ಬೆಂಗಳೂರು: ನನ್ನ ಮೇಲೆ ಗಣಿ, ಗುತ್ತಿಗೆ ಆರೋಪ ಮಾಡಿರುವ ಸಿದ್ದರಾಮಯ್ಯ ಅವರು, ಈಗ ತಮ್ಮ ಸುತ್ತ ಸುತ್ತಿಕೊಂಡಿರುವ ಗಣಿ ಅಕ್ರಮದ ಬಗ್ಗೆ ಮಾತನಾಡಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ರಾಮಮೂರ್ತಿ ಗೌಡ ಎನ್ನುವವರು ಸಿದ್ದರಾಮಯ್ಯ ವಿರುದ್ಧ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆಗೆ ಪ್ರಾಸಿಕ್ಯೂಷನ್ ಕೊಡಿ ಎಂದು ರಾಜ್ಯಪಾಲರ ಬಳಿ ಕೇಳಿದ್ದಾರೆ. ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಸಿಎಂ ಆಗಿದ್ದ ಸಂದರ್ಭದಲ್ಲಿ ಗಣಿ ಗುತ್ತಿಗೆ ನವೀಕರಣಕ್ಕೆ ₹500 ಕೋಟಿ ಕಿಕ್‌ಬ್ಯಾಕ್ ಪಡೆದಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಗಣಿ ಗುತ್ತಿಗೆ ನವೀಕರಣದಿಂದ ಸರಕಾರದ ಬೊಕ್ಕಸಕ್ಕೆ ₹5,000 ಕೋಟಿ ನಷ್ಟ ಉಂಟು ಮಾಡಿರುವ ಗಂಭೀರ ಆಪಾದನೆಯನ್ನು ಸಿದ್ದರಾಮಯ್ಯ ಎದುರಿಸುತ್ತಿದ್ದಾರೆ. ವಿಚಾರಣೆಗೆ ಅನುಮತಿ ನೀಡುವಂತೆ ರಾಮಮೂರ್ತಿ ಗೌಡ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆನಪ್ಪ ಉತ್ತರ ಕೊಡುತ್ತೀರಿ ಎಂದು ಸಿದ್ದರಾಮಯ್ಯರನ್ನು ಪ್ರಶ್ನೆ ಮಾಡಿದರು.
ಅಲ್ಲಿ ನಾನು ಅಕ್ರಮವನ್ನೇ ಮಾಡಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಒಂದಿಚೂ ಮಣ್ಣು ಎತ್ತಿಲ್ಲ ಎಂದು ಹೇಳಿದ್ದಾರೆ. ಅವರು ಅಕ್ರಮ ಮಾಡಿದ್ದಾರೋ ಸಕ್ರಮ ಮಾಡಿದ್ದಾರೋ ಎನ್ನುವುದು ನನಗೆ ಗೊತ್ತಿದೆ. ಅದರ ಬಗ್ಗೆ ದಾಖಲೆಗಳೂ ನನ್ನಲ್ಲಿ ಇವೆ ಎಂದರು.
ಈ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ.





