ಮಂಡ್ಯ: ಹೋಳಿ ಪಾರ್ಟಿಯಲ್ಲಿ ಹೆಚ್ಚಾಗಿದ್ದ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 29 ವಿದ್ಯಾರ್ಥಿಗಳು ಸಂಪೂರ್ಣ ಚೇತರಿಕೆಯಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಂಡ್ಯದ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೇಘಾಲಯದ 22 ವಿದ್ಯಾರ್ಥಿಗಳು ಹಾಗೂ ಮಳವಳ್ಳಿಯ 7 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 29 ವಿದ್ಯಾರ್ಥಿಗಳು ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮಳವಳ್ಳಿಯಲ್ಲಿ ನಡೆದ ಹೋಳಿ ಆಚರಣೆಯಲ್ಲಿ ಭಾಗಿಯಾಗಿದ್ದವರಿಗೆ ಸ್ಥಳೀಯ ಹೋಟೆಲ್‌ನಿಂದ ಆಹಾರ ನೀಡಲಾಗಿತ್ತು. ಬಳಿಕ ಉಳಿದ ಆಹಾರವನ್ನು ಗೋಕುಲ ವಿದ್ಯಾರ್ಥಿ ನಿಲಯಕ್ಕೆ ನೀಡಲಾಗಿತ್ತು. ಈ ಆಹಾರ ಸೇವಿಸಿದ 30 ವಿದ್ಯಾರ್ಥಿಗಳು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದರು.





