Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಚಿತ್ರರಂಗಕ್ಕೆ ಉಪೇಂದ್ರ ಮಗ ಆಯುಷ್‍ ಎಂಟ್ರಿ; ಸದ್ಯದಲ್ಲೇ ಹೊಸ ಚಿತ್ರದ ಘೋಷಣೆ

ayush upendra

ಕೆಲವು ವರ್ಷಗಳ ಹಿಂದೆ ಮಾಧ್ಯಮದವರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಮಗನನ್ನು ಯಾವಾಗ ಹೀರೋ ಮಾಡುತ್ತೀರಿ ಎಂಬ ಪ್ರಶ್ನೆಗೆ ಅದನ್ನೆಲ್ಲಾ ನಾವು ಪ್ಲಾನ್‍ ಮಾಡುವುದಲ್ಲ, ಅದೆಲ್ಲಾ ಕೂಡಿಬರಬೇಕು, ಸಮಯ ಬರಬೇಕು ಎಂದು ನಟ-ನಿರ್ದೇಶಕ ಉಪೇಂದ್ರ ಹೇಳಿದ್ದರು. ಆ ಕಾಲ ಈಗ ಬಂದಿದ್ದು, ಉಪೇಂದ್ರರ ಮಗ ಆಯುಷ್‍ ಸದ್ಯದಲ್ಲೇ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.

ಆಯುಷ್‍ ಉಪೇಂದ್ರ, ಸೋಮವಾರ ತಮ್ಮ 21ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಪೇಂದ್ರ ಅವರ ಕುಟುಂಬ ಮಂತ್ರಾಲಯಕ್ಕೆ ತೆರಳಿ ರಾಯರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಬಂದಿದೆ. ಈ ಸಂದರ್ಭದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಸಹ ನಡೆದಿದ್ದು, ಸೋಷಿಯಲ್‍ ಮೀಡಿಯಾದಲ್ಲಿ ಫೋಟೋಗಳು ವೈರಲ್‍ ಆಗಿವೆ.

ದರ್ಶನದ ನಂತರ ಖಾಸಗೀ ಹೋಟೆಲ್‍ನಲ್ಲಿ ಆಯುಷ್‍ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಸಹೋದರಿ ಐಶ್ವರ್ಯಾ ಮುಂತಾದವರು ಆಯುಷ್‍ಗೆ ಕೇಕ್‍ ತಿನ್ನಿಸಿ ಸಂಭ್ರಮಿಸಿದ್ದಾರೆ.

ಆಯುಷ್‍ ಮೊದಲ ಚಿತ್ರವನ್ನು ಪುರುಷೋತ್ತಮ್‍ ನಿರ್ದೇಶನ ಮಾಡುತ್ತಿದ್ದು, ಅಭಿಷೇಕ್‍ ಸಿರಿವಂತ್‍ ನಿರ್ಮಿಸುತ್ತಿದ್ದಾರೆ. ಸದ್ಯ ಲೊಕೇಶನ್‍ ಹುಡುಕಾಟ ನಡೆಯುತ್ತಿದ್ದು, ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಬಳಗವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆಯಂತೆ. ಈ ಚಿತ್ರಕ್ಕೆ ಆಯುಷ್ ಸಾಕಷ್ಟು ತಯಾರಿ ನಡೆಸುತ್ತಿದ್ದು, ಸದ್ಯದಲ್ಲೇ ಫೋಟೋಶೂಟ್‍ ಸಹ ನಡೆಯಲಿದೆ. ಈ ಚಿತ್ರಕ್ಕೆ ಹಿರಿಯ ಛಾಯಾಗ್ರಾಹಕ ಎಚ್‍.ಸಿ. ವೇಣು ಛಾಯಾಗ್ರಹಣ ಇರಲಿದೆಯಂತೆ.

ಅಂದಹಾಗೆ, ಉಪೇಂದ್ರ ಅವರು ತೆಲುಗಿನ ‘ರಾಪೋ 22’ ಚಿತ್ರದಲ್ಲಿ ನಟಿಸುತ್ತಿದ್ದು, ಇದಲ್ಲದೆ ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶನದ ‘ಭಾರ್ಗವ’ ಎಂಬ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಪ್ರಿಯಾಂಕಾ ಉಪೇಂದ್ರ, ‘ಸೆಪ್ಟೆಂಬರ್‍ 21’ ಎಂಬ ಬಾಲಿವುಡ್‍ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Tags:
error: Content is protected !!