ಶುಕ್ರವಾರ ಶಾಲೆಗಳ ಆರಂಭ; ಪೂರ್ವಭಾವಿ ಸಭೆ ನಡೆಸಿ, ಸಿದ್ಧತಾ ಕಾರ್ಯ ನಡೆಸಿದ ಶಿಕ್ಷಕರು
ಭೇರ್ಯ ಮಹೇಶ್
ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಮೇ ೩೦ರ ಶುಕ್ರವಾರ ಶಾಲೆ ಆರಂಭವಾಗಲಿದ್ದು, ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಉತ್ಸಾಹದಿಂದ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಶಾಲಾಭಿ ವೃದ್ಧಿ ಸಮಿತಿಯ ತಂಡ ಸಕಲ ಸಿದ್ಧತೆಗಳನ್ನೂ ನಡೆಸುತ್ತಿದೆ.
ಶುಕ್ರವಾರ ಆರಂಭವಾಗಲಿರುವ ಶಾಲೆಯನ್ನು ಮುಖ್ಯ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ತಳಿರು ತೋರಣಗಳಿಂದ ಅಲಂಕರಿಸಿದ್ದಾರೆ. ತಾಲ್ಲೂಕಿನ ಎಲ್ಲ ಶಾಲೆಗಳಲ್ಲೂ ಎರಡು ದಿನ ಮುಂಚಿತವಾಗಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದ್ದು, ಶಾಲಾ ಆವರಣ, ಅಡುಗೆ ಕೋಣೆ, ಕೊಠಡಿಗಳನ್ನು ಸ್ವಚ್ಛಗೊಳಿಸಿ ಶಾಲೆಯ ಮುಂದೆ ರಂಗೋಲಿಯ ಚಿತ್ತಾರ ಬಿಡಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಶಾಲೆ ಒಳಗೆ ಪ್ರವೇಶ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಿಹಿ ನೀಡಿ ಸ್ವಾಗತಿಸಲಾಗುವುದು. ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ೧೦೯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ೧೦೩ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈಗಾಗಲೇ ೩೫೩ ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗಿದೆ. ಶಾಲೆಗಳನ್ನು ನಿಗದಿತ ಅವಧಿಗೆ ಆರಂಭಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು ಈಗಾಗಲೇ ಸಂಭ್ರಮ- ಸಡಗರದಿಂದ ಶಾಲಾರಂಭ ಮಾಡಲು ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ. ಭೇರ್ಯ ಗ್ರಾಮದ ಶತಮಾನ ಪೂರೈಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ತಂಡದವರು ಶಾಲಾವರಣ, ಅಡುಗೆ ಮನೆ ಸ್ವಚ್ಛಗೊಳಿ ಸಿದ್ದು, ಶಾಲೆ ಪ್ರಾರಂಭೋತ್ಸವಕ್ಕೆ ಸಿಹಿ ವಿತರಿಸಿ, ಗುಲಾಬಿ ಹೂ ನೀಡಿ ಸ್ವಾಗತಿ ಸಲು ಮುಖ್ಯಶಿಕ್ಷಕರು ಶಾಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಶಾಲೆಯ ಎಲ್ಲ ಸಹ ಶಿಕ್ಷಕರೂ ಕಳೆದ ವಾರದಿಂದ ಮನೆ ಮನೆಗೆ ತೆರಳಿ ನಿಮ್ಮ ಮಗುವನ್ನು ಸರ್ಕಾರಿ ಶಾಲೆಗೆ ಸೇರಿಸಿ, ಸರ್ಕಾರದಿಂದ ಉಚಿತವಾಗಿ ಶಿಕ್ಷಣ, ಸಮವಸ್ತ್ರ, ಪುಸ್ತಕಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸುವ ಕರಪತ್ರಗಳನ್ನು ಹಂಚಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಮಾಡಿಕೊಳ್ಳಲು ಸಹ ಶಿಕ್ಷಕರು ಶ್ರಮಿಸುತ್ತಿದ್ದಾರೆ.
” ಈಗಾಗಲೇ ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದೆ. ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಶುಕ್ರವಾರ ಸಿಹಿಯೊಂದಿಗೆ ಮಧಾಹ್ನದ ಬಿಸಿಯೂಟ ಕೂಡ ಪ್ರಾರಂಭವಾಗಲಿದೆ. ಇದರೊಟ್ಟಿಗೆ ಅಡುಗೆ ಕೋಣೆಯನ್ನು ಅಡುಗೆ ಸಿಬ್ಬಂದಿ ಸ್ವಚ್ಛಗೊಳಿಸಿದ್ದು, ಬಿಸಿಯೂಟ ಸಾಮಗ್ರಿಗಳನ್ನು ಕೂಡ ಶಾಲೆಯ ಮುಖ್ಯಶಿಕ್ಷಕರು ಖರೀದಿಸಿದ್ದಾರೆ. ವಿದ್ಯಾರ್ಥಿಗಳು ಸಂಭ್ರಮದಿಂದ ಹಾಜರಾಗಲಿದ್ದಾರೆ.”
-ಆರ್.ಕೃಷ್ಣಪ್ಪ , ಬಿಇಒ
” ಶತಮಾನ ಪೂರೈಸಿರುವ ಭೇರ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಶುಕ್ರವಾರ ಶಾಲೆಗೆ ಬರುವ ಮಕ್ಕಳಿಗೆ ಸಿಹಿ ಹಂಚಿ, ಗುಲಾಬಿ ಹೂ ನೀಡಿ ಸಂಭ್ರಮದಿಂದ ಬರಮಾಡಿಕೊಳ್ಳಲು ಸಕಲ ಸಿದ್ಧತೆಗಳನ್ನೂ ಶಾಲೆ ಶಿಕ್ಷಕರು ಮಾಡಿಕೊಂಡಿದ್ದಾರೆ. ಶಾಲೆ ಪ್ರಾರಂಭೋತ್ಸವಕ್ಕೆ ಕ್ಷೇತ್ರದ ಶಾಸಕರಾದ ಡಿ.ರವಿಶಂಕರ್ ಚಾಲನೆ ನೀಡಲಿದ್ದಾರೆ.”
-ಬಿ.ಕೆ.ಮಂಜಪ್ಪ, ಅಧ್ಯಕ್ಷರು, ಭೇರ್ಯ ಗ್ರಾ.ಪಂ.





