Mysore
21
overcast clouds

Social Media

ಶನಿವಾರ, 03 ಜನವರಿ 2026
Light
Dark

ಮ.ಬೆಟ್ಟದಲ್ಲಿ ತಿರುಪತಿ ಮಾದರಿಯಲ್ಲಿ ಕ್ಯೂ ಲೈನ್ ನಿರ್ಮಾಣ

ಮಹಾದೇಶ್ ಎಂ.ಗೌಡ

೪೫.೮೫ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ; ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ 

ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ತಿರುಪತಿ ಮಾದರಿಯಲ್ಲಿ ದೇವರ ದರ್ಶನಕ್ಕೆ ಸರತಿ ಸಾಲು (ಕ್ಯೂ ಲೈನ್) ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದ್ದು ಮೂರು ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ, ಯುಗಾದಿ, ಮಹಾಲಯ ಅಮಾವಾಸ್ಯೆ, ದೀಪಾವಳಿ, ಕಾರ್ತಿಕ ಮಾಸ, ಪ್ರತಿ ತಿಂಗಳ ಅಮಾವಾಸ್ಯೆ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ವಾಹನ, ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ರಜಾ ಸೇವೆ ಸೇರಿದಂತೆ ವಿವಿಧ ಉತ್ಸವಾದಿ ಸೇವೆ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ.

ಶಕ್ತಿ ಯೋಜನೆ ಜಾರಿಯಾದ ನಂತರ ೨ ವರ್ಷಗಳಿಂದ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ವೇಳೆ ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದೇ ಒಂದು ದೊಡ್ಡ ಸವಾಲಾಗಿದೆ.

ಅದರಲ್ಲೂ ಅನಾರೋಗ್ಯಕ್ಕೆ ಒಳಗಾದವರು ಮಧುಮೇಹಿಗಳು, ಮಕ್ಕಳಿಗೆ ಹೆಚ್ಚಿನ ತೊಂದರೆ ಉಂಟಾಗುತ್ತಿದೆ. ಕೆಲವರು ೫೦೦ ರೂ. ಟಿಕೆಟ್ ಪಡೆದು ವಿಶೇಷ ಕೌಂಟರ್ ಮೂಲಕ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಆದ್ದರಿಂದ ಎಲ್ಲರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ಯೂ ಲೈನ್ ನಿರ್ಮಾಣ ಮಾಡಲಾಗುತ್ತಿದೆ.

ಕ್ಯೂಲೈನ್‌ನಲ್ಲಿ ಅಗತ್ಯ ಸೌಲಭ್ಯ: ಭಕ್ತಾದಿಗಳು ದೇವರ ದರ್ಶನ ಪಡೆಯಲು ಪ್ರಸ್ತುತ ನಿರ್ಮಾಣವಾಗುತ್ತಿರುವ ಸರತಿ ಸಾಲಿನ ಸಂಕೀರ್ಣದಿಂದ ದೇಗುಲದ ಆಲಂಬಾಡಿ ದ್ವಾರದವರೆಗೆ ೬ ಮೀಟರ್ ಸುರಂಗ ಮಾರ್ಗ ಹಾಗೂ ಮೆಟ್ಟಿಲುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಗಣಕೀಕೃತ ಎಲ್‌ಇಡಿ ಪರದೆಯ ಮೇಲೆ ಉಪಯುಕ್ತ ಮಾಹಿತಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ನೆಲ ಮಹಡಿ ಹಾಗೂ ಮೊದಲ ಅಂತಸ್ತಿನಲ್ಲಿ ಒಂದು ಬ್ಲಾಕ್‌ನಲ್ಲಿ ೫೦೦ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದ್ದು ಒಟ್ಟು ೮ ಬ್ಲಾಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಬ್ಲಾಕ್ ನಲ್ಲಿಯೂ ಮಹಿಳೆಯರು, ಪುರುಷರು, ಅಂಗವಿಕಲರಿಗೆ ಪ್ರತ್ಯೇಕ ಶೌಚಗೃಹ, ಶುದ್ಧ ಕುಡಿಯುವ ನೀರು, ಫ್ಯಾನ್ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಹಾಗಾಗಿ ಈ ಯೋಜನೆ ಪೂರ್ಣಗೊಂಡರೆ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳು ಯಾವುದೇ ತೊಂದರೆ ಇಲ್ಲದೆ ದೇವರ ದರ್ಶನ ಪಡೆಯಲು ಅನುಕೂಲವಾಗಲಿದೆ.

ಆಗಸ್ಟ್‌ನಲ್ಲಿ ಪೂರ್ಣಗೊಳ್ಳುವ ವಿಶ್ವಾಸ: ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಽಕಾರದ ವತಿಯಿಂದ ಭಕ್ತರಿಗೆ ದೇವರ ದರ್ಶನ ಪಡೆಯಲು ಅನು ಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೦೨೧ರ ಆಗಸ್ಟ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ರಾರಂಭದಲ್ಲಿ ೨೪ ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ ಭಕ್ತಾದಿಗಳಿಗೆ ಹೆಚ್ಚಿನ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪುನರ್ ಕ್ರಿಯಾಯೋಜನೆ ತಯಾರಿಸಿ ೪೫.೮೫ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಈಗಾಗಲೇ ಕಾಮಗಾರಿ ಶೇ.೭೦ರಷ್ಟು ಪೂರ್ಣಗೊಂಡಿದ್ದು ಆಗಸ್ಟ್ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಎಇ ಮಹೇಶ್ ತಿಳಿಸಿದ್ದಾರೆ.

ಚಿನ್ನದ ರಥೋತ್ಸವಕ್ಕೆ ತೊಂದರೆ ಇಲ್ಲ: ಬೆಟ್ಟದ ಹೊರ ಆವರಣದಲ್ಲಿ ಕ್ಯೂಲೈನ್ ಕಾಮಗಾರಿಯ ಅಂಡರ್ ಪಾಸ್ ಮಾಡುವುದರಿಂದ ಚಿನ್ನದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ, ಮಹಾ ರಥೋತ್ಸವವು ಮಾಮೂಲಿನಂತೆ ಜರುಗಲಿದೆ.

ಹೊಸ ವಿನ್ಯಾಸ : ಮ.ಬೆಟ್ಟದ ದೇವಸ್ಥಾನದ ಸುತ್ತಲೂ ಭಕ್ತಾದಿಗಳಿಗೆ ಸರತಿ ಸಾಲು ನಿರ್ಮಾಣ ಮಾಡಿರುವುದರಿಂದ ದೇವಸ್ಥಾನ ಅಷ್ಟು ಚೆನ್ನಾಗಿ ಕಾಣುತ್ತಿಲ್ಲ. ಕ್ಯೂ ಲೈನ್ ಕಾಮಗಾರಿ ಪೂರ್ಣಗೊಂಡರೆ ದೇವಸ್ಥಾನದ ಸುತ್ತಲೂ ಇರುವ ಕಬ್ಬಿಣದ ಗ್ರಿಲ್‌ಗಳನ್ನು ತೆರವುಗೊಳಿಸಿ ದೇವಸ್ಥಾನಕ್ಕೆ ಹೊಸ ರೂಪ ನೀಡಿದರೆ ರಾಜ್ಯದಲ್ಲಿಯೇ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಲಿದೆ.

” ಮ.ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ೪೫ ಕೋಟಿ ರೂ. ವೆಚ್ಚದಲ್ಲಿ ಸರತಿ ಸಾಲು ನಿರ್ಮಾಣ ಮಾಡಲಾಗುತ್ತಿದ್ದು ಎಂಟು ಬ್ಲಾಕ್ಗಳನ್ನು ನಿರ್ಮಾಣ ಮಾಡಲಾಗಿದೆ. ಈ ಬ್ಲಾಕ್ ಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಇರುವುದರಿಂದ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.”

ಮಹೇಶ್, ಎಇ, ಲೋಕೋಪಯೋಗಿ ಇಲಾಖೆ

” ಮ.ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಬಡ ಭಕ್ತಾದಿಗಳ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿಕಾರಯ್ಯ, ಬಿಲ್ಲಯ್ಯ, ಶಿವ ದರ್ಶಿನಿ, ಸೂರ್ಯ ದರ್ಶಿನಿ, ಸಂಕಮ್ಮ ನಿಲಯ ದುರಸ್ತಿ ಕಾಮಗಾರಿಗೆ ಕ್ರಿಯಾ ಯೋಜನೆ ಮಾಡಿಕೊಳ್ಳಲಾಗಿದ್ದು ಅನುಮೋದನೆಯಾದ ನಂತರ ಕಾಮಗಾರಿ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ.”

ಎ.ಇ.ರಘು, ಕಾರ್ಯದರ್ಶಿಗಳು, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

Tags:
error: Content is protected !!