Mysore
23
clear sky

Social Media

ಗುರುವಾರ, 22 ಜನವರಿ 2026
Light
Dark

ತುಳು ಭಾಷೆಯ ‘ದಸ್ಕತ್‍’ ಕನ್ನಡಕ್ಕೆ ಡಬ್‍ ಆಯ್ತು: ಮೇ.09ಕ್ಕೆ ಬಿಡುಗಡೆ

ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಚಿತ್ರ ‘ದಸ್ಕತ್’ ಬಿಡುಗಡೆಯಾಗಿ ಪ್ರಶಂಸೆ ಪಡೆಯುವುದರ ಜೊತೆಗೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿತ್ತು. ಆ ಚಿತ್ರವನ್ನು ಎಲ್ಲರೂ ನೋಡುವಂತಾಗಬೇಕು ಎಂಬ ದೃಷ್ಟಿಯಿಂದ ಕನ್ನಡಕ್ಕೆ ಡಬ್‍ ಮಾಡಿ ಇದೇ ಮೇ.09ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ.

‘ದಸ್ಕತ್‍’ ಚಿತ್ರವನ್ನು ರಾಘವೇಂದ್ರ ಕುಡ್ವ ನಿರ್ಮಿಸಿದ್ದು, ದೀಕ್ಷಿತ್‍ ಕೆ. ಅಂದಿನ್ಜೆ, ಮೋಹನ್‍ ಶೇಣಿ, ನೀರಜ್‍ ಕುಂದರ್ಪ, ಮಿಥುನ್‍ ರಾಜ್‍, ಯುವ ಶೆಟ್ಟಿ, ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ ಮುಂತಾದವರು ನಟಿಸಿದ್ದು, ಅನೀಶ್‍ ಪೂಜಾರಿ ವೇಣೂರು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಅನೀಶ್ ಪೂಜಾರಿ ವೇಣೂರು, ‘ದಸ್ಕತ್ ಅಂದರೆ ಸಿಗ್ನೇಚರ್ ಅಥವಾ ಸಹಿ ಎಂದರ್ಥ. ಒಂದು ಹಳ್ಳಿಯಲ್ಲಿ ಜನ ಸಹಿಗಾಗಿ ಎಷ್ಟು ಕಷ್ಟ ಪಡ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಒಂದು ಸಹಿಯಿಂದ ಏನೆಲ್ಲಾ ಅವಾಂತರ ಸೃಷ್ಟಿಯಾಗುತ್ತದೆ ಎಂದು ಹೇಳಲಾಗಿದೆ. ಶ್ರೀಮಂತರು, ಬಡವರು ಹಾಗೂ ಅಧಿಕಾರಿಗಳ ನಡುವಿನ ಗೊಂದಲ ಮತ್ತು ಸಂಘರ್ಷ ಹೇಗೆಲ್ಲಾ ಸಾಗುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇಂತಹ ಘಟನೆಗಳು ಪ್ರತಿಯೊಬ್ಬರ ಬದುಕಿನಲ್ಲಿ ನಡೆಯುವಂತಹ ಸಾಧ್ಯತೆ ಇದ್ದೇ ಇರುತ್ತದೆ. ಕರಾವಳಿ ಭಾಗದ ಸುತ್ತ ಚಿತ್ರೀಕರಿಸಿರುವ ಈ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ 70 ದಿನವನ್ನು ಪೂರೈಸಿದೆ. ಹಾಗೆಯೇ ದುಬೈ, ಮಸ್ಕತ್‍, ಕೆನಡಾ, ನೈಜೀರಿಯಾ ಸೇರದಂತೆ ಬಬೇರೆ ದೇಶಗಳಲ್ಲೂ ಚಿತ್ರ ಪ್ರದರ್ಶನವಾಗಿದೆ’ ಎಂದರು.

ಈ ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿರುವುದು ಜಗದೀಶ್ ಎನ್. ಅರೇಬನ್ನಿಮಂಗಲ, ಮಾತನಾಡಿ, ‘ನಾನು ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಗ್ರಾಮದ ಕಷ್ಟ ಸುಖಗಳನ್ನ ಚೆನ್ನಾಗಿ ತಿಳಿದುಕೊಂಡು ಪರಿಹಾರ ಕೂಡ ಮಾಡಿದ್ದೇನೆ. ಈ ಚಿತ್ರ ನೋಡಿದೆ. ನನಗೆ ತುಳು ಬರದಿದ್ದರೂ ಭಾವನೆಗಳು ತುಂಬಾ ಇಷ್ಟವಾಯಿತು. ಗ್ರಾ ಪಂ. ಅಧಿಕಾರಿಯಿಂದ ಆ ಹಳ್ಳಿಯ ಮುಗ್ಧ ಜನ ಹೇಗೆಲ್ಲಾ ಕಷ್ಟ ಪಡುತ್ತಿದ್ದಾರೆ ಎಂಬುವುದನ್ನು ಬಹಳ ಸೊಗಸಾಗಿ ತೋರಿಸಿದ್ದಾರೆ. ಹಾಗಾಗಿ, ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು

‘ದಸ್ಕತ್‍’ ಚಿತ್ರಕ್ಕೆ ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ, ಸಮರ್ಥನ್ ಎಸ್. ರಾವ್ ಸಂಗೀತವಿದೆ.

Tags:
error: Content is protected !!