ಮೈಸೂರಿನಲ್ಲಿ ಜೂ.೨೧ರಂದು ನಡೆದ ಯೋಗ ದಿನಾಚರಣೆ, ರಾಜಕೀಯ ಹೇಗೆ ಒಂದು ಶ್ರೇಷ್ಠ ಆಚರಣೆಯ ಅಂತರಾಳವನ್ನು ವಶಪಡಿಸಿಕೊಳ್ಳಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನದಂತಿತ್ತು.
ಯೋಗದ ಉಪಯೋಗಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ನಡೆಯಬೇಕಾದ ಈ ಕಾರ್ಯಕ್ರಮ ರಾಜಕೀಯ ಪ್ರದರ್ಶನಕ್ಕೆ ವೇದಿಕೆಯಾಗಿದ್ದು ವಿಷಾದನೀಯ.
ಯೋಗ ಪ್ರದರ್ಶನಕ್ಕೆ ಮುಂಜಾನೆ ಸಮಯ ಸೂಕ್ತ, ಆದರೆ ಯೋಗ ದಿನಾಚರಣೆಯಂದು ರಾಜಕೀಯ ಅತಿಥಿಗಳ ಆಗಮನಕ್ಕಾಗಿ ಕಾಲಹರಣ ಮಾಡಲಾಯಿತು. ಕಾರ್ಯಕ್ರಮದ ಸಮಯವನ್ನು ಯೋಗದ ತಾತ್ವಿಕತೆಯಡಿ ರೂಪಿಸದೆ, ರಾಜಕೀಯ ನಾಯಕರ ಸಮಯಾನುಸಾರ ಆಯ್ಕೆ ಮಾಡಲಾಗಿತ್ತು. ರಾಜಕೀಯ ನಾಯಕರು ಆಗಮಿಸಿ ಬೆಳಿಗ್ಗೆ ೭.೩೦ರ ವೇಳೆಗೆ ಯೋಗ ಆರಂಭವಾಗುವ ಹೊತ್ತಿಗೆ ಭಾಗವಹಿಸಿದ್ದವರ ಉತ್ಸಾಹ ಕಡಿಮೆಯಾಗಿತ್ತು.
ಯೋಗದ ನಿಜವಾದ ಉದ್ದೇಶ ಈ ಎಲ್ಲಾ ಅವ್ಯವಸ್ಥೆಯ ಮಧ್ಯೆ ಮರೆಯಾಗಿ ಹೋಯಿತು. ರಾಜಕೀಯ ನಾಯಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಯೋಗ ದಿನಾಚರಣೆಯ ಮಹತ್ವವನ್ನು ಮರೆತಿದ್ದು ದುರದೃಷ್ಟಕರ.
-ಡಾ. ಅರುಣಾ ಆದರ್ಶ್





