ಚಿಕ್ಕಮಗಳೂರು ಜಿಲ್ಲೆ ಮಾಚಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕಿಯರು ತಮ್ಮ ಸ್ವಂತ ಖರ್ಚಿನಲ್ಲಿ (೨.೫೦ ಲಕ್ಷ ರೂ.) ಶಾಲೆಯಲ್ಲಿ ಬೋರ್ ವೆಲ್ ಕೊರೆಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಶಿಕ್ಷಕಿಯರ ಕಾರ್ಯ ಶ್ಲಾಘನೀಯವಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಚಿಂತಿಸುವ ಇಂತಹ ಶಿಕ್ಷಕರು ಸಿಗುವುದೇ ಬಹಳ ಅಪರೂಪ. ಇವರಿಬ್ಬರ ಮಾದರಿಯ ನಡೆ ಎಲ್ಲರಿಗೂ ಆದರ್ಶನೀಯ. ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳು ಹಲವು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ಆಟದ ಮೈದಾನ, ಉತ್ತಮ ಕಟ್ಟಡ, ಶೈಕ್ಷಣಿಕ ಉಪಕರಣಗಳು ಮತ್ತು ಶಿಕ್ಷಕರ ಕೊರತೆ ಮುಂತಾದವುಗಳು ಶಾಲೆಯಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಕುಗ್ಗಿಸುತ್ತಿವೆ.
ಅಲ್ಲದೆ ಈ ಕಾರಣಗಳಿಂದಲೇ ನಮ್ಮ ಸರ್ಕಾರಿ ಶಾಲೆಗಳು, ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ. ಇಷ್ಟಕ್ಕೂ ಸರ್ಕಾರಿ ಶಾಲಾ ಸಮಸ್ಯೆ ಗಳನ್ನು ಸರ್ಕಾರವೇ ನಿವಾರಣೆ ಮಾಡಲಿ ಎಂಬ ಧೋರಣೆ ತಪ್ಪಬೇಕಿದೆ. ನಮ್ಮ ಸರ್ಕಾರಿ ಶಾಲೆಗಳ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ಪ್ರತಿಯೊಬ್ಬರೂ ಸರ್ಕಾರದೊಂದಿಗೆ ಕೈಜೋಡಿಸಬೇಕಾದುದು ಅಗತ್ಯವಾಗಿದೆ.
-ಹರಳಹಳ್ಳಿ ಪುಟ್ಟರಾಜು,ಪಾಂಡವಪುರ.





