ನವೀನ್‌ಕುಮಾರ್ ಪಿರಿಯಾಪಟ್ಟಣ
ಜಿಲ್ಲೆಯ ಗಡಿಭಾಗದ ಪಿರಿಯಾಪಟ್ಟಣ ತಾಲ್ಲೂಕು ಆಡಳಿತ, ಪುರಸಭೆಯಿಂದ ಮುನ್ನೆಚ್ಚರಿಕೆ ಕ್ರಮ
ಪಿರಿಯಾಪಟ್ಟಣ: ಜಿಲ್ಲೆಯ ಗಡಿಭಾಗವಾದ ಪಿರಿಯಾಪಟ್ಟಣದಲ್ಲಿ ಕಾವೇರಿ ನದಿ ಪ್ರವಾಹ ಜೊತೆಗೆ ಪಟ್ಟಣದಲ್ಲಿ ಅತಿಯಾದ ಮಳೆಯಿಂದ ಸಾರ್ವಜನಿಕರು ಪರದಾಡುವುದನ್ನು ತಪ್ಪಿಸಲು ತಾಲ್ಲೂಕು ಆಡಳಿತ ಮತ್ತು ಪುರಸಭೆ ಸಜ್ಜಾಗಿವೆ.
ಜಿಲ್ಲೆಯ ಗಡಿಭಾಗದಲ್ಲಿ ಮಳೆಗಾಲದಲ್ಲಿ ಕಾವೇರಿ ನದಿ ಯಲ್ಲಿ ಪ್ರವಾಹ ಉಂಟಾಗುತ್ತಿರುತ್ತದೆ. ಹಲವು ವರ್ಷಗಳಿಂದ ಹೆಚ್ಚಿನ ಮಳೆಯಾಗಿ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ತುಂಬಿ ಹರಿಯುವುದರಿಂದ ಸೇತುವೆ ಸುತ್ತ ಮುತ್ತಲೂ ಇರುವ ಕೊಪ್ಪ, ಮತ್ತಿತರ ಗ್ರಾಮ ಗಳು ಜಲಾವೃತವಾಗುತ್ತವೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಸಕಲ ರೀತಿಯಲ್ಲಿಯೂ ಪ್ರವಾಹ ಸ್ಥಿತಿ ಎದುರಿಸಲು ಸಜ್ಜಾಗಿದ್ದು ಕಾವೇರಿ ನದಿ ಪಾತ್ರದಲ್ಲಿರುವ ಮನೆಗಳಿಗೆ ಮುನ್ನೆಚ್ಚರಿಕೆ ಯಾಗಿ ಪಂಚಾಯಿತಿಗಳ ಜೊತೆಗೂಡಿ ಮಾಹಿತಿ ನೀಡಲಾಗುತ್ತಿದೆ.
ಈಗಾಗಲೇ ಕಾವೇರಿ ನದಿ ಪಾತ್ರದ ಮೇಲ್ಸೇತುವೆಗಳು, ಕಣಿವೆ ಬಳಿಯ ಚಿಕ್ಕಕಮರವಳ್ಳಿ ತೂಗುಸೇತುವೆ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬ್ಯಾರಿಕೇಡ್ ಅಳವಡಿಸಲಾಗಿದೆ.
ಪುರಸಭೆಯಲ್ಲಿಯೂ ಅಲರ್ಟ್: ಪಿರಿಯಾಪಟ್ಟಣದಲ್ಲಿ ಮಳೆ ಹೆಚ್ಚಾಯಿತೆಂದರೆ ಪಟ್ಟಣದ ಕೆಲವು ಬಡಾವಣೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಇದನ್ನು ತಡೆಗಟ್ಟಲು ಈಗಾಗಲೇ ಪುರಸಭೆ ವತಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಟ್ಟದಪುರ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಪ್ರತಿ ವರ್ಷ ನೀರು ನಿಂತು ತೊಂದರೆ ಉಂಟಾಗುತ್ತದೆ.
ಇದನ್ನು ತಡೆಗಟ್ಟಲು ಜೆಸಿಬಿ ಮೂಲಕ ಚರಂಡಿಗಳಲ್ಲಿ ಮಣ್ಣು ತೆಗೆಯುವ ಕೆಲಸ ಮಾಡಲಾಗಿದ್ದು, ಚರಂಡಿ ಸ್ವಚ್ಛಗೊಳಿಸಲಾಗಿದೆ. ಛತ್ರದ ಬೀದಿಯಲ್ಲಿ ಮನೆಗೆ ನೀರು ನುಗ್ಗುವ ಸ್ಥಳಗಳಲ್ಲಿ ಕೆರೆಕೋಡಿಯ ಚರಂಡಿ ಅಭಿವೃದ್ಧಿ ಕೆಲಸ ಮಾಡಿಸಲಾಗಿದೆ.
ದೊಡ್ಡಕೆರೆಯಿಂದ ಅರಸನಕೆರೆಯವರೆಗೆ ಇರುವ ರಾಜಕಾಲುವೆ ಸ್ವಚ್ಛಗೊಳಿಸಲು ಎರಡು ಹಂತದಲ್ಲಿ ಅನುದಾನ ಬಿಡುಗಡೆಯಾಗಿದ್ದು, ಬೆಟ್ಟದಪುರ ರಸ್ತೆಯಿಂದ ಅರಸನಕೆರೆಯವರೆಗೆ ೧ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಟೆಂಡರ್ ಕರೆಯಲಾಗಿದೆ. ಬೆಟ್ಟದಪುರ ಸರ್ಕಲ್ ಬಳಿ ವದ್ಲಿಯಿಂದ ಚಿಕ್ಕಕೆರೆಯವರೆಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ೨ ಕೋಟಿ ರೂ. ಬಿಡುಗಡೆಗೊಳಿಸಿ ರಾಜಕಾಲುವೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ೭೫ ಲಕ್ಷ ರೂ. ವೆಚ್ಚದಲ್ಲಿ ಕೃಷ್ಣಾಪುರ ಬಳಿ ತಾವರೆಕೆರೆ ಏರಿ ಅಭಿವೃದ್ಧಿಪಡಿಸುವ ಕೆಲಸವಾಗುತ್ತಿದೆ. ಪಟ್ಟಣದಲ್ಲಿ ಬಡಾವಣೆಗೆ ನೀರು ನುಗ್ಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
” ತಾಲ್ಲೂಕಿನ ಹಾರನಹಳ್ಳಿ ವ್ಯಾಪ್ತಿಯ ಕೊಪ್ಪ, ದೊಡ್ಡಕಮರವಳ್ಳಿ, ಆವರ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈ ಹಿಂದೆ ಪ್ರವಾಹ ಕಂಡು ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪಂಚಾಯಿತಿಗಳ ಮೂಲಕ ಜನರಿಗೆ ಮಾಹಿತಿ ಕೊಡಲಾಗುತ್ತಿದೆ. ಕಾವೇರಿನದಿ ಪಾತ್ರದ ಮೇಲ್ಸೇತುವೆ, ತೂಗುಸೇತುವೆ ಬಳಿ ಪೊಲೀಸ್‌ಇಲಾಖೆ ವತಿಯಿಂದ ಬ್ಯಾರಿಕೇಡ್ ಅಳವಡಿಸಲಾಗಿದೆ. ಈವರೆಗೆ ೩೦ಕ್ಕೂ ಹೆಚ್ಚು ಮನೆಗಳ ಹಾನಿ ಪ್ರಕರಣಗಳು ದಾಖಲಾಗಿವೆ. ಮನೆಗಳ ಹಾನಿ ಪ್ರಮಾಣ ಗುರುತಿಸಿ ಎನ್‌ಡಿಆರ್‌ಎಫ್ ಮತ್ತು ಎಸ್‌ಟಿಆರ್‌ಎಫ್ ಮಾರ್ಗದರ್ಶಿಯಂತೆ ಸಂತ್ರಸ್ತ ಕುಟುಂಬಸ್ಥರಿಗೆ ಪರಿಹಾರ ವಿತರಿಸಲಾಗುವುದು.”
-ಜೆ.ನಿಸರ್ಗಪ್ರಿಯ, ತಹಸಿಲ್ದಾರ್, ಪಿರಿಯಾಪಟ್ಟಣ
ಬೆಟ್ಟದಪುರ ರಸ್ತೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ರಸ್ತೆಯ ಇಕ್ಕೆಲಗಳನ್ನು ಅಭಿವೃದ್ಧಿಪಡಿಸುವಂತೆ ಕೆಆರ್‌ಡಿಸಿಎಲ್‌ಗೆ ಅನೇಕ ಬಾರಿ ಸೂಚಿಸಿದ್ದು, ಇದಕ್ಕಾಗಿ ಹಣ ಮಂಜೂರಾದರೂ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಈ ಬಗ್ಗೆ ಸಚಿವರಿಗೂ ದೂರು ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಮಗಾರಿ ನಡೆಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ.”
-ಪ್ರಕಾಶ್‌ಸಿಂಗ್, ಪುರಸಭೆ ಅಧ್ಯಕ್ಷ
” ಮಳೆ ನೀರು ನುಗ್ಗುವ ಪ್ರದೇಶಗಳಲ್ಲಿ ಪುರಸಭೆ ವತಿಯಿಂದ ಸ್ವಚ್ಛತಾ ಕಾರ್ಯ ಮತ್ತು ಪ್ರಮುಖ ಚರಂಡಿ, ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ಮಳೆಯ ನೀರು ನುಗ್ಗಿ ತೊಂದರೆ ಉಂಟಾದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.”
-ಕೊಟ್ಟುಕತ್ತೀರ ಮುತ್ತಪ್ಪ, ಪುರಸಭೆ ಮುಖ್ಯಾಧಿಕಾರಿ





