Mysore
32
few clouds

Social Media

ಶನಿವಾರ, 15 ಮಾರ್ಚ್ 2025
Light
Dark

ಕಿಡಿ ಹೊತ್ತಿಸಲು ಬಂದ ನಿರಂಜನ್ ಹೊಸ ಚಿತ್ರ ‘ಸ್ಪಾರ್ಕ್’ ಪ್ರಾರಂಭ

ವ್ಯವಸ್ಥೆಯ ವಿರುದ್ಧ ಹೋರಾಡುವ ಪತ್ರಕರ್ತರ ಕುರಿತಾಗಿ ಹಲವು ಸಿನಿಮಾಗಳು ಬಂದಿವೆ. ಇದೀಗ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸಹ ಪತ್ರಕರ್ತನಾಗಿ, ವ್ಯವಸ್ಥೆಯ ವಿರುದ್ಧ ಕಿಡಿ ಹೊತ್ತಿಸುವುದಕ್ಕೆ ತಯಾರಾಗಿದ್ದಾರೆ. ನಿರಂಜನ್ ಹೊಸ ಚಿತ್ರದ ಹೆಸರು ‘ಸ್ಪಾರ್ಕ್’.

ಇತ್ತೀಚೆಗೆ ಈ ಚಿತ್ರದ ಮುಹೂರ್ತ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿ ದೇಗುಲದಲ್ಲಿ ನೆರವೇರಿತು. ‘ಡಾರ್ಲಿಂಗ್’ ಕೃಷ್ಣ, ಮಿಲನಾ ನಾಗರಾಜ್ ಹಾಗೂ ನವೀನ್ ಶಂಕರ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.

ಇದೊಂದು ನೈಜ ಘಟನೆಯಾಧರಿಸಿ ನಿರ್ಮಾಣವಾಗುತ್ತಿರುವ ಚಿತ್ರವಾಗಿದ್ದು, ಈ ಚಿತ್ರವನ್ನು ಡಾ.ಗರಿಮಾ ಅವಿನಾಶ್ ವಸಿಷ್ಠ ನಿರ್ಮಿಸುತ್ತಿದ್ದಾರೆ. ‘ಸ್ಪಾರ್ಕ್’, ಮಹಾಂತೇಶ್ ಹಂದ್ರಾಳ್ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರವನ್ನು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ‘ಜೇಮ್ಸ್’, ‘ಭರಾಟೆ’, ‘ಕನಕ’ ಸೇರಿದಂತೆ ೧೫ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರಂಜನ್ ಸುಧೀಂದ್ರ, ‘ಈ ಸಿನಿಮಾಗಾಗಿ ಮಹಾಂತೇಶ್ ಒಂದು ಅದ್ಭುತ ಕಥೆ ಬರೆದಿದ್ದಾರೆ. ಮಾಧ್ಯಮದವರಿಗೆ ಇರುವ ಸ್ಪಾರ್ಕ್ ಇನ್ಯಾರಿಗೂ ಇರುವುದಿಲ್ಲ. ಯಾವುದೇ ವಿಷಯದ ಬಗ್ಗೆ ಮೊದಲು ಕಿಡಿಹೊತ್ತಿಸುವವರು ಅವರೇ. ನಮ್ಮ ಕಥೆಯಲ್ಲಿ ಚಿಕ್ಕ ಕಿಡಿ ಇದೆ. ಅದನ್ನು ‘ಸ್ಪಾರ್ಕ್’ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಸಿನಿಮಾದಲ್ಲಿ ನಾನು ಅಭಿರಾಮ್ ಎಂಬ ಪತ್ರಕರ್ತನ ಪಾತ್ರ ಮಾಡುತ್ತಿದ್ದೇನೆ’ ಎಂದರು. ನಿರಂಜನ್ ಸುಧೀಂದ್ರಗೆ ನಾಯಕಿಯಾಗಿ ರಚನಾ ಇಂದರ್ ನಟಿಸುತ್ತಿದ್ದಾರೆ.

ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.

Tags: