Mysore
17
few clouds

Social Media

ಮಂಗಳವಾರ, 13 ಜನವರಿ 2026
Light
Dark

ಪಾಷಾಣ ಮೂರ್ತಿ ಎಂಬ ಹೆಣ್ಣು ದೈವ

ಮೇದ ಜನಾಂಗದವರು ಹಳೆಯ ಕಾಲದಿಂದಲೂ ‘ಪಾಷಾಣ ಮೂರ್ತಿ’ ಎನ್ನುವ ಹೆಣ್ಣು ದೈವವನ್ನು ಆರಾಧಿಸಿಕೊಂಡು ಬಂದಿದ್ದಾರೆ

  • ಆರತಿ ಎಂ. ಎಸ್‌.

‘ಪಾಷಾಣ ಮೂರ್ತಿ’ ದೈವಕ್ಕೆ ಯಾವುದೇ ನಿರ್ದಿಷ್ಟ ಗುಡಿ, ಕಟ್ಟೆ, ಮಂದಿರವಾಗಲಿ ಇರುವುದಿಲ್ಲ. ಕೊಡಗಿನ ಮೇದ’ ಸಮುದಾಯದ ಹಿರಿಯ ಕುಟುಂಬದ ಮನೆಯಲ್ಲಿಯೇ ಯಾವುದೇ ವಸ್ತ್ರಾಭರಣಗಳಿಲ್ಲದ ಚಿಕ್ಕ ಹೆಣ್ಣಿನ ಮೂರ್ತಿಯನ್ನಿಟ್ಟು ಆರಾಧಿಸುತ್ತಾರೆ. ವರ್ಷದ ಜೂನ್ ತಿಂಗಳಲ್ಲಿ ಬರುವ ಹುಣ್ಣಿಮೆಯಂದು ‘ಪಾಷಾಣ ಮೂರ್ತಿ’ಗೆ ಎಡೆ ಇಡುವ ಪದ್ಧತಿಯನ್ನು ಹಿಂದಿನಿಂದಲೂ ಬಹಳ ವಿಶಿಷ್ಟವಾಗಿ ನಡೆಸಿಕೊಂಡು ಬರಲಾಗಿದೆ.

‘ತಾಯಿ’ಯ ಸ್ವರೂಪದಲ್ಲಿ ‘ಪಾಷಾಣ ಮೂರ್ತಿ’ಯನ್ನು ನಂಬುವ ‘ಮೇದರು ದೈವಕ್ಕೆ ಎಡೆ ಇಡುವುದರಲ್ಲಿ ಪಾರಂಪರಿಕ ಸಂಪ್ರದಾಯವನ್ನು ಪಾಲಿಸುತ್ತಾರೆ. ಎಡೆ ಇಡುವ ಹಿರಿಯರ ಮನೆಗೆ ಗ್ರಾಮದ ಪ್ರತಿಯೊಂದು ‘ಮೇದ’ ಸಮುದಾಯದವರ ಮನೆಯಿಂದ ಕೋಳಿ ಹಾಗೂ ತೆಂಗಿನಕಾಯಿಯನ್ನು ತರಲಾಗುತ್ತದೆ. ಭತ್ತವನ್ನು ಹುರಿದು ಮಾಡಿದ ಪುರಿ ಹಾಗೂ ಕಲ್ಲಿನಲ್ಲಿ ಬೀಸಿದ ಅಕ್ಕಿ ಹಿಟ್ಟನ್ನು ಮಾಡಿ ತರುತ್ತಾರೆ. ಎಡೆ ಇಡುವ ದಿನದಂದು ಅಕ್ಕಿಯಿಂದ ತಯಾರಿಸುವ ಆಹಾರವನ್ನು ಅಜ್ಜ, ಅಜ್ಜಿಯಂದಿರು ಹಾಗೂ ಗಂಡಸರು ಮಾತ್ರ ಮಾಡುತ್ತಾರೆ. ಆರಂಭದಲ್ಲಿ ಒಂದು ಬಾಳೆಗೊನೆಹಾಗೂ ಅಕ್ಕಿ ಹಾಕಿದ ತಟ್ಟೆಯ ಮೇಲೆ ‘ಪಾಷಾಣ ಮೂರ್ತಿಯ ವಿಗ್ರಹವನ್ನು ಇಡುತ್ತಾರೆ.

‘ಪಾಷಾಣ ಮೂರ್ತಿ’ಗೆ ಎಡೆ ಇಡುವಾಗ ಮನೆಯ ಹಿರಿಯರು ದೈವಕ್ಕೆ ಪ್ರಾರ್ಥನೆ ಮಾಡಿ ‘ನಾವು ಕೋಳಿಯನ್ನು ಅರ್ಪಿಸುತ್ತಿದ್ದೇವೆ’ ಎಂದು ನುಡಿದು ಕೋಳಿಯ ಕತ್ತನ್ನು ತಿರುವುತ್ತಾರೆ.

ಪ್ರಸಾದವನ್ನು ಎಡೆಯಾಗಿ ಇಡುವಾಗ ‘ಪಾಷಾಣ ಮೂರ್ತಿ’ಯ ಜೊತೆಗೆ ಹಿರಿಯರ ಆತ್ಮಗಳಿಗೂ ಎಡೆ ಇಡುತ್ತಾರೆ. ಎಡೆಗಳ ಎರಡೂ ಕಡೆ ಲೋಟದ ಆಕೃತಿಯಲ್ಲಿ ಮಡಚಿದ ಬಾಳೆ ಎಲೆಯಲ್ಲಿ ಒಂದು ಬದಿಯಲ್ಲಿ ಸರಾಯಿ ಹಾಗೂ ಇನ್ನೊಂದು ಬದಿಯಲ್ಲಿ ಕುರ್ದಿ ನೀರನ್ನು ಇಡಲಾಗುತ್ತದೆ. ಎಡೆಯ ಎರಡು ಬಿದಿರುವಿನ ಕಡ್ಡಿಯ ತುದಿಗೆ ಬಟ್ಟೆಯ ನೆಣೆ ಮಾಡಿ, ಬಾಳೆ ದಿಂಡಿನ ದೀಪವನ್ನು ಸಿದ್ಧಪಡಿಸಿ ಇಡಲಾಗುತ್ತದೆ. ಎಡೆ ಇಟ್ಟು ಪೂಜಿಸುವಾಗ ಕುಲಕಸುಬಿನ ಸಂಕೇತವಾಗಿ ಬಿದಿರಿನ ಕೋಲುಗಳಿಗೂ ಮಹತ್ವವನ್ನು ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ‘ಭೂಮಿ ಗುಳಿಗ ದೈವಕ್ಕೂ ಭತ್ತದಿಂದ ತಯಾರಿಸಿದ ಪುರಿಯನ್ನು ಕೋಳಿ ರಕ್ತದೊಂದಿಗೆ ಬೆರೆಸಿ ಎಡೆ ಹಾಕುತ್ತಾರೆ. ಪಾಷಾಣ ಮೂರ್ತಿ’ಗೆ ಎಡೆ ಇಡುವ ಹಿರಿಯರು ಕೊನೆಯಲ್ಲಿ ನಮ್ಮಿಂದ ಪ್ರಕೃತಿಗೆ ಕೇಡಾಗಿದ್ದಲ್ಲಿ ಕ್ಷಮಿಸಬೇಕು ಹಾಗೂ ಇಡೀ ಸಮುದಾಯದ ನೋವುಗಳನ್ನು ದೂರವಾಗಿಸಬೇಕು ಎಂದು ಪ್ರಾರ್ಥಿಸುತ್ತಾರೆ. ಹಾಗೆಯೇ ‘ಪಾಷಾಣ ಮೂರ್ತಿ’ಗೆ ಇರಿಸಲಾದ ಎಡೆಯನ್ನು ಸ್ವಲ್ಪ ಸ್ವಲ್ಪ ತಿನ್ನುವ ಮೂಲಕ ಹಿರಿಯರು ಆ ದಿನದ ಉಪವಾಸವನ್ನು ಅಂತ್ಯ ಮಾಡುತ್ತಾರೆ.

arathims117@gmail.com
(ಲೇಖಕಿ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ)

Tags:
error: Content is protected !!