Mysore
23
light rain

Social Media

ಸೋಮವಾರ, 12 ಜನವರಿ 2026
Light
Dark

ವಿಕೋಪ ಎದುರಿಸಲು ಪೊಲೀಸ್‌ ಇಲಾಖೆ ಸಿದ್ಧತೆ

ನವೀನ್ ಡಿಸೋಜ

ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವ ಎಸ್‌ಪಿ ಕೆ.ರಾಮರಾಜನ್; ಸ್ವಯಂಸೇವಕರು, ಅಗತ್ಯ ವಾಹನಗಳ ಮಾಹಿತಿ ಸಂಗ್ರಹಕ್ಕೆ ಸೂಚನೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಪ್ರಕೃತಿ ವಿಕೋಪ ಎದುರಿಸಲು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ೧,೪೩೭.೩೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಽಯಲ್ಲಿ ೮೭೬ ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಹೆಚ್ಚಾಗಿದ್ದು, ಜೂನ್ ತಿಂಗಳಿನಲ್ಲಿಯೇ ಹಾರಂಗಿ ಜಲಾಶಯ ಕೂಡ ಭರ್ತಿಯಾಗಿದ್ದು, ನೀರು ಹೊರಬಿಡಲಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿಯೂ ಮಳೆ ಹೆಚ್ಚಾಗಲಿದ್ದು, ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆಯೂ ಇದೆ.

ಈಗಾಗಲೇ ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಪ್ರಕೃತಿ ವಿಕೋಪ ತಡೆಯಲು ಸಜ್ಜಾಗಿದ್ದು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಲು ಸನ್ನದ್ಧವಾಗಿದೆ. ಈ ನಡುವೆ ಎಲ್ಲ ರೀತಿಯಲ್ಲೂ ಜಿಲ್ಲಾ ವಿಪತ್ತು ನಿರ್ವಹಣಾ ತಂಡಕ್ಕೆ ಸಹಕಾರ ನೀಡಲು ಮುಂದಾಗಿರುವ ಪೊಲೀಸ್ ಇಲಾಖೆ ಈ ಬಾರಿಯೂ ಪ್ರಕೃತಿ ವಿಕೋಪ ತಡೆಯಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಪ್ರಕೃತಿ ವಿಕೋಪ ಉಂಟಾದರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪೊಲೀಸ್ ಅದಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಎಲ್ಲ ಡಿವೈಎಸ್‌ಪಿ, ಸರ್ಕಲ್ ಇನ್ ಸ್ಪೆಕ್ಟರ್‌ಗಳು, ಇನ್ ಸ್ಪೆಕ್ಟರ್‌ಗಳು, ಸಬ್‌ಇನ್  ಸ್ಪೆಕ್ಟರ್‌ಗಳಿಗೆ ಅಗತ್ಯ ಸಿದ್ಧತೆಗೆ ಸೂಚಿಸಲಾಗಿದೆ. ಈ ವರ್ಷ ಅತಿಹೆಚ್ಚು ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿನ ನದಿ, ಜಲಾಶಯ, ಕೆರೆ, ತೋಡು, ಹಳ್ಳ ಇತರೆ ನೀರಿನ ಮೂಲಗಳು ಈಗಾಗಲೇ ತುಂಬಿ ಹರಿಯುತ್ತಿವೆ. ಆದ್ದರಿಂದ ಯಾವುದೇ ರೀತಿಯ ಪ್ರಕೃತಿ ವಿಕೋಪ ಉಂಟಾದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಪಿ ಕೆ. ರಾಮರಾಜನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಠಾಣೆ ಹಾಗೂ ಗ್ರಾಮ ಬೀಟ್ ವ್ಯಾಪ್ತಿಯಲ್ಲಿ ಸ್ವಯಂಸೇವಕರನ್ನು ಗುರುತಿಸಿ ಅವರ ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ ಹಾಗೂ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಸನ್ನದ್ಧರಾಗಿರುವ ನಿಟ್ಟಿನಲ್ಲಿ ಮತ್ತು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಸ್ವಯಂಸೇವಕರೊಂದಿಗೆ ಠಾಣಾ ಮಟ್ಟದಲ್ಲಿ ಸಭೆಯನ್ನು ನಡೆಸಿ ಸೂಕ್ತ ಸಲಹೆ ನೀಡಲು ನಿರ್ದೇಶನ ನೀಡಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿ ಲಭ್ಯವಿರುವ ಜೆಸಿಬಿ, ಕ್ರೇನ್, ಟೋಯಿಂಗ್ ವಾಹನ, ವುಡ್ ಕಟ್ಟರ್, ೪ಗಿ೪ ಜೀಪ್‌ಗಳ ವಿವರ ಹಾಗೂ ಅವರ ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ವಿವಿಧ ಸಂಘಟನೆಯ ಸ್ವಯಂಸೇವಕರು ಮತ್ತು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ನಿರ್ದೇಶನ ನೀಡಲಾಗಿದೆ.

ಮಾಹಿತಿ ನೀಡಲು ಮನವಿ:  ಸಾರ್ವಜನಿಕರು ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಪ್ರಕೃತಿ ವಿಕೋಪ ಉಂಟಾದ ಸ್ಥಳ ಹಾಗೂ ನೆರವಿನ ಅವಶ್ಯ ಕುರಿತು ಕೊಡಗು ಜಿಲ್ಲಾ ಪೊಲೀಸ್ ಕಚೇರಿಯ ಮೊ.ಸಂ. ೮೨೭೭೯೫೮೪೪೪ಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದ್ದಾರೆ.

” ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ ಜೂನ್ ತಿಂಗಳ ಅಂತ್ಯದವರೆಗೆ ಅತಿ ಹೆಚ್ಚು ಮಳೆಯಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಯಲ್ಲಿ ಪಾಲ್ಗೊಳ್ಳಲು ಇಚ್ಛೆವುಳ್ಳವರು ತಮ್ಮ ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ ವಿವರಗಳನ್ನು ಕೊಡಗು ಜಿಲ್ಲಾ ಪೊಲೀಸ್ ಕಚೇರಿಯ ಮೊ: ೮೨೭೭೯೫೮೪೪೪ಕ್ಕೆ ಒದಗಿಸಿ ಸಹಕರಿಸಬೇಕು. ತಮ್ಮವಿವರಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿ ಸ್ವಯಂಸೇವಕರ ಪಟ್ಟಿಯಲ್ಲಿ ಸೇರಿಸಿಕೊಂಡು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವಂತಾಗಬೇಕು.”

-ಕೆ.ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Tags:
error: Content is protected !!