Mysore
18
scattered clouds

Social Media

ಭಾನುವಾರ, 25 ಜನವರಿ 2026
Light
Dark

ಇದು ಜಾತಿಗಣತಿಯೋ, ದ್ವೇಷಗಣತಿಯೋ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ಒಕ್ಕಲಿಗ ಸಮಾಜಕ್ಕೆ ಸೇರಿದ ಅಂಕಿ-ಸಂಖ್ಯೆ ಅಷ್ಟೇ ಅಲ್ಲ. ವೀರಶೈವ-ಲಿಂಗಾಯತ ಮತ್ತು ಇನ್ನಿತರೆ ಸಮಾಜಗಳ ಸಂಖ್ಯೆಯೂ ನನಗೆ ಭಾರೀ ಅಚ್ಚರಿ ಮೂಡಿಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D  Kumaraswamy) ಜಾತಿಗಣತಿ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಜಾತಿ ಗಣತಿ ಗಜಪ್ರಸವ ತಥಂಗಕ್ಕೆ ಸಂಪುಟದಲ್ಲಿ ಶಾಸ್ತ್ರೋಕ್ತವಾಗಿ ಅರಿಶಿಣ, ಕುಂಕುಮ ಹಚ್ಚಿ, ಕಡ್ಡಿ ಹಚ್ಚಲಾಗಿದೆ. ಆ ವರದಿಯದ್ದು ಎನ್ನಲಾದ ಅಂಕಿ ಅಂಶಗಳು ಎಲ್ಲೆಡೆ ತೇಲಾಡುತ್ತಿವೆ. ಯಾವುದೋ ಅಜ್ಞಾತ ಕೈ ಅದನ್ನು ವ್ಯವಸ್ಥಿತವಾಗಿ ತೇಲಿ ಬಿಟ್ಟಿದೆ.

ಒಕ್ಕಲಿಗ ಸಮಾಜಕ್ಕೆ ಸೇರಿದ ಅಂಕಿ ಸಂಖ್ಯೆ ಅಷ್ಟೇ ಅಲ್ಲ. ವೀರಶೈವ ಲಿಂಗಾಯತ ಮತ್ತು ಇನ್ನಿತರೆ ಸಮಾಜಗಳ ಸಂಖ್ಯೆಯೂ ನನಗೆ ಅಚ್ಚರಿ ಹುಟ್ಟಿಸಿದೆ.

ಗಣತಿ ಗ್ಯಾರಂಟಿ ರಾಜ್ಯದಲ್ಲಿ ಅಲ್ಲೋಲ, ಕಲ್ಲೋಲವೆಬ್ಬಿಸಲು ಹೂಡಿದ ಷಡ್ಯಂತ್ರವೇ ಅಥವಾ ಸರಣಿ ದರ ಏರಿಕೆ, ಸಾಲು ಸಾಲು ಭ್ರಷ್ಟ ಹಗರಣಗಳ ಮುಜುಗರದಿಂದ ಮುಖ ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆಗೆ ಹೊರಳಿಸಲು ರೂಪಿಸಿದ ಸಂಚೇ?

ಹಿನ್ನೆಲೆ:- ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಬಗ್ಗೆ ಚರ್ಚಿಸಿ ನಿರ್ಧಾರ : ಸಿ. ಎಂ. ಸಿದ್ದರಾಮಯ್ಯ

ಇಡೀ ರಾಜ್ಯವು ಜಾತಿ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದರೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಈ ನಡೆ ಕೆಲ ನಿರ್ದಿಷ್ಟ ಸಮುದಾಯಗಳ ಮೇಲೆ ರಾಜಕೀಯ, ಸಾಮಾಜಿಕವಾಗಿ ಹಗೆತನ ಸಾಧಿಸುವ ಮುಂದುವರಿದ ಅಧ್ಯಾಯವೇ ಎಂದು ಪ್ರಶ್ನೆ ಮಾಡಿದರು.

ಸಿಎಂ ಕುರ್ಚಿ ಹತ್ತಲು ಚಾತಕ ಪಕ್ಷಿಯಂತೆ ನಿದ್ದೆಗೆಟ್ಟು ಒಂದು ಸಲ ನಂಗೂ ಪೆನ್ನೂ-ಪೇಪರ್‌ ಕೊಡಿ ಎಂದು ಸಮುದಾಯದ ಮುಂದೆ ಮಂಡಿಯೂರಿ ಗೋಗರೆದ ವ್ಯಕ್ತಿ ಸಿದ್ದಷಡ್ಯಂತ್ರ್ಯ ವರದಿಗೆ ಶಿರಬಾಗಿ ಸಮ್ಮಿತಿಸುವರೇ?

ಇದನ್ನು ಓದಿ:- ಜಾತಿಗಣತಿ ವರದಿ ಹಿಂಪಡೆಗೆ ಅಶೋಕ ಅಗ್ರಹ

ಹಿಂದೊಮೆ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಷೀಣದನಿಯಲ್ಲಿ ಗಣತಿ ವರದಿಯನ್ನು ವಿರೋಧಿಸಿದ್ದವರು ಈಗ ನಾಲಿಗೆ ಬದಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಕಿಡಿಕಾರಿದರು.

ಇನ್ನು ವರದಿಗೆ ನನ್ನ ಒಪ್ಪಿಗೆ ಇಲ್ಲ. ಅನ್ಯಾಯದ ವಿರುದ್ಧ ಹೋರಾಟಕ್ಕೆ ನಾನು ಶತಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

Tags:
error: Content is protected !!