Mysore
14
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಎಲೆತೋಟಕ್ಕೆ ಕೊಳಚೆ ನೀರು: ಕಂಗಾಲಾದ ನಾಗರಿಕರು!

ಪ್ರಶಾಂತ್ ಎಸ್.

ಎಂ.ಎಸ್.ಗುರುಪಾದಸ್ವಾಮಿ ರಸ್ತೆಯಲ್ಲಿ ಬಗೆಹರಿಯದ ಯುಜಿಡಿ, ರಾಜಕಾಲುವೆ

ಸಮಸ್ಯೆ; ದುರ್ನಾತದಿಂದ ಮೂಗುಮುಚ್ಚಿಕೊಂಡೇ ಓಡಾಡುವ ಸಾರ್ವಜನಿಕರು

ಮೈಸೂರು: ಒಳಚರಂಡಿ ಹಾಗೂ ರಾಜಕಾಲುವೆ ಅವ್ಯವಸ್ಥೆಯಿಂದಾಗಿ ಕೊಳಚೆ ನೀರು ಎಲೆ ತೋಟಕ್ಕೆ ಹರಿಯುತ್ತಿದ್ದು, ಸಾರ್ವಜನಿಕರು ಕಂಗಾಲಾಗಿದ್ದಾರೆ.

ನಗರದ ನಾಚನಹಳ್ಳಿ ಪಾಳ್ಯದ ಎಂ.ಎಸ್.ಗುರುಪಾದಸ್ವಾಮಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೀಳ್ಯದೆಲೆ ರೈತ ಸಂಘದ ನಾಮಫಲಕದ ಹತ್ತಿರ ಕೊಳಚೆ ನೀರು ಮುಂದೆ ಸಾಗದೇ ನಿಂತಲ್ಲೇ ನಿಂತು ಸಂಗ್ರಹವಾಗಿರುವುದರಿಂದ ದುರ್ನಾತ ಬೀರುತ್ತಿದೆ. ಅವೈಜ್ಞಾನಿಕ ಚರಂಡಿಗಳಿಂದ ಮೊದಲೇ ತ್ಯಾಜ್ಯ ನೀರು ಸರಾಗವಾಗಿ ಹರಿಯುವುದಿಲ್ಲ. ಇನ್ನು ಆಗಾಗ ಯುಜಿಡಿಯೂ ಕಟ್ಟಿಕೊಳ್ಳುತ್ತದೆ. ಈ ಕಾರಣಗಳಿಂದಾಗಿ ಕೊಳಚೆ ನೀರು ಉಕ್ಕಿ ರಸ್ತೆಯೇ ಮೇಲೆ ಹರಿಯುತ್ತದೆ. ಈ ದುರ್ನಾತದಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮೃತ್ಯುಕೂಪಗಳಾದ ರಾಜಕಾಲುವೆ: ಎಲೆ ತೋಟಕ್ಕೆ ಹೊಂದಿ ಕೊಂಡಂತಿರುವ ರಾಜಕಾಲುವೆಗಳು ರಸ್ತೆಗಿಂತ ನಾಲ್ಕೈದು ಇಂಚು ಕೆಳಗಿದ್ದರೆ ಕೆಲವು ಕಡೆಗಳಲ್ಲಿ ರಸ್ತೆಗಿಂತ ಒಂದು ಅಡಿಯಷ್ಟು ಮೇಲೆ ನಿರ್ಮಿಸಲಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ರಾಜಕಾಲುವೆ ಸರಿಪಡಿಸುವಂತೆ ಹಲವು ಬಾರಿ ಸಂಬಂಧಿಸಿದ ನಗರಪಾಲಿಕೆ ಅಽಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು.

ಇನ್ನು ನಗರದಲ್ಲಿ ಈಗಾಗಲೇ ಯುಜಿಡಿ ನೀರು ಸಂಸ್ಕರಿಸುವ ಘಟಕ ನಿರ್ಮಾಣವಾಗಿದ್ದು, ಈ ಘಟಕಗಳಲ್ಲಿ ಸಂಸ್ಕರಣೆಗೊಂಡ ನೀರನ್ನು ಎಲ್ಲಿಗೆ ಹರಿಸಲಾಗುತ್ತಿದೆ ಎಂಬುದರ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಇದರ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗೆ ತೆರಳಿ ಮನವಿ ಮಾಡಿದರೂ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಎಲೆ ತೋಟದ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

” ಯುಜಿಡಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಅದಕ್ಕೆ ಪರಿಹಾರವಾಗಿ ಹೂಳೆತ್ತುವ ಯಂತ್ರೋಪಕರಣಗಳನ್ನು ಖರೀದಿ ಮಾಡಲಿ ದ್ದೇವೆ. ದೂರುಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಒಳಚರಂಡಿ ಹಾಗೂ ರಾಜಕಾಲುವೆ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.”

-ಶೇಖ್ ತನ್ವೀರ್ ಆಸೀಫ್ ನಗರಪಾಲಿಕೆ ಆಯುಕ್ತರು

” ಯುಜಿಡಿ ಕಟ್ಟಿಕೊಳ್ಳುವಂತಹ ಜಾಗಗಳನ್ನು ಗುರುತಿಸಿ ನಗರಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸಬೇಕು. ಕಾಲುವೆಗಳು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ಎಲೆತೋಟಕ್ಕೆ ಬರುವಂತಹ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.”

-ಅಣ್ಣಯ್ಯ, ಅಧ್ಯಕ್ಷ ,

” ವೀಳ್ಯದೆಲೆ ರೈತ ಭೂ ಹೋರಾಟ ಸಮಿತಿ ಯುಜಿಡಿ ನೀರು ರಸ್ತೆಯ ಅಕ್ಕಪಕ್ಕದಲ್ಲಿರುವ ಎಲೆ ತೋಟಗಳಿಗೆ ಹರಿದು ವೀಳ್ಯೆದೆಲೆ ಬೆಳೆ ನಾಶವಾಗುತ್ತಿದೆ. ಸುತ್ತಮುತ್ತಲಿನ ಜಾಗವೆಲ್ಲ ಗಬ್ಬೆದ್ದು ನಾರುತ್ತಿದೆ. ನಗರಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾದರೆ ಬೆಳೆಗಾರರು ಹೇಗೆ ಜೀವನ ನಡೆಸಬೇಕು.”

-ಈಶ್ವರ್, ಎಲೆ ತೋಟದ ಮಾಲೀಕರು

Tags:
error: Content is protected !!