Mysore
22
scattered clouds

Social Media

ಭಾನುವಾರ, 11 ಜನವರಿ 2026
Light
Dark

ಸದ್ಬಳಕೆಯಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅನುದಾನ

ಕೃಷ್ಣ ಸಿದ್ದಾಪುರ

೧೦,೮೭,೮೬೧ ರೂ. ಬಾಕಿ ಉಳಿಸಿಕೊಂಡ ಸಿದ್ದಾಪುರ ಗ್ರಾಪಂ; ತ್ರೈಮಾಸಿಕ ಜಾಗೃತಿ ಸಮಿತಿ ಸಭೆಯಲ್ಲಿ ಬೆಳಕಿಗೆ 

ಸಿದ್ದಾಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಈ ಸಮುದಾಯಗಳಿಗಾಗಿಯೇ ಅನುದಾನವನ್ನು ಮೀಸಲಿಡಲಾಗುತ್ತಿದೆ. ಆದರೆ, ಸಿದ್ದಾಪುರ ಗ್ರಾ.ಪಂ. ಸುಮಾರು ೧೦ ಲಕ್ಷ ರೂ.ಗಳನ್ನು ಸದ್ಬಳಕೆ ಮಾಡದೆ ಬಾಕಿ ಉಳಿಸಿಕೊಂಡಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳು ಪರಿಶಿಷ್ಟ ಸಮುದಾಯಕ್ಕೆ ಲಭಿಸಿದೆ. ಆದರೂ ಪರಿಶಿಷ್ಟ ಜಾತಿ ಮತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ಕೆ ಮೀಸಲಿಟ್ಟಿರುವ ಶೇ.೨೫ ಅನುದಾನ ಬಳಕೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲವಾಗಿದೆ.

ಜೂ.೨೩ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತ ರಕ್ಷಣಾ ಜಾಗೃತಿ ಸಮಿತಿ ಅಧ್ಯಕರೂ ಆಗಿರುವ ವಿರಾಜ ಪೇಟೆ ತಾಲ್ಲೂಕು ತಹಸಿಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಬಯಲಾಗಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿಯು ಸುಮಾರು ೧೦,೮೭,೮೬೧ ರೂ. ಅನುದಾನವನ್ನು ವೆಚ್ಚ ಮಾಡದೆ ಹಾಗೆಯೇ ಉಳಿಸಿಕೊಂಡಿದೆ. ಶೇ. ೪೪.೨೫ ರಷ್ಟು ಅನುದಾನ ಬಳಕೆಯಾಗಿದ್ದರೂ ಉಳಿದ ಅನುದಾನವನ್ನು ಹಾಗೆಯೇ ಉಳಿಸಿಕೊಂಡು ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳದ ಪಂಚಾಯಿತಿಯಾಗಿ ಗುರುತಿಸಿಕೊಂಡಿದೆ.

ಈ ಹಿಂದೆ ಕೂಡ ಸಿದ್ದಾಪುರ ಗ್ರಾ.ಪಂ. ಮೀಸಲು ಹಣವನ್ನು ಬಳಸದೆ ಇರುವುದರ ಕುರಿತು ‘ಆಂದೋಲನ’ ಪತ್ರಿಕೆ ವರದಿ ಪ್ರಕಟಿಸಿತ್ತು. ಆ ಬಳಿಕ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕುಗಳ ಒಟ್ಟು ೩೭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ ಮೇರೆಗೆ ೨೬ ಗ್ರಾ.ಪಂ.ಗಳು ಶೇ ೧೦೦ ಪ್ರಗತಿ ಸಾಧಿಸಿವೆ.

ಉಳಿದಂತೆ ೮ ಪಂಚಾಯಿತಿಗಳು ಶೇ.೯೦ರಿಂದ ೯೯ ಹಾಗೂ ೨ ಪಂಚಾಯಿತಿಗಳು ಶೇ.೭೫ ಪ್ರಗತಿ ಸಾಽಸಿದ್ದು, ಸಿದ್ದಾಪುರ ಪಂಚಾಯಿತಿ ಮಾತ್ರ ಶೇ.೪೪ರಷ್ಟು ಕಳಪೆ ಸಾಧನೆ ಮಾಡಿದೆ. ದಲಿತ ಕೇರಿಗಳ ಅಭಿವೃದ್ಧಿ, ಶೈಕ್ಷಣಿಕ ಸವಲತ್ತುಗಳ ವಿತರಣೆ, ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಅಡುಗೆ ಅನಿಲ ಸಂಪರ್ಕ ಪಡೆಯಲು ಸಹಾಯಧನ, ವೈದ್ಯಕೀಯ ಸಹಾಯಧನ, ಅಂತ್ಯಕ್ರಿಯೆ ಸಹಾಯಧನ, ಕ್ರೀಡಾಪಟುಗಳಿಗೆ ಸವಲತ್ತು ವಿತರಣೆ, ಗುಡಿ ಕೈಗಾರಿಕೆ, ಸೋಲಾರ್ ಲ್ಯಾಂಟ್ರಿನ್ ವಿತರಣೆ, ಕರಕುಶಲ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಹೆಣ್ಣುಮಕ್ಕಳ ಸರಳ ಮದುವೆ, ಶೇ. ೮೦ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಿಗೆ ಬಳಸಬೇಕಾದ ಅನುದಾನದ ಮೊತ್ತವು ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಮತ್ತು ಆಡಳಿತ ಮಂಡಳಿಯ ಅಜ್ಞಾನದಿಂದಾಗಿ ಬಳಕೆಗೊಳ್ಳದೆ ಹಾಗೆ ಉಳಿದಿದೆ.

೭ ವಾರ್ಡ್‌ಗಳನ್ನು ಒಳಗೊಂಡಿರುವ ಸಿದ್ದಾಪುರ ಗ್ರಾಮ ಪಂಚಾಯಿತಿ ೬೫೫೬.೬೮ ಎಕರೆ ವಿಸ್ತೀರ್ಣ ಹೊಂದಿದ್ದು, ೨೦೧೧ರ ಜನ ಗಣತಿ ಪ್ರಕಾರ ೩೧೩ ಪರಿಶಿಷ್ಟ ಜಾತಿ ಕುಟುಂಬಗಳ ೧೧,೪೦೦ ಮತ್ತು ೨೯೭ ಪರಿಶಿಷ್ಟ ಪಂಗಡ ಕುಟುಂಬಗಳ ೧,೧೮೮ ಮಂದಿ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ.

” ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ರೈನ್ ಕೋಟ್, ಪುಸ್ತಕ ವಿತರಣೆ ಸೇರಿದಂತೆ ಸಮುದಾಯದ ಅಭಿವೃದ್ಧಿಗೆ ಅನುದಾನ ಖರ್ಚು ಮಾಡಲು ವಿಫಲವಾಗಿರುವ ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಒಗೆ ಮಾರ್ಗದರ್ಶನ ನೀಡುವಂತೆ ತಾಲ್ಲೂಕು ಕಾರ್ಯನಿರ್ವಾಹಣಾ ಅಽಕಾರಿಗೆ ಸೂಚಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.”

-ಅನಂತ ಶಂಕರ್, ತಹಸಿಲ್ದಾರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷರು.

” ಸಿದ್ದಾಪುರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಅಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮ ರೂಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಶೇ. ೨೫ ಅನುದಾನ ಹಂಚಿಕೆಯಲ್ಲಿ ಕೇವಲ ಶೇ ೪೪ ಪ್ರಗತಿ ಸಾಧಿಸಿದ್ದು, ಜಾಗೃತಿ ಸಮಿತಿ ಅಧ್ಯಕ್ಷರು, ಸದಸ್ಯರ ನೇತೃತ್ವದಲ್ಲಿ ಸಮು ದಾಯದ ವಿಶೇಷ ಗ್ರಾಮ ಸಭೆ ನಡೆಸಬೇಕು. ಪಿಡಿಒ ಹಾಗೂ ಗ್ರಾಪಂ ವಿರುದ್ಧ ಮೊಕದ್ದಮೆ ದಾಖಲಿಸಬೇಕು.”

-ಕೆ.ವಿ. ಸುನಿಲ್, ಅಧ್ಯಕ್ಷರು, ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ, ವಿರಾಜಪೇಟೆ ತಾಲ್ಲೂಕು

” ತಹಸಿಲ್ದಾರ್ ಆದೇಶದ ಮೇರೆಗೆ ಸಿದ್ದಾಪುರ, ಆರ್ಜಿ ಮತ್ತು ತಿತಿಮತಿ ಪಂಚಾಯಿತಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸಿದ್ದಾಪುರ ಪಂಚಾಯಿತಿಯಲ್ಲಿ ಉಳಿಕೆ ಹಣ ಹೆಚ್ಚಿದೆ. ಈ ಸಂಬಂಧ ವಿಶೇಷವಾಗಿ ಗಮನಹರಿಸಲಾಗುವುದು. ಶೀಘ್ರದಲ್ಲಿ ಮತ್ತೊಂದು ಸಭೆ ಕರೆದು ಸವಲತ್ತು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.”

-ಅಪ್ಪಣ್ಣ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ.

” ಸಿದ್ದಾಪುರ ಗ್ರಾ.ಪಂ.ನಲ್ಲಿ ಆಡಳಿತ ಮಂಡಳಿ ಮತ್ತು ಸದಸ್ಯರ ಅರಿವಿನ ಕೊರತೆಯಿಂದ ೧೦ ಲಕ್ಷ ರೂ. ಅನು ದಾನ ಉಳಿಕೆಯಾಗಿದೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಮುಖರ ಸಭೆ ನಡೆಸಿ ಸವಲತ್ತು ಒದಗಿಸುವ ಕೆಲಸವಾಗಬೇಕು.”

-ಎಚ್.ಬಿ. ರಮೇಶ್,ಜಿಲ್ಲಾ ಕಾರ್ಯದರ್ಶಿ, ಸಿಪಿಐ(ಎಂ)

Tags:
error: Content is protected !!