Mysore
21
overcast clouds

Social Media

ಗುರುವಾರ, 01 ಜನವರಿ 2026
Light
Dark

ಓದುಗರ ಪತ್ರ: ಐಪಿಎಲ್ ಫೈನಲ್ ಸಂಭ್ರಮದ ಕ್ಷಣವನ್ನು ಮರೆಯುವುದುಂಟೇ…

ಓದುಗರ ಪತ್ರ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ೨೦೨೫ರ ಫೈನಲ್ ಪಂದ್ಯದ ರಣರೋಚಕ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ೬ ರನ್‌ಗಳಿಂದ ಆರ್‌ಸಿಬಿ ತಂಡ ವಿಜಯ ಪತಾಕೆ ಹಾರಿಸಿದೆ. ೧೮ ವರ್ಷಗಳು ಶಬರಿಯಂತೆ ಕಾದು ಕನಸನ್ನು ನನಸು ಮಾಡಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ವಿರಾಟ್ ಕೊಹ್ಲಿ ಅವರ ತಾಳ್ಮೆಯ ಆಟ ಹಾಗೂ ಜಿತೇಶ್ ಶರ್ಮಾ ಅವರ ಅದ್ಭುತ ಬ್ಯಾಟಿಂಗ್ ತಂಡಕ್ಕೆ ನೆರವಾಯಿತು. ಹಾಗೆಯೇ ಬೌಲಿಂಗ್ ವಿಭಾಗದಲ್ಲೂ ಆರ್‌ಸಿಬಿ ತಂಡವು ಮಿಂಚಿನ ದಾಳಿಯನ್ನು ನಡೆಸಿ ಎದುರಾಳಿಗಳನ್ನು ಕಟ್ಟಿ ಹಾಕಿತು. ದಿಗ್ಗಜ ಆಟಗಾರ ಕೊಹ್ಲಿ ೧೮ ವರ್ಷಗಳಿಂದ ತಂಡವನ್ನು ಬದಲಿಸದೇ ಕಪ್‌ಗೋಸ್ಕರ ಹೋರಾಟ ಮಾಡಿದ್ದಾರೆ. ಪ್ರತಿ ಮ್ಯಾಚ್ ಗೆದ್ದಾಗಲೂ ಕ್ರೀಡಾಂಗಣದ ತುಂಬಾ ಓಡಾಡಿ ಸಂಭ್ರಮಿಸುತ್ತಿದ್ದ ಕೊಹ್ಲಿ ಫೈನಲ್ ಮ್ಯಾಚ್‌ನಲ್ಲಿ ವಿಜಯಲಕ್ಷ್ಮಿ ಒಲಿದಾಗ ಪುಟ್ಟ ಮಗುವಿನಂತೆ ಆನಂದ ಬಾಷ್ಪವನ್ನು ಸುರಿಸುತ್ತಾ ಬಿಕ್ಕಿಬಿಕ್ಕಿ ಅಳತೊಡಗಿದರು. ಭೂಮಿತಾಯಿಯತ್ತ ಕೆಲವು ಕ್ಷಣ ಮುತ್ತಿಕ್ಕಿದರು. ಆಗ ಇಡೀ ಕ್ರೀಡಾಂಗಣವೇ ಮೌನ ಹೊಕ್ಕಿತ್ತು. ಒಟ್ಟಿನಲ್ಲಿ ಕಪ್ ನಮ್ದೇ ಎನ್ನುವುದಕ್ಕೆ ಅರ್ಥ ಸಿಕ್ಕಂತಾಯಿತು. ಕನ್ನಡಿಗರ ಕನಸನ್ನು ನನಸು ಮಾಡಿದ ಆರ್‌ಸಿಬಿ ತಂಡಕ್ಕೆ ಪ್ರೀತಿಪೂರ್ವಕ ಅಭಿನಂದನೆಗಳು.

-ಎನ್.ಪಿ. ಪರಶಿವಮೂರ್ತಿ, ನಂಜೀಪುರ, ಸರಗೂರು ತಾ

 

Tags:
error: Content is protected !!