ಕೆಪಿಸಿಎಲ್ ವತಿಯಿಂದ ಅಂಬೇಡ್ಕರ್ ಜಯಂತಿ: ಹೆಚ್ಚು ಅಂಕ ಗಳಿಸಿದ ಎಸ್ಸಿ, ಎಸ್ಟಿ ನೌಕರರ ಮಕ್ಕಳಿಗೆ ಚಿನ್ನದ ಪದಕ
ಬೆಂಗಳೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಾದ ಮುಂದುವರಿಯಬೇಕೆಂದರೆ ಭೂ ರಹಿತರಿಗೆ ಭೂಮಿ ವಿತರಣೆ ಮಾಡುವ ಹೋರಾಟವನ್ನು ಮತ್ತೆ ಕಟ್ಟಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಕರನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಹಾಗೂ ನಿಗಮದ ಪರಿಶಿಷ್ಟ ಜಾತಿ ಮತ್ತು ಪ. ವರ್ಗದ ನೌಕರರ ಸಂಘದ ಆಶ್ರಯದಲ್ಲಿಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಭೂ ರಹಿತರಿಗೆ ಭೂಮಿ ನೀಡುವ ಕೆಲಸ ಆಗಿತ್ತಾದರೂ ಮತ್ತೆ ಜಮನು ಕ್ರೋಢೀಕರಣವಾಗುತ್ತಿಗೆ. ಇದು ಅಂಬೇಡ್ಕರ್ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಹೀಗಾಗಿ ಮತ್ತೆ ಭೂ ರಹಿತರಿಗೆ ಭೂಮಿ ನೀಡುವ ಹೋರಾಟವನ್ನು ಕಟ್ಟುವ ಅನಿವಾರ್ಯತೆ ಇದೆ.ಆ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಕೆಲಸವಾಗಬೇಕಿದೆ ಎಂದರು.
ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನ ಪೂರ್ಣ ಭಾರತೀಯ ಸಂವಿಧಾನ ಆಲ್ಲ ಎಂಬ ಕೂಗು ಈಗ ಬಲವಾಗುತ್ತಿದೆ. ಆ ಕೂಗು ಹಾಕುತ್ತಿರುವವರು ದೇಶದಲ್ಲಿ ಮನು ಸ್ಮೃತಿಯನ್ನು ಮತ್ತೆ ಹೇರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ವಿಶ್ವದಲ್ಲಿ ಎಲ್ಲರನ್ನೂ ಸಮನಾಗಿ ಕಾಣುವ ಗ್ರಂಥವೆಂದರೆ ಅದು ಭಾರತೀಯ ಸಂವಿಧಾನ ಮಾತ್ರ. ಹೀಗಾಗಿ ಈ ಸಂವಿಧಾನವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಎಲ್ಲರೂ ಬ್ರಿಟೀಷರಿಂದ ರಾಜಕೀಯ ಬಿಡುಗಡೆಯ ಬಗ್ಗೆ ಮಾತ್ರ ಯೋಚಿಸಿದ್ದರು. ಆದರೆ, ಅಂಬೇಡ್ಕರ್ ಅವರು ರಾಜೀಯ ಬಿಡುಡೆ ಜತೆಗೆ ಆರ್ಥಿಕ ಬಿಡುಗಡೆಯೂ ಆಗಹಬೇಕಾಗಿದೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ ಏಕೈಕ ವ್ಯಕ್ತಿಯಾಗಿದ್ದಾರೆ. ಜತೆಗೆ ಸಾಮಾಜಿಕ ಭಾರತೀಯ ಸಮಾಜದ ಬಗ್ಗ ವಿಶ್ಲೇಷಣೆ ಮಾಡಿದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಖ್ಯಾತ ನೇತ್ರ ತಜ್ಞ ಡಾ.ಎಚ್.ಆರ್.ಸುರೇಂದ್ರ ಅವರು ಅಂಬೇಡ್ಕರ್ ಅವರು ಯಾವತ್ತೂ ಭಾರತಕ್ಕೆ ಏಕೆ ಪ್ರಸ್ತುತವಾಗಿರುತ್ತಾರೆ ಮತ್ತು ಅವರು ರಚಿಸಿದ ಸಂವಿಧಾನ ಏಕೆ ಶ್ರೇಷ್ಠ ಎಂಬ ಬಗ್ಗೆ ವಿವರಿಸಿದರು.
ಎಸ್ ಎಸ್ ಎಲ್ ಸಿ ಮತ್ತು ಪಿಯಸಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಕೆಪಿಸಿಎಲ್ ನ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಮಕ್ಕಳಿಗೆ ಚಿನ್ನದ ಪದಕಗಳನ್ನು ನೀಡಿ ಸತ್ಕರಿಸಲಾಯಿತು. ಕೆಪಿಸಿಎಲ್ ಮನವ ಸಂಪನ್ಮೂಲ ನಿರ್ದೇಶಕ ನಾಗರಾಜ ಸಿ., ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಆರ್.ಕೃಷ್ಣಮೂರ್ತಿ, ಪ್ರಧಾನ ವ್ಯವಸ್ಥಾಪಕರಾದ ಡಾ.ಆಶಾ, ನಿಗಮದ ಪರಿಶಿಷ್ಟ ಜಾತಿ ಮತ್ತು ಪ. ವರ್ಗದ ನೌಕರರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಭೀಮಯ್ಯ ನಾಯ್ಕ್, ಪ್ರಧಾನ ಕಾರ್ಯದರ್ಶಿ ಮಿರ್ಜಾ ಕುಮಾರ್, ಬೆಂಗಳೂರು ವಲಯದ ಅಧ್ಯಕ್ಷೆ ಶಿಲ್ಪಾ ಡಿ.ರಾಜು, ಕಾರ್ಯದರ್ಶಿ ಈರಪ್ಪ ಮತ್ತಿತರರು ಪಾಲ್ಗೊಂಡಿದ್ದರು.





