Mysore
19
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ಯುಗಾದಿಗೂ ಸಿಗದು ಮುಖಂಡರಿಗೆ ಅಧ್ಯಕ್ಷ ಗಾದಿ ಬೆಲ್ಲ?

ಕೆ.ಬಿ.ರಮೇಶ ನಾಯಕ

ಒಂದು ವರ್ಷದ ಆಡಳಿತ ಪೂರೈಸಿದ ಅಯೂಬ್ ಖಾನ್, ಪಿ.ಮರಿಸ್ವಾಮಿ; ಕಾದು ಕಾದು ಬಸವಳಿದಿರುವ ಕಾಂಗ್ರೆಸ್ ಮುಖಂಡರು

ಮೈಸೂರು: ರಾಜ್ಯದಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇನ್ನೆರಡು ತಿಂಗಳಲ್ಲಿ ೨ ವರ್ಷಗಳನ್ನು ಪೂರೈ ಸುತ್ತಿದ್ದರೆ, ಮೈಸೂರಿನಲ್ಲಿ ಖಾಲಿ ಇರುವ ಪ್ರಮುಖ ನಿಗಮ-ಮಂಡಳಿ, ಪ್ರಾಧಿಕಾರದ ಅಧ್ಯಕ್ಷ ಸ್ಥಾನಗಳನ್ನು ಭರ್ತಿ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಯುಗಾದಿ ಹಬ್ಬಕ್ಕೂ ಮುಖಂಡರಿಗೆ ಅಧ್ಯಕ್ಷ ಗಾದಿಯ ಬೆಲ್ಲ ದೊರೆಯುವುದು ಅನುಮಾನವಾಗಿದೆ.

ಇಂದು-ನಾಳೆ ಅಧ್ಯಕ್ಷ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಹೊತ್ತು ಕಾದು ಬಸವಳಿದಿರುವ ಮುಖಂಡರು ನಿರಾಸೆ ಹೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯ ಪಕ್ಷದ ಅನೇಕ ಮುಂದಾಳುಗಳಿಗೆ ರಾಜ್ಯದ ವಿವಿಧ ನಿಗಮ-ಮಂಡಳಿಗಳು, ಪ್ರಾಧಿಕಾರದ ಅಧ್ಯಕ್ಷ ಸ್ಥಾನ ದೊರೆಯುವ ಬಗ್ಗೆ ನಿರೀಕ್ಷೆ, ಆಸೆಗಳನ್ನು ಇಟ್ಟುಕೊಳ್ಳಲಾಗಿತ್ತು.

ಆದರೆ, ಶಾಸಕರಿಗೆ ಅವಕಾಶ ಮಾಡಿಕೊಡಬೇಕಿರುವ ಕಾರಣ ಕೆಲವು ಮುಖಂಡರಿಗೆ ಮಾತ್ರ ಮಣೆ ಹಾಕಿದ್ದರಿಂದ ಸಿಎಂ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಮಹಾಪೌರ ಅಯೂಬ್ ಖಾನ್‌ಗೆ ವಸ್ತು ಪ್ರದರ್ಶನ ಪ್ರಾಧಿಕಾರ, ಚಾ.ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಿ.ಮರಿಸ್ವಾಮಿ ಅವರನ್ನು ಕಾಡಾ ಅಧ್ಯಕ್ಷರನ್ನಾಗಿ, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರನ್ನು ಮುಡಾ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ೨೦೨೪ರ ಮಾರ್ಚ್ ೨ರಂದು ಕೆ.ಮರೀಗೌಡ, ಅಯೂಬ್ ಖಾನ್, ಮಾ.೪ ರಂದು ಪಿ.ಮರಿಸ್ವಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅಯೂಬ್‌ಖಾನ್, ಪಿ.ಮರಿಸ್ವಾಮಿ ಒಂದು ವರ್ಷದ ಆಡಳಿತ ಮುಗಿಸಿ ೨ನೇ ವರ್ಷಕ್ಕೆ ಕಾಲಿಟ್ಟಿರುವುದು ಗಮನಾರ್ಹ ವಾಗಿದೆ.

ಪರಿಷತ್ ಮೇಲೆ ಕಣ್ಣು: ಕಳೆದ ವಿಧಾನಸಭೆ, ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದರೂ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ವಿಧಾನ ಪರಿಷತ್ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಲೋಕ ಸಭಾ ಚುನಾವಣೆ ಹೊತ್ತಲ್ಲಿ ಅವರನ್ನು ರಾಜ್ಯ ಮಟ್ಟದ ನಿಗಮ- ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲು ಸಿಎಂ ಚರ್ಚೆ ಮಾಡಿ ದ್ದರು. ಆದರೆ, ವಿಜಯ ಕುಮಾರ್ ಅವರು, ಅದನ್ನು ನಿರಾಕರಿಸಿ ಪರಿಷತ್‌ನಲ್ಲಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಹೀಗಾಗಿ ಖಾಲಿ ಇರುವ ಸ್ಥಾನಗಳಿಗೆ ಪಕ್ಷದ ಹಿರಿಯ ಮುಖಂಡರು, ಸಿಎಂ ಆಪ್ತ ವಲಯದಲ್ಲಿರುವವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ.

” ಮೈಸೂರು ಭಾಗದಲ್ಲಿ ಖಾಲಿ ಇರುವ ಪ್ರಮುಖವಾದ ಮುಡಾ ಸೇರಿದಂತೆ ಮೂರು ನಿಗಮ, ಮಂಡಗಳಿಗಳ ಹುದ್ದೆಗಳತ್ತ ಪಕ್ಷದ ಮುಂಖಡರ ಚಿತ್ತ ನೆಟ್ಟಿದೆ. ಆದರೆ, ಸರ್ಕಾರ ಸದ್ಯಕ್ಕೆ ನೇಮಕ ಮಾಡುವ ಲಕ್ಷಣ ಕಾಣುತ್ತಿಲ್ಲ. ಈ ಯುಗಾದಿಗೂ ಬೆಲ್ಲದ ಬದಲಿಗೆ ಬೇವು ಗ್ಯಾರಂಟಿಯಾಗಿದೆ. ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್), ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲದ ಕಾರಣ ಸಂಬಂಧಪಟ್ಟ ಸಚಿವರೇ ಅಧ್ಯಕ್ಷರಾಗಿದ್ದಾರೆ. ಆದರೆ, ಅಕ್ಟೋಬರ್ ತಿಂಗಳಲ್ಲಿ ಮರೀಗೌಡರು ರಾಜೀನಾಮೆ ನೀಡಿದ್ದರಿಂದ ತೆರವಾದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಸ್ಥಾನಕ್ಕೆ ಸದ್ಯಕ್ಕೆ ನೇಮಕಾತಿ ಅನುಮಾನ. ಈಗಾಗಲೇ ಮುಡಾ ಬದಲಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿರುವುದರಿಂದ ಮುಡಾ ಇದರ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎನ್ನುವ ಸ್ಪಷ್ಟನೆ ಕೋರಿ ತಿರಸ್ಕರಿಸಿರುವ ಕಾರಣ ನನೆಗುದಿಗೆ ಬಿದ್ದಿದೆ. ಇದು ಇತ್ಯರ್ಥವಾ ದರೂ ಸರ್ಕಾರ ಮುಂದೆ ಯಾರಿಗಾದರೂ ಶಾಸಕರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವರ್ಷ ತುಂಬುವ ಮುನ್ನವೇ ಮರೀಗೌಡ ರಾಜೀನಾಮೆ” 

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಮೂವರು ನಾಯಕರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೂ ಕೆ.ಮರೀಗೌಡರು ಮಾತ್ರ ಕಾರಣಾಂತರದಿಂದ ಅಕ್ಟೋಬರ್ ೧೬ರಂದು ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟು ಹೊರಬಂದರು. ಮರೀಗೌಡ ಅವರಿಗೆ ಮಹತ್ವದ ಮುಡಾ ಅಧ್ಯಕ್ಷ ಸ್ಥಾನವನ್ನು ಸಿಎಂ ಅವರೇ ಕೊಟ್ಟರೂ ಪಕ್ಷದ ಆಂತರಿಕ ವಿರೋಧಿಗಳು ನಡೆಸಿದ ಪಿತೂರಿ, ಕಾರ್ಯಕರ್ತರನ್ನೇ ಎತ್ತಿಕಟ್ಟುವ ಕೆಲಸವಾಗಿದ್ದರಿಂದ ಮನನೊಂದು ಅವರು ರಾಜೀನಾಮೆ ಕೊಡಬೇಕಾಯಿತು.

Tags:
error: Content is protected !!