‘ಶ್ರೀ ಕ್ಷೇತ್ರ ಕೈವಾರ ತಾತಯ್ಯ’ ಮತ್ತು ‘ದೇವನಹಳ್ಳಿ’ ಚಿತ್ರಗಳನ್ನು ನಿರ್ದೇಶಿಸಿರುವ ಪಲ್ಲಕ್ಕಿ ರಾಧಾಕೃಷ್ಣ, ಆನಂತರ ಒಂದೆರಡು ಚಿತ್ರಗಳನ್ನು ನಿರ್ದೇಶಿಸುವುದಾಗಿ ಸುದ್ದಿಯಾದರೂ, ಕಾರಣಾಂತರಗಳಿಂದ ಆ ಚಿತ್ರಗಳು ಬಿಡುಗಡೆಯಾಗಲಿಲ್ಲ. ಇದೀಗ ಅವರು ಸದ್ದಿಲ್ಲದೆ, ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಎಂಬ ಹೊಸ ಚಿತ್ರದೊಂದಿಗೆ ಬಂದಿದ್ದಾರೆ.
ಚಾಮಯ್ಯ ಮತ್ತು ರಾಮಾಚಾರಿ ಎಂಬ ಹೆಸರು ಕೇಳಿದರೆ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರ ನೆನಪಿಗೆ ಬರುತ್ತದೆ. ಆ ಚಿತ್ರಕ್ಕೂ, ಈ ಚಿತ್ರಕ್ಕೂ ಏನಾದರೂ ಸಂಬಂಧವಿದೆಯಾ ಎಂಬ ಪ್ರಶ್ನೆ ಬರಬಹುದು. ಹೌದು ಸಂಬಂಧವಿದೆ. ಚಾಮಯ್ಯ ಸನ್ ಆಫ್ ರಾಮಾಚಾರಿ’, ‘ನಾಗರಹಾವು’ ಚಿತ್ರದ ಮುಂದುವರಿದ ಭಾಗ.
ಈ ಚಿತ್ರದ ಕುರಿತು ಮಾತನಾಡುವ ಪಲ್ಲಕ್ಕಿ, ‘ಈ ಬಂಧನ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ, ಸಣ್ಣದೊಂದು ಎಳೆ ಹೇಳಿದ್ದೆ. ಅವರೂ ಇಷ್ಟಪಟ್ಟಿದ್ದರು. ಅವರು ಕಾಲವಾದ ನಂತರ ಇದನ್ನು ಮಾಡುವುದು ಬೇಡವೆಂದು ಸುಮ್ಮನಿದ್ದೆ. ಒಮ್ಮೆ ಉತ್ತರ ಕರ್ನಾಟಕದಲ್ಲಿ ನಾಟಕ ನೋಡಲು ಹೋದಾಗ ಅಲ್ಲಿ ರಂಗಭೂಮಿಯ ಹಿರಿಯ ಕಲಾವಿದರಾದ ಜಯಶ್ರೀರಾಜ್ ನಟನೆಯನ್ನು ನೋಡಿದಾಗ, ಸಿನಿಮಾ ಮಾಡುವ ಯೋಚನೆ ಬಂದು, ಈ ಚಿತ್ರವನ್ನು ಮಾಡಿದ್ದೇನೆ’ ಎಂದರು.
ಮೂಲ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ರಾಮಾಚಾರಿ ಮತ್ತು ಮಾರ್ಗರೆಟ್ ಬೆಟ್ಟದ ಮೇಲಿಂದ ಬೀಳುತ್ತಾರೆ ಎಂದು ತೋರಿಸಲಾಗಿದೆ. ಅವರೇನಾದರು ಎಂದು ತೋರಿಸಿಲ್ಲ. ಅಲ್ಲಿಗೆ ಚಿತ್ರ ಮುಗಿಯುತ್ತದೆ. ಅಲ್ಲಿಂದ ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಮುಂದುವರಿಯುತ್ತದೆ ಎನ್ನುವ ಪಲ್ಲಕ್ಕಿ, ‘ನಮ್ಮ ಚಿತ್ರದಲ್ಲಿ ಮಾರ್ಗರೆಟ್ ಪಾತ್ರ ಸತ್ತಿರುತ್ತದೆ. ರಾಮಾಚಾರಿ ಬದುಕುಳಿದಿರುತ್ತಾನೆ. ಆತನಿಗೆ ಊರಿನಲ್ಲಿ ಆಶ್ರಯ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಪೈಲ್ವಾನ್ ಬಸಪ್ಪ, ರಾಮಾಚಾರಿಗೆ ಆಶ್ರಯ ನೀಡಿ, ಚಿತ್ರದುರ್ಗದ ವೃತ್ತಿ ರಂಗಭೂಮಿಗೆ ಸೇರಿಸುತ್ತಾರೆ. ಅಲ್ಲಿ ರಾಮಾಚಾರಿಗೆ ಯುವತಿಯೊಂದಿಗೆ ಪ್ರೀತಿಯಾಗಿ, ಇಬ್ಬರಿಗೂ ಹುಟ್ಟಿದ ಮಗು ಚಾಮಯ್ಯ. ಮುಂದೆ ಒಂದು ಘಟ್ಟದಲ್ಲಿ ರಾಮಾಚಾರಿ ಬದುಕಿನಲ್ಲಿ ಘೋರ ದುರಂತ ನಡೆಯುತ್ತದೆ. ಆಗ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಚಿತ್ರದಕಥೆ’ಎಂದು ವಿವರಿಸಿದರು ಅವರು.
ಮೂಲ ಚಿತ್ರದ ಪಾತ್ರಗಳು ಇಲ್ಲೂ ಮುಂದುವರಿಯುತ್ತವಂತೆ. ‘ಚಾಮಯ್ಯನಾಗಿ ಪ್ರದೀಪ್ ಶಾಸ್ತ್ರಿ, ಮಗಳಾಗಿ ಚೈತ್ರಾ, ಪ್ರಿನ್ಸಿಪಾಲ್ (ಲೋಕನಾಥ್) ಆಗಿ ಪ್ರಕಾಶ್ ಅರಸು, ಪ್ರೇಮಾ ಗೌಡ, ವಿನುತ, ರಾಘವೇಂದ್ರ, ಸುಧಾಕರ, ಸೂರ್ಯತೇಜ, ಕಾರ್ತಿಕ್, ಗುರುಕಿರಣ್, ಸಂದೀಪ್ ಮುಂತಾದವರು ನಟಿಸಿದ್ದಾರೆ. ನಾನು ಈ ಚಿತ್ರದಲ್ಲಿ ಜಲೀಲನ (ಅಂಬರೀಷ್) ಮಗ ಚೋಟಾ ಜಲೀಲ್ ಆಗಿ ನಟಿಸಿದ್ದೇನೆ. ಕೊಲೆ ತನಿಖೆ ಮಾಡುವ ಪೊಲೀಸ್ ಅಽಕಾರಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದರು.
ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪಲ್ಲಕ್ಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಪಲ್ಲಕ್ಕಿ ಸ್ಟುಡಿಯೋಸ್ ಬ್ಯಾನರ್ ಅಡಿ ವಿತರಣೆಯನ್ನೂ ಮಾಡುತ್ತಿ ದ್ದಾರೆ. ಚಿತ್ರಕ್ಕೆ ‘ಕೋಟೆ ನಾಡಿನ ನಾಗರಹಾವು’ ಎಂಬ ಅಡಿಬರಹವಿದೆ. ಚಿತ್ರಕ್ಕೆ ಸ್ಯಾಂ ಸಂಗೀತ ಸಂಯೋಜನೆ ಮತ್ತು ಎಂ.ಆರ್.ಸೀನು ಛಾಯಾಗ್ರಹಣವಿದೆ. ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.