ಮೈಸೂರು: ನಾಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಲ್ಲರಿಗೂ ಅನ್ನದಾತ ಆಗಿದ್ದರು. ಈ ಹಿನ್ನೆಲೆಯಲ್ಲಿ ನಾಳೆ ಅವರ ಜಯಂತಿಯಿದೆ. ಹಾಗಾಗಿ ಪೌರ ಕಾರ್ಮಿಕರಿಗೆ ಒಂದು ತಿಂಗಳ ದಿನಸಿ ವಸ್ತುಗಳನ್ನು ನೀಡಲಾಗುತ್ತದೆ ಎಂದರು.
ಇನ್ನು ಆರ್‌ಸಿಬಿಗೆ ಈ ಸಲ ಕಪ್ ಗೆಲ್ಲುವ ಅವಕಾಶ ಹೆಚ್ಚಿದೆ. ನಾನು ಕೂಡ ಆರ್‌ಸಿಬಿ ಮ್ಯಾಚ್ ನೋಡುತ್ತೇನೆ. 4 ಬಾರಿ ಫೈನಲ್ ಹಂತಕ್ಕೆ ಬಂದು ಸೋತಿದ್ದಾರೆ. ಕಳೆದ ಬಾರಿ ಕೂಡ ಹತ್ತಿರದಲ್ಲಿ ಸೋತಿದ್ದರು. ಈ ಬಾರಿ ಕಪ್ ಗೆಲ್ಲುವ ಭರವಸೆಯಿದೆ ಎಂದರು.
ಇದನ್ನೂ ಓದಿ:- ಆರ್‌ಸಿಬಿ ತಂಡಕ್ಕೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ
ಇನ್ನು ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯೋರ್ವ ಅನುಚಿತ ವರ್ತನೆ ತೋರಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರತಿಮೆಗೆ ರಕ್ಷಣೆ ನೀಡಬೇಕು. ಪೊಲೀಸ್ ಕಮಿಷನರ್‌ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದೇವೆ. ಮೈಸೂರಿನಲ್ಲಿರುವ ಎಲ್ಲಾ ಪ್ರತಿಮೆಗಳಿಗೂ ರಕ್ಷಣೆ ನೀಡಬೇಕು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.





