ಮಂಜು ಕೋಟೆ
ಕೋಟೆಯಲ್ಲಿ ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಜನಜೀವನ ಅಸ್ತವ್ಯ
ಎಚ್.ಡಿ.ಕೋಟೆ: ಒಂದು ವಾರದಿಂದ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅತಂತ್ರವಾಗಿರುವ ಜತೆಗೆ ರೈತರ ಜಮೀನಿನಲ್ಲಿ ಬೆಳೆಯಲಾಗಿರುವ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ತಾಲ್ಲೂಕಿನಲ್ಲಿ ಏಪ್ರಿಲ್ ಅಂತ್ಯದಲ್ಲಿ ಮತ್ತು ಮೇ ತಿಂಗಳಿನಲ್ಲಿ ಉತ್ತಮ ಮಳೆ ಆಗುವುದರಿಂದ ಆ ಸಂದರ್ಭದಲ್ಲಿ ರೈತರು ಬಿತ್ತನೆ ಕಾರ್ಯ ನಡೆಸುತ್ತಾರೆ. ಆದರೆ ಈ ಬಾರಿ ಪ್ರಾರಂಭದಲ್ಲಿ ಮಳೆ ಸಮರ್ಪಕವಾಗಿ ಆಗದೆ ಇದ್ದರೂ ರೈತರು ಬಿತ್ತನೆ ಕಾರ್ಯ ನಡೆಸಿದ್ದರು. ಆದರೆ ಒಂದು ವಾರದಿಂದ ದಾಖಲೆ ಪ್ರಮಾಣದಲ್ಲಿ ತಾಲ್ಲೂಕಿನಾದ್ಯಂತ ೧೯೦ ಮಿ.ಮೀ. ಮಳೆಯಾಗಿರುವುದರಿಂದ ರೈತರ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಸತತವಾಗಿ ಮಳೆಯಾಗುತ್ತಿರು ವುದರಿಂದ ಜನಸಾಮಾನ್ಯರು, ಕೂಲಿಕಾರ್ಮಿಕರ ಕೆಲಸ ಕಾರ್ಯಗಳಿಗೆ ತೆರಳಲು ಅಡ್ಡಿಯಾಗಿದೆ. ಜಿಲ್ಲೆಯಲ್ಲಿ ಅರೆ ಮಲೆನಾಡು ಎಂದು ಹೆಸರಾಗಿರುವ ಕೋಟೆ ಕ್ಷೇತ್ರದಲ್ಲಿ ಜೂನ್, ಜುಲೈ ತಿಂಗಳಿನಲ್ಲಿ ಭಾರೀ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಮೇ ತಿಂಗಳಿನಲ್ಲೇ ಮಳೆ ತನ್ನ ಆರ್ಭಟ ತೋರಿಸುತ್ತಿರುವುದರಿಂದ ಜನಸಾಮಾನ್ಯರಿಗೆ ಆತಂಕ ಎದುರಾಗುತ್ತಿದೆ
ಕೊಡಗು ಮತ್ತು ಕೇರಳ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಈ ಭಾಗಗಳಿಗೆ ಹೊಂದಿಕೊಂಡಂತೆ ಇರುವ ಈ ತಾಲ್ಲೂಕಿನಲ್ಲಿ ಬೇರೆ ತಾಲ್ಲೂಕುಗಳಿಗಿಂತ ಅತಿ ಹೆಚ್ಚು ಮಳೆಯಾಗುತ್ತಿದೆ.
ಮೇ ತಿಂಗಳಲ್ಲಿ ವಾಡಿಕೆ ಮಳೆ ೧೧೦ ಮಿ.ಮೀ. ಆಗಬೇಕಾಗಿತ್ತು. ಆದರೆ ೧೯೦ ಮಿ.ಮೀ. ಮಳೆಯಾಗಿದೆ. ಅಂತರಸಂತೆ ಹೋಬಳಿಯಲ್ಲಿ ಅತಿ ಹೆಚ್ಚು ಅಂದರೆ ೨೦೨ ಮಿ.ಮೀ. ಮಳೆ ಆಗಿದೆ. ಮಳೆ ಆರ್ಭಟ ಹೀಗೆಯೇ ಮುಂದುವರಿದರೆ ಎಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಮುಂಜಾಗ್ರತ ಕ್ರಮವಾಗಿ ಅಽಕಾರಿ ವರ್ಗ ಮತ್ತು ಜನಪ್ರತಿನಿಽಗಳು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಬೇಕಾಗಿದೆ.
” ಸರಗೂರು ತಾಲ್ಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚಾಗಿ ಮಳೆ ಯಾಗುತ್ತಿದ್ದು, ಪಟ್ಟಣದಲ್ಲಿ ೩ ಮನೆಗಳು ಕುಸಿತ ಕಂಡಿವೆ. ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಿ ವರದಿ ನೀಡುವಂತೆ ಆದೇಶಿಸಲಾಗಿದೆ.”
-ಮೋಹನಕುಮಾರಿ, ತಹಸಿಲ್ದಾರ್, ಸರಗೂರು
” ಕೋಟೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ೮೦ ಮಿ.ಮೀ. ಮಳೆ ಹೆಚ್ಚಾಗಿ ಆಗಿದೆ. ಮಳೆ ಹೀಗೆಯೇ ಮುಂದುವರಿದರೆ ಹತ್ತಿ, ಹೊಗೆಸೊಪ್ಪು ಬೆಳೆ, ಇನ್ನಿತರ ಬೆಳೆಗಳಿಗೆ ಹಾನಿಯಾಗಲಿದೆ. ಈಗ ಆಗಿರುವ ಮಳೆಯಿಂದ ಬೆಳೆಗಳಿಗೆ ಹಾನಿ ಇಲ್ಲ.”
-ಜಯರಾಮಯ್ಯ, ಸಹಾಯಕ ಕೃಷಿ ನಿರ್ದೇಶಕರು
” ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಯಾವುದೇ ಅನಾಹುತಗಳು ಕಂಡುಬಂದಿಲ್ಲ. ಆರ್‌ಐ ಮತ್ತು ವಿಎಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಿ ದಿನಕ್ಕೆ ೪-೫ ಬಾರಿ ಮಾಹಿತಿ ಮತ್ತು ವರದಿ ನೀಡುವಂತೆ ಸೂಚನೆ ನೀಡಲಾಗಿದೆ.”
-ಶ್ರೀನಿವಾಸ್, ತಹಸಿಲ್ದಾರ್, ಎಚ್.ಡಿ.ಕೋಟೆ





