Mysore
18
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಸೆಸ್ಕ್‌ ದುರಸ್ತಿ ಕಾರ್ಯ ಬಹುತೇಕ ಪೂರ್ಣ

ಮಹಾಮಳೆಗೆ ೧,೪೦೦ಕ್ಕೂ ಅಽಕ ಕಂಬಗಳು, ೧೧ ವಿದ್ಯುತ್ ಪರಿವರ್ತಕ, ೧೩.೧೦೫ ಕಿ.ಮೀ. ವಾಹಕಗಳಿಗೆ ಹಾನಿ

ನವೀನ್ ಡಿಸೋಜ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮೇ ಕೊನೆಯಿಂದಲೇ ಆರಂಭವಾದ ವರುಣನ ಆರ್ಭಟಕ್ಕೆ ಸೆಸ್ಕ್ ತತ್ತರಿಸಿದ್ದು, ಸುಮಾರು ೧,೪೦೦ ಕಂಬಗಳು ಹಾನಿಗೊಳಗಾಗಿದ್ದು, ಭಾರೀ ನಷ್ಟ ಸಂಭವಿಸಿದೆ. ಈ ಬಾರಿ ಅವಧಿಗೂ ಮುನ್ನವೇ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಭಾರೀ ಗಾಳಿ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ.

ತೀವ್ರ ಮಳೆ-ಗಾಳಿಯಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ೧,೪೪೨ ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಅಲ್ಲದೆ, ೧೧ ವಿದ್ಯುತ್ ಪರಿವರ್ತಕಗಳು ಹಾಗೂ ೧೩.೧೦೫ ಕಿ.ಮೀ. ವಾಹಕಗಳು ಕೂಡ ಹಾನಿಗೊಳಗಾಗಿವೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಸೆಸ್ಕ್ ಸಿಬ್ಬಂದಿ ಮಳೆಯ ನಡುವೆಯೂ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ, ಈ ಬಾರಿ ಮೇ ಕೊನೆಯಲ್ಲಿಯೇ ಸುರಿದ ಧಾರಾಕಾರ ಮಳೆಯಿಂದ ಸೆಸ್ಕ್ ಸಿಬ್ಬಂದಿ ಪರದಾಡುವಂತಾಯಿತು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಸಿಬ್ಬಂದಿಗೆ ದೂರುಗಳ ಸುರಿಮಳೆಯೇ ಬಂದಿತ್ತು. ರಾತ್ರಿ ಹಗಲೆನ್ನದೆ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸುಮಾರು ೧೦ ದಿನಗಳ ಕಾಲ ನಿರಂತರವಾಗಿ ಸುರಿದ ಮಳೆ ಹಾಗೂ ವಿಪರೀತ ಗಾಳಿಯಿಂದ ಕಂಬಗಳ ಬದಲಾವಣೆ ಕಾಮಗಾರಿ ಹಾಗೂ ಮಾರ್ಗದ ವಿಫಲತೆಯನ್ನು ಸರಿಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಮಳೆ-ಗಾಳಿಯಿಂದ ಪದೇ ಪದೇ ವಿದ್ಯುತ್ ಜಾಲಕ್ಕೆ ಹಾನಿ ಉಂಟಾಗುತ್ತಿರುವುದರಿಂದ ವಿದ್ಯುತ್ ವ್ಯತ್ಯಯವಾಗುತ್ತಿದ್ದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಸದ್ಯ ಈಗ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಬಿಸಿಲಿನ ವಾತಾವರಣ ಇರುವುದರಿಂದ ಕಾಮಗಾರಿ ಚುರುಕುಗೊಂಡಿದೆ. ಈಗಾಗಲೇ ನೆಲಕಚ್ಚಿದ್ದ ಕಂಬಗಳನ್ನು ಹಾಗೂ ಪರಿವರ್ತಕಗಳನ್ನು ದುರಸ್ತಿಗೊಳಿಸಿ ಬದಲಾಯಿಸಲಾಗಿದೆ. ದೈನಂದಿನ ಚಟುವಟಿಕೆಯಲ್ಲಿ ಸರಾಸರಿ ೧೦೦ ಕಂಬಗಳ ಬದಲಾವಣೆಯ ಕಾಮಗಾರಿಯನ್ನು ಕೈಗೊಂಡ ಪರಿಣಾಮವಾಗಿ ಸಮಸ್ಯೆ ಬಹುತೇಕ ಬಗೆಹರಿದಿದೆ. ಆದರೆ, ಜಿಲ್ಲೆಯಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ವರುಣನ ಆರ್ಭಟ ಹೆಚ್ಚಾಗಲಿದ್ದು, ಮತ್ತೆ ಯಾವ ರೀತಿ ಪರಿಸ್ಥಿತಿ ಉಂಟಾಗಲಿದೆ ಎಂಬ ಆತಂಕದ ವಾತಾವರಣ ಮನೆ ಮಾಡಿದೆ.

ಅಗತ್ಯ ಸಿಬ್ಬಂದಿಗಳ ನೇಮಕ: 

ವಿದ್ಯುತ್ ಜಾಲದ ದುರಸ್ತಿ ಕಾರ್ಯವನ್ನು ಚುರುಕಗೊಳಿಸಲು, ವಿದ್ಯುತ್ ಜಾಲವನ್ನು ಪುನಃ ಸ್ಥಾಪಿಸಲು ಅಗತ್ಯ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲಾಗಿದೆ. ಮಡಿಕೇರಿ ವಿಭಾಗದ ೨೩೧ ಸಿಬ್ಬಂದಿ, ಇತರೆ ವಿಭಾಗಗಳಿಂದ ೫೨ ಮಂದಿ ಸಿಬ್ಬಂದಿ ಹಾಗೂ ಹೊರಗುತ್ತಿಗೆಯಿಂದ ೭೫ ಸಂಖ್ಯೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇವರ ಜೊತೆ ೧೨೪ ಮಂದಿ ವಿದ್ಯುತ್ ಗುತ್ತಿಗೆದಾರ ಸಿಬ್ಬಂದಿಗಳು ವಿವಿಧ ಸಲಕರಣೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.

” ಜಿಲ್ಲೆಯಾದ್ಯಂತ ಮಳೆ ಗಾಳಿಯಿಂದಾಗಿ ಶಾಖಾಧಿಕಾರಿಗಳು ಹಾಗೂ ಸಿಬ್ಬಂದಿ ವಿದ್ಯುತ್ ಜಾಲದ ಮರು ಸ್ಥಾಪನೆಯಲ್ಲಿ ನಿರತರಾಗಿದ್ದಾರೆ. ಶಾಖಾಧಿಕಾರಿಗಳು ಬ್ರೇಕ್‌ಡೌನ್ ನಿರ್ವಹಣೆ ಕಾಮಗಾರಿಗಳಲ್ಲಿ ನಿರತರಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಗ್ರಾಹಕರ ದೂರುಗಳನ್ನು ದಾಖಲಿಸಿ ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ವಿಭಾಗಕ್ಕೆ ಪ್ರತ್ಯೇಕವಾಗಿ ಟೋಲ್ ಫ್ರೀ ಸಂಖ್ಯೆ ೧೮೦೦-೫೯೯-೦೦೬೧ ನೀಡಲಾಗಿದ್ದು, ವಿದ್ಯುತ್ ಜಾಲದ ಯಾವುದೇ ಸಮಸ್ಯೆ ಇದ್ದಲ್ಲಿ ಗ್ರಾಹಕರು ಈ ಸಂಖ್ಯೆಯನ್ನು ಸಂಪರ್ಕಿಸಬಹುದು.”

ಎಂ.ರಾಮಚಂದ್ರ, ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್

Tags:
error: Content is protected !!