ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಓಂಕಾರ್ ವಲಯದ ದೇಶಿಪುರ ಕಾಲೋನಿ ಯ ಜೇನು ಕುರುಬ ಜನಾಂಗದ ಪುಟ್ಟಮ್ಮ( 40) ಬಿನ್ ಲೇ.ಮಾರ ಎಂಬ ವಿಧವೆ ಮಹಿಳೆ ತನ್ನ ಕಾಚಿನ ಸಮೀಪದ ತನ್ನ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುವ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿ ಪುಟ್ಟಮ್ಮ ಎಂಬ ಮಹಿಳೆಯನ್ನು ಕೊಂದುಹಾಕಿರುವ ಘಟನೆ ನಡೆದಿದೆ.
ಪುಟ್ಟಮ್ಮ ಗಂಡ ತೀರಿಕೊಂಡಿದ್ದು ತನ್ನ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದು ಪ್ರತಿನಿತ್ಯದಂತೆ ಹಸು ಕುರಿ ಮೇಯಿಸಲು ತೆರಳಿದ್ದಾಳೆ ಈ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿದ್ದು ಪುಟ್ಟಮ್ಮನ ಎದೆ ಕತ್ತು ಗಾಯಗೊಳಿಸಿ ಕೊಂದುಹಾಕಿದೆ.
ಅಕ್ಕಪಕ್ಕದ ಜನರು ಕೂಗಿಕೊಂಡಿದ್ದರಿಂದ ಹುಲಿ ಮೃತ ಪುಟ್ಟಮ್ಮನನ್ನು ಬಿಟ್ಟು ಓಡಿಹೋಗಿದೆ ಎನ್ನಲಾಗಿದ್ದು ಈ ಮೊದಲೇ ತಂದೆ ತೀರಿಕೊಂಡಿದ್ದು ಈಗ ತಾಯಿಯೂ ಮೃತಪಟ್ಟ ಹಿನ್ನಲು ಪುಟ್ಟಮ್ಮನ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ, ಹಿರಿಯ ಮಗ ಪಿಯು ಓದಿದ್ದು ಕಾಲೇಜು ಬಿಟ್ಟಿದ್ದಾನೆ, ಕಿರಿಯ ಮಗ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತಿದ್ದಾನೆ ಮಗನಿಗೆ ಕೆಲಸ ಮತ್ತು ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಗುಂಡ್ಲುಪೇಟೆ ಉಪ ವಿಭಾಗದ ಎಸಿಎಫ್ ಸುರೇಶ್ ಕುಮಾರ್, ಓಂಕಾರ್ ವಲತದ ಆರ್ ಎಫ್ ಓ ಸತೀಶ್ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿದರು, ಮೃತ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ಪರಿಹಾರ ನೀಡುವುದಾಗಿ ಓಂಕಾರ್ ವಲಯಾಧಿಕಾರಿ ಸತೀಶ್ ತಿಳಿಸಿದರು.





