Mysore
27
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಕಬಿನಿಗೆ ಬಾಗಿನ ಅರ್ಪಿಸಲು ಸಿಎಂ ಬಾರದ್ದಕ್ಕೆ ಆಕ್ರೋಶ

ಮಂಜು ಕೋಟೆ

ಕೋಟೆ: ಮುಖ್ಯಮಂತ್ರಿ ಭೇಟಿ ನೀಡಿದರೆ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂಬ ನಿರೀಕ್ಷೆ ಜನರದ್ದು 

ಎಚ್.ಡಿ.ಕೋಟೆ: ರಾಜ್ಯದಲ್ಲಿ ಪ್ರಪ್ರಥಮವಾಗಿ ಭರ್ತಿಯಾಗುವ ತಾಲ್ಲೂಕಿನ ಕಬಿನಿ ಜಲಾಶಯವನ್ನು ಬಿಟ್ಟು ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿಗಳು ಮುಂದಾಗಿರುವುದು ಇಲ್ಲಿನ ಸಾರ್ವಜನಿಕರ ಹಾಗೂ ರೈತರ ಆಕ್ರೋಶಕ್ಕೆ ಗುರಿಯಾಗಿದೆ.

ಕಳೆದ ೧೫ ವರ್ಷಗಳಿಂದ ಒಂದೇ ದಿನ ಎರಡೂ ಜಲಾಶಯಗಳಿಗೆ ರಾಜ್ಯದ ಮುಖ್ಯಮಂತ್ರಿಗಳು, ಇನ್ನಿತರ ಸಚಿವರು, ಶಾಸಕರು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವ ಸಂಪ್ರದಾಯ ರೂಢಿಯಲ್ಲಿದೆ. ಆದರೆ ಈ ಬಾರಿ ಒಂದು ತಿಂಗಳ ಹಿಂದೆಯೇ ತಾಲ್ಲೂಕಿನ ಕಬಿನಿ ಜಲಾಶಯ ಭರ್ತಿಯಾಗಿದ್ದು, ೩೦,೦೦೦ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜಲಾಶಯದ ಹಿತದೃಷ್ಟಿಯಿಂದ ಗರಿಷ್ಟ ಮಟ್ಟ ೮೪ ಅಡಿಗೆ ನೀರು ಶೇಖರಣೆ ಮಾಡಿಕೊಳ್ಳದೆ ೮೦ ಅಡಿಗಳಿಗೆ ಸೀಮಿತಗೊಳಿಸಿಕೊಂಡು ೨೪,೦೦೦ ಕ್ಯೂಸೆಕ್ಸ್ ನೀರು ಜಲಾಶಕ್ಕೆ ಹರಿದು ಬರುತ್ತಿದ್ದರೂ ಅದಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಾರದೆ ಕೆಆರ್‌ಎಸ್ ಜಲಾಶಯಕ್ಕೆ ಮಾತ್ರ ಬಾಗಿನ ಅರ್ಪಿಸಲು ಮುಂದಾಗಿದ್ದಾರೆ. ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲೇಬೇಕೆಂದು ಪಟ್ಟು ಹಿಡಿದು ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಈ ಭಾಗದ ಜನಪ್ರತಿನಿಧಿಗಳೂ ಪಟ್ಟು ಹಿಡಿದಿದ್ದರೆ ಒಟ್ಟಿಗೆ ಕಬಿನಿ ಜಲಾಶಯಕ್ಕೂ ಬಾಗಿನ ಅರ್ಪಿಸುವ ಅವಕಾಶ ಲಭಿಸುತ್ತಿತ್ತು ಎಂಬ ಮಾತು ಕೇಳಿಬರುತ್ತಿದೆ.

೧೫ ವರ್ಷಗಳ ಹಿಂದೆ ಕಾವೇರಿ ನೀರಿನ ಹಂಚಿಕೆ ವಿವಾದ ಎದುರಾದ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗದವರಿಗೆ ತಾಲ್ಲೂಕಿನ ಕಬಿನಿ ಜಲಾಶಯ ವರದಾನವಾಗಿ ನೀರನ್ನು ಹರಿಸುವ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಂದಿನಿಂದ ಕಳೆದ ವರ್ಷದವರೆಗೂ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಗೆ ಒಂದೇ ದಿನ ಬಾಗಿನ ಅರ್ಪಿಸಲಾಗುತ್ತಿತ್ತು.

ಕಾಂಗ್ರೆಸ್, ಬಿಜೆಪಿ, ಜಾ.ದಳ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ಮುಖ್ಯ ಮಂತ್ರಿಗಳು ಬಾಗಿನ ಅರ್ಪಿಸುತ್ತಿದ್ದರು. ಈ ವೇಳೆ ಕ್ಷೇತ್ರದ ಶಾಸಕರು ಮತ್ತು ಸಾರ್ವಜನಿಕರು, ರೈತರು ಜಲಾಶಯ ಮುಂಭಾಗದಲ್ಲಿ ಬೃಂದಾವನ ನಿರ್ಮಾಣ, ನೀರಾವರಿ ಪ್ರದೇಶ ವ್ಯಾಪ್ತಿಯ ಅಭಿವೃದ್ಧಿ ಇನ್ನಿತರ ಕೆಲಸ ಕಾರ್ಯಗಳು ಆಗಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಾ ಬಂದಿದ್ದರು. ಆಗ ಅಭಿವೃದ್ಧಿಪಡಿಸುವ ಭರವಸೆಯನ್ನು ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರುಗಳು ನೀಡುತ್ತಿದ್ದರು. ಆದರೆ, ಜಲಾಶಯದ ಮುಂಭಾಗದ ಸೇತುವೆ ನಿರ್ಮಾಣ ಹಾಗೂ ರಸ್ತೆ ನಿರ್ಮಾಣ ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿಯೇ ಉಳಿದಿವೆ.

ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ಬಾಗಿನ ಅರ್ಪಿಸುವ ಸಲುವಾಗಿ ತಾಲ್ಲೂಕಿಗೆ ಭೇಟಿ ನೀಡುತ್ತಿದ್ದರೆ ರಸ್ತೆಗಳ ಕಾಮಗಾರಿ ಹಾಗೂ ಜಲಾಶಯಕ್ಕೆ ಸುಣ್ಣಬಣ್ಣ ಬಳಿಯುವ ಕೆಲಸಗಳಾದರೂ ನಡೆಯುತ್ತಿದ್ದವು. ರೈತರ ಕೆಲ ಸಮಸ್ಯೆಗಳು ಸ್ವಲ್ಪಮಟ್ಟಿಗಾದರೂ ಬಗೆಹರಿಯುತ್ತಿದ್ದವು. ಆದರೆ, ಈ ಬಾರಿ ಅಂತಹ ಅವಕಾಶವೂ ದೊರೆತಿಲ್ಲ. ಮುಂದಿನ ದಿನಗಳಲ್ಲಿಯಾದರೂ ಮುಖ್ಯಮಂತ್ರಿಗಳು ಕಬಿನಿಗೆ ಬಾಗಿನ ಅರ್ಪಿಸಲು ಆಗಮಿಸುವರೇ ಎಂದು ಜನತೆ ಎದುರು ನೋಡುತ್ತಿದ್ದಾರೆ.

” ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮತ್ತು ೨೦೦ ಕೋಟಿ ರೂ. ವೆಚ್ಚದಲ್ಲಿ ಜಲಾಶಯ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ದಿನಾಂಕ ನಿಗದಿಪಡಿಸಲಾಗುವುದು. ಮುಖ್ಯಮಂತ್ರಿಗಳು ಹಾಗೂ ಇತರ ಸಚಿವರು ಬರುವುದರಿಂದ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲಾಗುವುದು.”

-ಅನಿಲ್ ಚಿಕ್ಕಮಾದು, ಶಾಸಕರು

Tags:
error: Content is protected !!