ನವೀನ್ ಡಿಸೋಜ
ಗ್ರಾಪಂ ವತಿಯಿಂದ ಉತ್ತಮ ನಿರ್ವಹಣೆ; ಸಾರ್ವಜನಿಕರಿಂದ ಮೆಚ್ಚುಗೆ
ಮಡಿಕೇರಿ: ಸಾಮಾನ್ಯವಾಗಿ ಬಸ್ ತಂಗುದಾಣ ಮತ್ತು ಶೌಚಗೃಹ ನಿರ್ಮಾಣ, ಉದ್ಘಾಟನೆಗೆ ಇರುವ ಉತ್ಸಾಹ ನಂತರದ ನಿರ್ವಹಣೆ ವಿಷಯಕ್ಕೆ ಬಂದಾಗ ಇರುವುದಿಲ್ಲ. ಹಾಗಾಗಿ ಹೆಚ್ಚಿನ ಕಡೆಗಳಲ್ಲಿ ಗ್ರಾಮೀಣ ಬಸ್ ತಂಗುದಾಣಗಳು ಪ್ರಯಾಣಿಕರು ಉಪಯೋಗಿ ಸಲು ಆಗದ ಸ್ಥಿತಿಯಲ್ಲಿ ಕಂಡುಬರುತ್ತದೆ. ಆದರೆ, ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಬಸ್ ತಂಗುದಾಣ ಮತ್ತು ಸಾರ್ವಜನಿಕ ಶೌಚಗೃಹ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ.
ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯ ಕೋರಂಗಾಲ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಬಳಿ ಇರುವ ಬಸ್ ತಂಗುದಾಣ ಮತ್ತು ಶೌಚಗೃಹ ಸ್ವಚ್ಛತೆಯ ಕಾರಣಕ್ಕೆ ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ಬಸ್ ತಂಗುದಾಣ ಮತ್ತು ಶೌಚಗೃಹಕ್ಕೆ ಆಗಮಿಸಿದವರಿಗೂ ಶುಚಿತ್ವದ ಪಾಠ ಮಾಡುತ್ತಿದೆ. ಇದು ನಿರ್ಮಾಣ ಆಗಿ ಸುಮಾರು ಒಂದೂವರೆ ವರ್ಷ ಆಗಿದ್ದರೂ ಇನ್ನೂ ಹೊಚ್ಚ ಹೊಸದರಂತೆ ಕಂಡುಬರುತ್ತಿರುವುದರ ಹಿಂದೆ ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಕಾಳನ ರವಿ ಅವರ ಇಚ್ಛಾಶಕ್ತಿಯೇ ಇದಕ್ಕೆ ಕಾರಣವಾಗಿದೆ.
ಕೋರಂಗಾಲ ಗ್ರಾಮದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಕೊಡಗು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳೂ ಓದುತ್ತಿದ್ದಾರೆ. ಹಾಗಾಗಿ ಇಲ್ಲಿ ಪೋಷಕರು ಸೇರಿದಂತೆ ವಿವಿಧ ಕಾರಣಗಳಿಗೆ ಜನರ ಓಡಾಟ ಕಂಡುಬರುತ್ತದೆ. ಸ್ಥಳೀಯ ನಿವಾಸಿಗಳೂ ಬಸ್‌ಗಾಗಿ ಕಾಯಲು ಇದೇ ಸ್ಥಳವನ್ನು ಅವಲಂಬಿಸಿದ್ದಾರೆ.
ಈ ಮೊದಲು ಇಲ್ಲಿ ಬಸ್ ತಂಗುದಾಣ ಇಲ್ಲದಿರುವಾಗ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಬಸ್‌ಗಾಗಿ ಕಾಯುವವರು ಮಳೆಗಾಲದ ಜಡಿ ಮಳೆ, ಬೇಸಿಗೆಯ ಬಿಸಿಲಿನಲ್ಲಿ ಪರಿತಾಪ ಪಡುತ್ತಿದ್ದರು. ಇದನ್ನು ಗಮನಿಸಿದ ಗ್ರಾ.ಪಂ. ಅಧ್ಯಕ್ಷ ಕಾಳನ ರವಿ ಇಲ್ಲಿಗೊಂದು ಬಸ್ ತಂಗುದಾಣ ನಿರ್ಮಿಸಲು ಯೋಚಿಸಿದರು.
ಭಾಗಮಂಡಲದಂಥ ಗ್ರಾ.ಪಂ.ಗಳಿಗೆ ಇರುವ ಕಡಿಮೆ ಆದಾಯದಲ್ಲಿ ದೊಡ್ಡ ಮಟ್ಟದ ಯೋಜನೆಗಳನ್ನು ರೂಪಿಸುವುದು ಕಷ್ಟ. ಆದರೂ ಧೈರ್ಯ ಮಾಡಿದ ಕಾಳನ ರವಿ ಬಸ್ ತಂಗು ದಾಣದ ಜತೆಯಲ್ಲೇ ಶೌಚಗೃಹ ನಿರ್ಮಾಣದ ಚಿಂತನೆಯನ್ನೂ ನಡೆಸಿ ಕಾರ್ಯರೂಪಕ್ಕೆ ತಂದರು.ಅದರಂತೆ ಬಸ್ ತಂಗುದಾಣ ಹಾಗೂ ಶೌಚಗೃಹ ನಿರ್ಮಾಣ ಮಾಡಲಾಗಿದೆ.
ಗ್ರಾ.ಪಂ. ಅಧ್ಯಕ್ಷ ಕಾಳನ ರವಿ ವಾರಕ್ಕೆ ಕನಿಷ್ಠ ೨ ಬಾರಿ ಈ ಬಸ್ ತಂಗುದಾಣ ಮತ್ತು ಶೌಚಗೃಹಕ್ಕೆ ಭೇಟಿ ಕೊಡುತ್ತಾರೆ. ಖುದ್ದಾಗಿ ಸ್ವಚ್ಛತೆಯ ಬಗ್ಗೆ ನಿಗಾ ವಹಿಸುತ್ತಾರೆ. ಈ ಸಂಬಂಧ ಸ್ಥಳದಲ್ಲಿ ಇರು ವವರಲ್ಲಿ ಜಾಗೃತಿ ಮೂಡಿಸುತ್ತಾರೆ. ಆರಂಭದ ದಿನಗಳಲ್ಲಿ ಈ ಬಸ್ ತಂಗುದಾಣದಲ್ಲೂ ಪ್ರಯಾಣಿಕರು ಬೇಕಾಬಿಟ್ಟಿ ವರ್ತಿಸಿ ಅಶುಚಿತ್ವಕ್ಕೆ ಕಾರಣರಾಗುತ್ತಿದ್ದರು. ಆದರೆ ನಿರಂತರ ನಿಗಾ, ಜಾಗೃತಿ ಕಾರ್ಯ ಕ್ರಮಗಳಿಂದ ಈಗ ಪರಿಸ್ಥಿತಿ ಬದಲಾಗಿದೆ. ಈ ತಂಗುದಾಣ ಮತ್ತು ಶೌಚಗೃಹ ಬಳಸುವವರೇ ಸ್ವಚ್ಛತಾ ಕಾರ್ಯ ನಡೆಸುವುದೂ ಇದೆ.
ಕೋರಂಗಾಲ ಗ್ರಾಮದ ಈ ಬಸ್ ತಂಗುದಾಣ ಮತ್ತು ಶೌಚಗೃಹವನ್ನು ಕೇವಲ ಬಸ್‌ಗೆ ಕಾಯುವವರೂ ಮಾತ್ರ ಬಳಸುವುದಿಲ್ಲ. ತೀರ್ಥ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಗೆ ನಾಪೋಕ್ಲು, ವಿರಾಜಪೇಟೆ ಕಡೆಯಿಂದ ಬರುವವರು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ವಿಶ್ರಾಂತಿ ಪಡೆಯಲು, ನೈಸರ್ಗಿಕ ಕರೆಗಾಗಿ ಈ ಸ್ಥಳವನ್ನು ಉಪಯೋಗಿಸುವುದು ಕಂಡುಬರುತ್ತಿದೆ. ಇಲ್ಲಿಯ ನಿರ್ವಹಣಾ ವ್ಯವಸ್ಥೆಗೆ ವ್ಯಾಪಕ ಮೆಚ್ಚುಗೆಯ ಮಾತುಗಳೂ ಕೇಳಿಬರುತ್ತಿವೆ. ಇತರೆಡೆಗಳಲ್ಲೂ ಸ್ಥಳೀಯ ಜನಪ್ರತಿನಿಧಿಗಳು ಇಂತಹ ಮುತುವರ್ಜಿ ತೋರಿಸುವಂತಾಗಲಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
೫.೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ..!
ಮಡಿಕೇರಿ: ನೋಡುಗರ ಗಮನ ಸೆಳೆಯುತ್ತಿರುವ ಬಸ್ ತಂಗುದಾಣ ಹಾಗೂ ಶೌಚಗೃಹವನ್ನು ಒಟ್ಟು ೫.೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗ್ರಾ.ಪಂ. ಅನುದಾನ ೭೫ ಸಾವಿರ ರೂ., ಕಾವೇರಿ ನೀರಾವರಿ ನಿಗಮದ ಅನುದಾನ ೨ ಲಕ್ಷ ರೂ. ಹಾಗೂ ದಾನಿಗಳ ಸಹಕಾರದಿಂದ ನಿರ್ಮಿಸಲಾಗಿದೆ. ಒಂದೂವರೆ ವರ್ಷದ ಹಿಂದೆಯೇ ಈ ಸುಸಜ್ಜಿತ ಬಸ್ ತಂಗುದಾಣ ಮತ್ತು ಶೌಚಗೃಹ ನಿರ್ಮಿಸಿದ್ದರೂ ಈಗಲೂ ಶುಚಿಯಾಗಿರುವುದು ವಿಶೇಷ.
” ಇರುವ ೫ ವರ್ಷಗಳ ಅವಧಿಯಲ್ಲಿ ಜನರ ಒಳಿತಿಗಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಪಂಚಾಯಿತಿ ಅಧ್ಯಕ್ಷ ಆಗಿದ್ದೇನೆ. ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಸಾರ್ವಜನಿಕರು ಹಾಗೂ ದಾನಿಗಳ ಸಹಾಯದಿಂದ ಒಂದಿಷ್ಟು ಕೆಲಸ ಮಾಡಲು ಸಾಧ್ಯ ಆಗಿದೆ. ಇನ್ನೊಂದಿಷ್ಟು ಕನಸುಗಳನ್ನೂ ಇಟ್ಟುಕೊಳ್ಳಲಾಗಿದೆ. ಕೋರಂಗಾಲ ಗ್ರಾಮದ ಈ ಬಸ್ ತಂಗುದಾಣ ಮತ್ತು ಶೌಚಗೃಹದ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರ ಕೊಡುಗೆಯೂ ಸಾಕಷ್ಟು ಇದೆ. ಇಲ್ಲಿ ನಾನು ಕೇವಲ ನೆಪ ಮಾತ್ರ ಆಗಿದ್ದೇನೆ.”
-ಕಾಳನ ರವಿ, ಅಧ್ಯಕ್ಷ, ಗ್ರಾ.ಪಂ., ಭಾಗಮಂಡಲ





