ಎಚ್.ಡಿ.ಕೋಟೆಯಿಂದ ಮೈಸೂರು ಕಡೆಗೆ ಹಾಗೂ ಮೈಸೂರಿನಿಂದ ಎಚ್.ಡಿ.ಕೋಟೆ ಮಾರ್ಗವಾಗಿ ಸಂಚರಿಸುವ ಸಾರಿಗೆ ನಿಗಮದ ಬಸ್ ಗಳು ಹೈರಿಗೆ, ಮಾದಾಪುರ ಗ್ರಾಮಗಳಲ್ಲಿ ನಿಲುಗಡೆ ಮಾಡುವುದಿಲ್ಲ. ಈ ಎರಡೂ ಗ್ರಾಮಗಳು ಸಾಕಷ್ಟು ಜನಸಂಖ್ಯೆಯನ್ನು ಹೊಂದಿವೆ. ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್ ನಿರ್ವಾಹಕರು ಅಥವಾ ಚಾಲಕರನ್ನು ಕೇಳಿದರೆ ಇದು ‘ನಾನ್ ಸ್ಟಾಪ್’ ಬಸ್ ಎಂದು ಹೇಳುತ್ತಾರೆ. ಗಡಸು ಧ್ವನಿಯಿಂದ ಗದರಿ ಉತ್ತರ ನೀಡುತ್ತಾರೆ.
‘ಮಾದಾಪುರ ಹಾಗೂ ಹೈರಿಗೆ ಗ್ರಾಮಗಳಿಗೆ ದಿನನಿತ್ಯ ಅಕ್ಕಪಕ್ಕದ ಊರುಗಳಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಮಾತ್ರವಲ್ಲದೆ, ಸರ್ಕಾರಿ ನೌಕರರು ಮೈಸೂರು ಮತ್ತು ಎಚ್.ಡಿ.ಕೋಟೆಯಿಂದ ಬಂದು ಹೋಗುತ್ತಾರೆ. ಶಿಕ್ಷಕರು,ಉಪನ್ಯಾಸಕರಿಗೂ ಇದರಿಂದ ಬಹಳ ತೊಂದರೆಯಾಗಿದೆ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಲ್ಲಿ ವಿಳಂಬವಾಗುತ್ತಿದೆ. ಚಿಕಿತ್ಸೆಗಾಗಿ ಮೈಸೂರು ಅಥವಾ ಎಚ್.ಡಿ.ಕೋಟೆ ಕಡೆಗೆ ತೆರಳಬೇಕಾದ ರೋಗಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಸಾರಿಗೆ ನಿಗಮದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಎರಡೂ ಗ್ರಾಮಗಳಲ್ಲಿ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಟ್ಟು ಜನರಿಗೆ ಅನುಕೂಲ ಕಲ್ಪಿಸಲಿ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ. ತಾಲ್ಲೂಕು.





