ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಆಯೋಜಿಸಿದ್ದ ಔತಣಕೂಟಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಗೈರಾಗಿದ್ದಕ್ಕೆ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಐದು ವರ್ಷ ಪೂರೈಸಿದ ಕಾರಣ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಇದಕ್ಕೆ ಪರಮೇಶ್ವರ್ ಭಾಗವಹಿಸಿರಲಿಲ್ಲ. ಏಕೆಂದರೆ, ಅವರ ಕಡೆಯ ವ್ಯಕ್ತಿಯೊಬ್ಬರು ನಿಧನರಾಗಿದ್ದ ಕಾರಣ ಅವರ ಬರಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬೇಗುದಿ ಇಲ್ಲ. ವಿಪಕ್ಷದವರು ಸುಮ್ಮನೇ ವಿವಾದಗಳನನ್ನೆಬ್ಬಿಸುತ್ತಾರೆ. ಈ ಭೋಜನಾಕೂಟದಲ್ಲಿ ಮುಖ್ಯಮಂತ್ರಿ ಸೇರಿದಂತೆ, ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಭಾಗವಹಿಸುವ ಮೂಲಕ ಈ ವಿವಾದಗಳಿಗೆ ತೆರೆ ಎಳೆದಿದ್ದಾರೆ ಎಂದು ತಿಳಿಸಿದರು.
ಅಧಿವೇಶನ ನಡೆದಾಗ ಸಾಮಾನ್ಯವಾಗಿ ಸಚಿವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಔತಣಕೂಟ ಆಯೋಜಿಸುತ್ತಾರೆ. ಇದರಲ್ಲಿ ವಿಶೇಷವೇನೂ ಇಲ್ಲ ಎಂದರು.





