Mysore
21
overcast clouds

Social Media

ಶನಿವಾರ, 03 ಜನವರಿ 2026
Light
Dark

ಪೀಟರ್ಸ್ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ

ಮಹಾದೇಶ್ ಎಂ.ಗೌಡ

ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ

ಹನೂರು: ತಾಲ್ಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೀಟರ್ಸ್ ಕಾಲೋನಿಯಲ್ಲಿ ಒಂದು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ವಾರ್ಡಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನೀರು ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಪಂ ವ್ಯಾಪ್ತಿಯ ಮೂರನೇ ವಾರ್ಡ್‌ಗೆ ಸೇರಿದ ಈ ಬಡಾವಣೆಯಲ್ಲಿ ೭೦ ಕುಟುಂಬಗಳಿದ್ದು, ೩೦೦ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈ ಬಡಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಿದ್ದು ಸಮರ್ಪಕ ಮೂಲಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ.

ಮೂರನೇ ವಾರ್ಡಿಗೆ ಸೇರಿದ ಪೀಟರ್ಸ್ ಕಾಲೋನಿಯಲ್ಲಿ ಮೂರು ಕೊಳವೆ ಬಾವಿಗಳಿದ್ದು ಎರಡರಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ನೀರು ಬರುತ್ತಿಲ್ಲ. ಉಳಿದ ಒಂದು ಕೊಳವೆ ಬಾವಿಯಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಕೇವಲ ೨೦ ನಿಮಿಷ ಮಾತ್ರ ನೀರು ಬರುತ್ತಿದ್ದು, ಸುಮಾರು ೪೦ ಬಿಂದಿಗೆಗಳಷ್ಟು ನೀರು ಮಾತ್ರ ಲಭ್ಯವಾಗುತ್ತಿದೆ. ಇದರಿಂದ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಡಿನ ನಿವಾಸಿಗಳು ಪೆಟ್ರೋಲ್ ಬಂಕ್ ಹಾಗೂ ಇನ್ನಿತರ ತೋಟದ ಮನೆಗಳಲ್ಲಿ ಮಾಲೀಕರನ್ನು ಕಾಡಿಬೇಡಿ ಕುಡಿಯುವ ನೀರು ಪಡೆದುಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಮಾಲೀಕರು ಇಲ್ಲದೇ ಇರುವ ಸಮಯದಲ್ಲಿ ಕುಡಿಯುವ ನೀರು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆಡಳಿತ ಟ್ಯಾಂಕರ್ ಮೂಲಕವಾದರೂ ಕುಡಿಯುವ ನೀರು ಪೂರೈಕೆಮಾಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಕೆರೆಗೆ ನೀರು ಬಿಡುವಂತೆ ಮನವಿ: ತಾಲ್ಲೂಕಿನ ಉಡುತೊರೆ ಜಲಾಶಯದಿಂದ ಕೌದಳ್ಳಿ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವಂತೆ ಕೌದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇವತಿ ಪ್ರವೀಣ್ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಪುದುರಾಮಾಪುರದವರೆಗೆ ಮಾತ್ರ ನೀರು ಬಿಟ್ಟಿದ್ದಾರೆ. ನೀರು ಕೌದಳ್ಳಿ ಕೆರೆಗೆ ಬಂದು ಸೇರುವ ಮೊದಲೇ ಜಲಾಶಯದಲ್ಲಿ ನೀರು ನಿಲ್ಲಿಸಿದ್ದಾರೆ. ಇದರಿಂದ ಕೆರೆಗೆ ನೀರು ಬಾರದೆ ಇರುವುದರಿಂದ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದಿದೆ ಎಂದು ಪತ್ರಿಕೆಗೆ ತಿಳಿಸಿದರು.

ಸಮಸ್ಯೆಯನ್ನು ಬಗೆಹರಿಸುವಂತೆ ಪಿಡಿಒ ಆಕಾಶ್ ರವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಾರ್ಡಿನ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.

” ಕೌದಳ್ಳಿ ಗ್ರಾಮದ ಪೀಟರ್ಸ್ ಕಾಲೋನಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ಬಹಳ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಯುವವರೆಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು.”

ಸವರಿಯಪ್ಪನ್, ಪೀಟರ್ಸ್ ಕಾಲೋನಿ ನಿವಾಸಿ.

” ಪೀಟರ್ಸ್ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಇಒ ಅವರನ್ನು ಕಳುಹಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು.”

ಮೋನಾ ರೋತ್, ಸಿಇಒ, ಜಿಲ್ಲಾ ಪಂಚಾಯಿತಿ.

” ಪೀಟರ್ಸ್ ಕಾಲೋನಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಾರ್ಡಿನ ನಿವಾಸಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಸೋಮವಾರದಿಂದಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ಪಿಡಿಒಗೆ ಸೂಚನೆ ನೀಡಿದ್ದೇನೆ.”

ಉಮೇಶ್, ಇಒ, ಹನೂರು ತಾಪಂ

Tags:
error: Content is protected !!