. ಗುಣಮಟ್ಟದ ಕೆಲಸದಿಂದಾಗಿ ಅವರಿಗೆ ಯಶಸ್ಸು ದೊರೆಯುತ್ತಿದೆ.”

– ಪ್ರೊ. ಪಿ.ವಿ.ನಂಜರಾಜ ಅರಸು, ಇತಿಹಾಸ ತಜ್ಞರು

Tags:
error: Content is protected !!