- ಕೀರ್ತಿ
‘ಎಲ್ಲ ದೇವರಿಗೂ ಸಲ್ಲುವಂಥ ತಾಳೆ ಹೂವೆ, ಮಲ್ಲಯ್ಯನಿಗ್ಯಾಕೆ ಮರಿಯಾದೆ? ’ ಎಂದು ನಿಂಗಮ್ಮ ಜನಪದ ಹಾಡಿಗೆ ಸೊಲ್ಲು ಹಾಕುತ್ತಿದ್ದರು. ಗುಂಪಿನಲ್ಲಿದ್ದ ಲಕ್ಷಮ್ಮ, ಮಹದೇವಮ್ಮ, ನಾಗಮ್ಮ ಅವರೆಲ್ಲರಿಗಿಂತ ನಿಂಗಮ್ಮ ಅವರೇ ಹಿರಿಯರು.
ವಯಸ್ಸು ಕೇಳಿದರೆ ೯೦ ದಾಟಿದೆ ಎನ್ನುತ್ತಾರೆ. ಆದರೂ ಬತ್ತದ ಉತ್ಸಾಹದಲ್ಲೇ ಪದವನ್ನು ಹಾಡುತ್ತಲೇ ಇರುತ್ತಾರೆ. ಹಾಡಿಗೆಂದು ಗಂಟೆಗಟ್ಟಲೆ ಕೂರುವಾಗ, ತಮಗಿರುವ ದೈಹಿಕ ನೋವಿನ ಅರಿವೇ ಇರದಂತೆ ಹಾಡಿಗೆ ಧ್ವನಿಯಾಗುತ್ತಾರೆ. ಕಣ್ಣು ಮುಚ್ಚಿ, ಪದದೊಳಗೆ ತಲ್ಲೀನರಾಗಿಬಿಡುತ್ತಾರೆ.
ತಿ. ನರಸೀಪುರದ ಮಾರಗೋಡನಹಳ್ಳಿ ಯವರಾದ ನಿಂಗಮ್ಮ ಅವರಿಗೆ ಪದಗಳ ಜೊತೆಗೆಲ್ಲ ಆತ್ಮ ಸಂಬಂಧವಂತೆ. ಇಸ್ಕೂಲ್‌ಗೆ ಹೋಗಿ ಪಾಠ ಕಲಿಯುವುದಿರಲಿ, ಶಾಲೆಯ ದಾರಿಯನ್ನೇ ತಿಳಿಯದ ಇವರ ಬಾಯಿಯಲ್ಲಿ ಅದೆಷ್ಟೋ ಹಾಡುಗಳು ಜೀವ ಪಡೆದು, ಕುಣಿಯುತ್ತವೆ. ಈ ವಯಸ್ಸಿನಲ್ಲಿ ಅವೆಲ್ಲವನ್ನೂ ಹೇಗೆ ನೆನಪಿಟ್ಟುಕೊಳ್ಳುತ್ತೀರಿ ಎಂದು ಕುತೂಹಲಕ್ಕೆ ಕೇಳಿದರೆ, ‘ಸ್ವಚ್ಛ ಮನಸ್ಸಿಂದ ಹಾಡ್ತೀನಿ. ನೆಪ್ಪಿರತ್ತೆ ಕಣವ್ವಾ’ ಎಂದು ಅಚ್ಚರಿ ಹುಟ್ಟಿಸುತ್ತಾರೆ.
ನಿಂಗಮ್ಮ ಅವರು ಚಿಕ್ಕ ವಯಸ್ಸಿನಲ್ಲೇ ಮದುವೆಯಾದರು. ಬಡತನ, ದುಡಿಮೆಯ ಅನಿವಾರ್ಯತೆಯಿಂದಾಗಿ ನಾಟಿ ಕೆಲಸಕ್ಕೆ ಹೋಗುವಂತಾಯಿತು. ಅತ್ತ ಬಿಸಿಲ ಬೇಗೆ ಮೈ ಸುಡುತ್ತಿದ್ದರೂ , ಇತ್ತ ನಾಟಿಗೆ ಬಂದ ಹೆಂಗಸರು ಗುನುಗುತ್ತಿದ್ದ ದೇವರ ಪದಗಳು ಕಿವಿಗೆ ಬೀಳುತ್ತಿತ್ತು. ಪದ ಕಲಿಕೆ ಆರಂಭವಾಗಿದ್ದೇ ಅಲ್ಲಿಂದ ಎನ್ನುತ್ತಾರೆ ನಿಂಗಮ್ಮ ಅವರು. ಸರಿಸುಮಾರು ೩೦ನೇ ವಯಸ್ಸಿನ ತನಕವೂ ಈ ಕಲಿಕೆ ನಿರಂತರವಾಗಿತ್ತು.
ನಂತರ ಮದುವೆ ಕಾರ್ಯಕ್ರಮಗಳಿಗೆ ಹೋಗುವುದು ರೂಢಿಯಾಯಿತು. ಅವರು ಹಾಡದ ಪದಗಳಿಲ್ಲ. ದಂಡಿನ ಮಾರಮ್ಮನ ಹಾಡು, ಬಿಳಿಗಿರಿ ರಂಗಯ್ಯನ ಹಾಡು, ಸೋಬಾನೆ ಪದ, ಅತ್ತೆ ಸೊಸೆಯರ ಕುರಿತಾದ ಹಾಡುಗಳೆಲ್ಲ ಪ್ರಮುಖವಾದವು. ತಾಳ, ಲಯಬದ್ಧವಾದ ಶಾಸ್ತ್ರೀಯ ಕಲಿಕೆ ಇಲ್ಲದಿದ್ದರೂ ಮನಸ್ಸಿಟ್ಟು ಹಾಡುವುದೇ ಮುಖ್ಯ ಎನ್ನುತ್ತಾ ನಿಂಗಮ್ಮ ಬದುಕುತ್ತಿದ್ದಾರೆ.
೭೦ರ ವಯಸ್ಸಿನವರೆಗೂ ನಾಟಿ ಕೆಲಸಕ್ಕೆ ಹೋಗುತ್ತಿದ್ದರು. ಸಹಜವಾದ ಕಾಲಿನ ಸೆಳೆತ, ವೃದ್ಧಾಪ್ಯದ ತೊಂದರೆಯಿಂದಾಗಿ ದುಡಿಯುವುದು ಅಸಾಧ್ಯವಾಗತೊಡಗಿತು. ಆದರೆ, ಜೀವದ ಉಸಿರಿರುವ ತನಕ ಹಾಡುವುದನ್ನು ಮಾತ್ರ ನಿಲ್ಲಿಸುವುದೇ ಇಲ್ಲ ಎಂದು ಹೇಳುವಾಗ ನಿಂಗಮ್ಮ ಅವರ ಜೀವನೋತ್ಸಾಹ ಚಿಮ್ಮುತ್ತದೆ!
ಆಕಾಶವಾಣಿಯಲ್ಲಿ ಜನಪದ ಸಂಗೀತ ಕಲಾವಿದರಾಗಿ ಅಪರಿಚಿತರಾಗೇ ಉಳಿದ ಅನೇಕ ಹಾಡುಗಾರ್ತಿಯರ ನಡುವೆ ನಿಂಗಮ್ಮ ಅವರೂ ಒಬ್ಬರು. ಸಂಸಾರದ ತಾಪತ್ರಯದೊಳಗೆ ನಿಂಗಮ್ಮ ಒಂಟಿಯಾಗಿದ್ದರೂ ಪದ ಹೇಳಲು ಹೋಗುವುದೆಂದರೆ ಅವರಿಗೆ ಸಂಭ್ರಮದಂತೆ ಎಂದು ನಿಂಗಮ್ಮ ಅವರ ಹಾಡಿನ ಬಳಗದ ಜೊತೆಗಾರ್ತಿಯರು ಹೇಳುತ್ತಾರೆ.
ವಯಸ್ಸಿನ ಮುಪ್ಪುತನವನ್ನು ಮರೆಸುವಷ್ಟು ಪದಗಳೆಲ್ಲ ನಿಂಗಮ್ಮ ಅವರಿಗೆ ನಿತ್ಯ ಚೈತನ್ಯವನ್ನು ನೀಡುತ್ತವೆ ಎಂಬುದು ಸುಳ್ಳಲ್ಲ. ನಮ್ಮ ಸುತ್ತಲಿನ ಜನಪದ ಹಾಡುಗಾರ್ತಿಯರು ನಮ್ಮೊಳಗೆ ಕಳೆದುಹೋಗದಿರಲಿ.





