Mysore
16
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಏ.೨೮ರಂದು ಮಡಿಕೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ

ಅಧ್ಯಕ್ಷ ಸ್ಥಾನಕ್ಕೆ ೯ ಮಂದಿ ಮಹಿಳಾ ಸದಸ್ಯರಲ್ಲಿ ತೀವ್ರ ಪೈಪೋಟಿ

ನವೀನ್ ಡಿಸೋಜ

ಮಡಿಕೇರಿ: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಏ.೨೮ರಂದು ಚುನಾವಣೆ ನಿಗದಿಯಾಗಿದ್ದು, ಚುಕ್ಕಾಣಿ ಹಿಡಿಯುವವರು ಯಾರು? ಎಂಬುದು ಕೌತುಕ ಮೂಡಿಸಿದೆ. ಹಲವು ಆಕಾಂಕ್ಷಿಗಳಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಒಟ್ಟು ೫ ವರ್ಷದ ಆಡಳಿತ ಅವಧಿ ಪೈಕಿ ಮೊದಲ ಎರಡೂವರೆ ವರ್ಷದ ಅಧ್ಯಕ್ಷರಾಗಿ ನೆರವಂಡ ಅನಿತಾ ಪೂವಯ್ಯ, ಉಪಾಧ್ಯಕ್ಷರಾಗಿ ಸವಿತಾ ರಾಕೇಶ್ ಕಳೆದ ಏಪ್ರಿಲ್ ತನಕ ಕಾರ್ಯ ನಿರ್ವಹಿಸಿದ್ದರು. ಮುಂದಿನ ಎರಡೂವರೆ ವರ್ಷ ಅವಽಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಘೋಷಿಸಲಾಗಿದ್ದು, ಇದನ್ನು ಪ್ರಶ್ನಿಸಿ ಬಿಜೆಪಿ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಕೋರ್ಟ್ ಮೆಟ್ಟಿಲೇರಿ ಮೀಸಲಾತಿ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೀಸಲಾತಿ ಯನ್ನು ಬದಲಾಯಿಸದೆ ಯಥಾಸ್ಥಿತಿ ಕಾಯ್ದಿರಿಸಿ ಆದೇಶಿಸಿತ್ತು.

ಲೋಕಸಭಾ ಚುನಾವಣಾ ನೀತಿ ಸಂಹಿತೆ, ನ್ಯಾಯಾಂಗ ಹೋರಾಟ ಹೀಗೆ ನಾನಾ ಕಾರಣಗಳಿಂದ ಕಳೆದ ೧ ವರ್ಷದಿಂದ ನಗರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ಸ್ಥಾನ ಖಾಲಿ ಇತ್ತು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಆಡಳಿತಾಧಿಕಾರಿಯಾಗಿ ನೇಮಕ ಗೊಂಡಿದ್ದರು. ಉಳಿದಿರುವ ಒಂದೂವರೆ ವರ್ಷಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇದೀಗನಡೆಯಬೇಕಾಗಿದೆ.

ಚುನಾವಣಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಚುನಾವಣೆ ಅಧಿಸೂಚನೆ ಪ್ರಕಟಿಸಿದ್ದಾರೆ. ಏ.೨೮ಕ್ಕೆ ಚುನಾವಣೆ ನಡೆಯಲಿದ್ದು, ಈ ನಡುವೆ ಆಕಾಂಕ್ಷಿಗಳು ಪದವಿಗಾಗಿ ಕಸರತ್ತು ತೀವ್ರಗೊಳಿಸಿದ್ದಾರೆ.

ಕಳೆದ ಹಲವು ಅವಧಿಗಳಿಂದ ನಗರಸಭೆ ಅಧ್ಯಕ್ಷರಾಗಿ ಮಹಿಳಾ ಸದಸ್ಯರು ಆಯ್ಕೆಗೊಳ್ಳುತ್ತಿದ್ದು, ಈ ಅವಽಯಲ್ಲಿಯೂ ಮಹಿಳೆ ಮಡಿಕೇರಿಯ ಪ್ರಥಮ ಪ್ರಜೆಯಾಗ ಲಿದ್ದಾರೆ. ಆದರೆ, ಈ ಸ್ಥಾನ ಪಡೆಯಲು ಹಲವು ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಹಿನ್ನೆಲೆಯಲ್ಲಿ ಬಿಜೆಪಿಯ ೧೬ ಮಂದಿ ಸದಸ್ಯರ ಪೈಕಿ ೯ ಮಹಿಳಾ ಸದಸ್ಯರು ಅರ್ಹರಾಗಿದ್ದಾರೆ. ಇದರಲ್ಲಿ ಉಷಾ ಕಾವೇರಪ್ಪ, ಶ್ವೇತಾ ಪ್ರಶಾಂತ್, ಬಾಳೆಯಡ ಸಬಿತಾ, ಸವಿತಾ ರಾಕೇಶ್, ಚಿತ್ರಾವತಿ, ಕಲಾವತಿ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ.

ನಿಕಟಪೂರ್ವ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಕೂಡ ತಮ್ಮದೇ ಆದ ಪ್ರಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ನಗರಸಭೆಯ ಹಿರಿಯ ಸದಸ್ಯ ಕೆ.ಎಸ್. ರಮೇಶ್ ಹಾಗೂ ಮಹೇಶ್ ಜೈನಿ ನಡುವೆ ಉಪಾಧ್ಯಕ್ಷ ಸ್ಥಾನಕ್ಕೆ ನೇರ ಹಣಾಹಣಿ ಏರ್ಪ  ಟ್ಟಿದೆ. ಕೆ.ಎಸ್. ರಮೇಶ್ ಈಗಾಗಲೇಹಲವರನ್ನು ತನ್ನತ್ತ ಸೆಳೆಯುತ್ತಿದ್ದು, ಅದೇ ರೀತಿ ಮಹೇಶ್ ಜೈನಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಹಿನ್ನೆಲೆಯಲ್ಲಿ ಅವರಿಗೂ ಬೆಂಬಲ ವ್ಯಕ್ತವಾಗುತ್ತಿದೆ. ಅಧ್ಯಕ್ಷಸ್ಥಾನ ಮಹಿಳೆಯರಿಗೆ ಮೀಸಲಾಗಿರುವುದರಿಂದ ಉಪಾಧ್ಯಕ್ಷ ಸ್ಥಾನವನ್ನು ಪುರುಷ ಸದಸ್ಯರು ಗಿಟ್ಟಿಸಿಕೊಳ್ಳುವುದು ನಿಶ್ಚಿತವಾಗಿದೆ. ಕಳೆದ ಕೆಲ ದಿನಗಳಿಂದ ಆಕಾಂಕ್ಷಿಗಳು ತಮ್ಮ ಪ್ರಭಾವ, ತಂತ್ರಗಾರಿಕೆಯಲ್ಲಿ ತೊಡಗಿಸಿ ಕೊಂಡಿದ್ದು, ಜಾತಿ ಲೆಕ್ಕಾಚಾರವೂ ಒಳಗೊಂಡಿದೆ. ಕಳೆದ ಅವಧಿಯಲ್ಲಿ ಕೊಡವ ಸಮುದಾಯಕ್ಕೆ ಸ್ಥಾನ ನೀಡಿದ್ದ ಹಿನ್ನೆಲೆಯಲ್ಲಿ ಈ ಬಾರಿ ಬೇರೆ ಜನಾಂಗಕ್ಕೆ ಅವಕಾಶ ನೀಡಬೇಕೆಂಬ ಒತ್ತಡ ಹೇರಲಾಗುತ್ತಿದೆ.

ನಗರಸಭೆಯಲ್ಲಿ ೧೬ ಮಂದಿ ಬಿಜೆಪಿ ಸದಸ್ಯರಿದ್ದು, ಸ್ಪಷ್ಟ ಬಹುಮತವನ್ನು ಹೊಂದಿದೆ. ಇನ್ನು ಎಸ್.ಡಿ.ಪಿ.ಐ. ೫, ಜಾ.ದಳ, ಕಾಂಗ್ರೆಸ್‌ನ ತಲಾ ಒಂದು ಸದಸ್ಯರಿದ್ದಾರೆ. ಇದರೊಂದಿಗೆ ಶಾಸಕ, ಸಂಸದರ ಮತಗಳೂ ಗಣನೆಗೆ ಬರಲಿದ್ದು, ಬಿಜೆಪಿ ಪಾಳೆಯದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದೆ.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಬಹಿರಂಗವಾಗಿ ಹಲವರು ಆಕಾಂಕ್ಷಿಗಳಿರುವ ಕಾರಣ ಒಂದು ಹೆಸರನ್ನು ಅಂತಿಮ ಮಾಡುವುದು ಬಿಜೆಪಿ ಪಾಳಯಕ್ಕೆ ಕಷ್ಟಸಾಧ್ಯ ವಾಗುವ ಸನ್ನಿವೇಶ ಕಂಡು ಬರುತ್ತಿದೆ. ಆಕಾಂಕ್ಷಿ ಗಳ ಪೈಕಿ ಶ್ವೇತಾ, ಉಷಾ, ಸಬಿತ, ಸವಿತಾ ಅವರು ಕಣದಿಂದ ಹಿಂದೆ ಸರಿಯುವ ಲಕ್ಷಣಗಳು ಕಡಿಮೆಯಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪ್ರಬಲರು ಮುಂಚೂಣಿ ಯಲ್ಲಿರು ವುದರಿಂದ ಈ ಪೈಕಿ ಅಂತಿಮಗೊಂಡು ಪಟ್ಟ ಅಲಂಕರಿಸುವವರು ಯಾರೆಂಬ ಪ್ರಶ್ನೆ ಉದ್ಭವಿಸಿದೆ.

” ಆಕಾಂಕ್ಷಿಗಳ ಪೈಕಿ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪಕ್ಷ ಆಯ್ಕೆ ಮಾಡಲಿದೆ. ಆಕಾಂಕ್ಷಿಗಳೆಲ್ಲರಿಗೂ ಅರ್ಹತೆ ಇದೆ. ಆದರೆ, ಸ್ಥಾನ ಒಂದೇ ಇರುವುದರಿಂದ ಒಬ್ಬರನ್ನು ಮಾತ್ರ ಆಯ್ಕೆ ಮಾಡಬೇಕಾಗಿದೆ. ಈ ಸಂಬಂಧಮಡಿಕೇರಿ ನಗರ ಮಂಡಲ ಸಭೆ ನಡೆಸಿ ಚರ್ಚಿಸಲಾಗುವುದು. ಕಾರ್ಯಕರ್ತರ ಅಭಿಪ್ರಾಯ, ಆಕಾಂಕ್ಷಿಗಳೊಂದಿಗೆ ಚರ್ಚಿಸಿ ಅಳೆದು-ತೂಗಿ ಯಾರಿಗೂ ಅನ್ಯಾಯವಾಗದಂತೆ ತೀರ್ಮಾನ ಕೈಗೊಳ್ಳಲಾಗುವುದು. ಆಕಾಂಕ್ಷಿಗಳು ಪಕ್ಷಕ್ಕೆ ಮಾಡಿರುವ ಸೇವೆ, ಬದ್ಧತೆ, ಹಿರಿತನ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು. ಅವಿರೋಧ ಆಯ್ಕೆಯಾಗುವ ನಿಟ್ಟಿನಲ್ಲಿ ಪಕ್ಷದ ಪ್ರಮುಖರು ಕೆಲಸ ಮಾಡಲಿದ್ದೇವೆ.”

-ನಾಪಂಡ ರವಿ ಕಾಳಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ

Tags:
error: Content is protected !!