Mysore
29
scattered clouds

Social Media

ಶನಿವಾರ, 03 ಜನವರಿ 2026
Light
Dark

6 ತಿಂಗಳೊಳಗೆ ಹಾಡಿಗಳಿಗೆ ವಿದ್ಯುದ್ದೀಕರಣ ಭಾಗ್ಯ!

ಕೇಂದ್ರ ಸರ್ಕಾರದಿಂದ ೫೫. ೧೪ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ

ಕೆ. ಬಿ. ರಮೇಶನಾಯಕ
ಮೈಸೂರು: ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಮೂಲ ಸೌಕರ್ಯದ ಕೊರತೆ ಜತೆಗಿರುವ ಸಮರ್ಪಕ ವಿದ್ಯುತ್ ಇಲ್ಲದೆ ಕಗ್ಗತ್ತಲಿನಲ್ಲಿ ಮುಳುಗಿರುವ ಕಾಡಂಚಿನ ಹಾಡಿಗಳಿಗೆ ಆರು ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ವಿದ್ಯುದ್ದೀಕರಣ ಭಾಗ್ಯ ದೊರೆಯಲಿದ್ದು, ಕೇಂದ್ರ ಸರ್ಕಾರ ಶಕ್ತಿ ಮಂತ್ರಾಲಯದಿಂದ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ.

ಹಾಡಿಗಳಲ್ಲಿ ಸೋಲಾರ್ ಲೈಟ್ ಮತ್ತು ಸೋಲಾರ್ ಬೀದಿ ದೀಪಗಳಿಂದ ಹೆಚ್ಚು ಪ್ರಯೋಜನಕಾರಿಯಾಗದ ಕಾರಣ ವಿದ್ಯುತ್ ವಿತರಣಾ ಮಾರ್ಗದ ಮೂಲಕವೇ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುವ ಈ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಇದರಿಂದಾಗಿ ಮಳೆಗಾಲ, ಬೇಸಿಗೆ ಕಾಲದಲ್ಲೂ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ಈ ಜನರ ಮುಖದಲ್ಲಿ ಮಂದಹಾಸ ಮಿನುಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಹಾಡಿಗಳನ್ನು ಹೊಂದಿರುವ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಮಾರ್ಗಗಳು ಇರಲಿಲ್ಲ. ವಿದ್ಯುತ್ ಮಾರ್ಗ ಕಲ್ಪಿಸಲು ಅರಣ್ಯ ಇಲಾಖೆ ಕೂಡ ಅವಕಾಶ ನೀಡುತ್ತಿರಲಿಲ್ಲ. ಇದರಿಂದಾಗಿ ಈ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸೋಲಾರ್ ವಿದ್ಯುತ್ ಬೀದಿದೀಪಗಳನ್ನು ಅಳವಡಿಸಿದ್ದರೂ, ಅದು ಮಂದಬೆಳಕಿಗೆ ದಾರಿಯಾಗಿತ್ತಷ್ಟೆ.

ಕಾಡಿನ ಹೊರಭಾಗದಲ್ಲಿರುವ ಹಾಡಿಗಳ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಇದ್ದರೂ, ಒಳಭಾಗಕ್ಕೆ ಸೇರಿದಂತೆ ಇರುವ ಹಾಡಿಗಳ ಜನರಿಗೆ ಇದರ ಭಾಗ್ಯ ಇರಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವಂತೆ ಹಲವಾರು ವರ್ಷಗಳಿಂದ ಬೇಡಿಕೆ ಬಂದಿದ್ದರೂ ಕಾರ್ಯಗತವಾಗಿರಲಿಲ್ಲ. ಕೊನೆಗೂ ಕೇಂದ್ರ ಸರ್ಕಾರ ಹಾಡಿಗಳಿಗೆ ವಿದ್ಯುದ್ದೀಕರಣ ಭಾಗ್ಯ ಕಲ್ಪಿಸಲು ಮೂರು ಜಿಲ್ಲೆಗಳ ೭೪ ಹಾಡಿಗಳಿಗೆ ೫೫. ೧೪ ಕೋಟಿ ರೂ. ವೆಚ್ಚದ ಯೋಜನೆಗೆ ಅನುಮತಿ ನೀಡಿದೆ. ಈಗಾಗಲೇ ೩೦. ೮ ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ಮೂಲಕ ಆರು ತಿಂಗಳಲ್ಲಿ ಜನವಸತಿ ಹಾಡಿಗಳಿಗೆ ಸಂಪರ್ಕ ದೊರೆಯಲಿದೆ.

ಪಿಎಂ ಜನ್‌ಮನ್ ಯೋಜನೆ ನೆರವಿನಲ್ಲಿ ಬೆಳಕು: ಜೇನುಕುರುಬ ಆದಿವಾಸಿ ಸಮುದಾಯವನ್ನು ವಿಶೇಷವಾಗಿ ದುರ್ಬಲ ಬುಡಕಟ್ಟು ಎಂದು ಗುರುತಿಸಲಾಗಿದ್ದು, ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಯಲ್ಲಿ ಆದಿವಾಸಿ ಸಮುದಾಯಕ್ಕೆ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ೪. ೬೦ ಕೋಟಿ ರೂ. ವೆಚ್ಚದ ೧೬೦ ಹಾಡಿಗಳಲ್ಲಿರುವ ೧,೭೮೫ ವಸತಿಗಳಿಗೆ ಈ ಯೋಜನೆ ಮಂಜೂರಾಗಿದ್ದು, ಈಗಾಗಲೇ ೧,೫೩೦ ವಸತಿಗಳಿಗೆ ಸೌಲಭ್ಯ ಕಲ್ಪಿಸಿರುವುದರಿಂದ ಜೇನುಕುರುಬ ಸಮುದಾಯದವರಲ್ಲಿ ಸಂತಸ ಮನೆ ಮಾಡಿದೆ.

Tags:
error: Content is protected !!