Mysore
16
scattered clouds

Social Media

ಶುಕ್ರವಾರ, 09 ಜನವರಿ 2026
Light
Dark

ಬೇಸಿಗೆ ಉಷ್ಣಾಂಶ ಏರಿಕೆ: ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ

ಪ್ರಶಾಂತ್ ಎಸ್.

ಡಿಎಚ್‌ಓ ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ತಂಡ ರಚನೆ 

ಮನೆ, ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಅರಿವು

ಪ್ರತಿ ಆರೋಗ್ಯ ಕೇಂದ್ರದಲ್ಲಿ ಓಆರ್‌ಎಸ್ ಪ್ಯಾಕೆಟ್‌ಗಳ ಸಂಗ್ರಹ,

ಕರುಳು ಸಂಬಂಧಿ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ

ಮೈಸೂರು: ಬಿಸಿಲಿನ ಝಳಕ್ಕೆ ಜನರು ತತ್ತರಿಸಿದ್ದು, ವಾತಾವರಣದಲ್ಲಿ ಉಷ್ಣಾಂಶದ ಏರಿಕೆ ಕಂಡುಬರುತ್ತಿರುವುದರಿಂದ ಜೀವ ಸಂಕುಲದ ಆರೋಗ್ಯದಲ್ಲೂ ಏರುಪೇರು ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲಾಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬೇಸಿಗೆಯ ವಾತಾವರಣವನ್ನು ಆರೋಗ್ಯಕರವಾಗಿಡಲು ಶ್ರಮಿಸುತ್ತಿದೆ.

ಬೇಸಿಗೆಯಲ್ಲಿ ತಾಪಮಾನ ಹೆಚ್ಚುವುದರಿಂದ ಕರುಳು ಸಂಬಂಧಿ ಕಾಯಿಲೆಗಳು ಹಾಗೂ ಸಾಂಕ್ರಾಮಿಕ ರೋಗಗಳು ಉಲ್ಬಣ ಗೊಳ್ಳುತ್ತವೆ. ಕೆಲ ವರ್ಷಗಳಿಂದ ಹೀಟ್ ವೇವ್ ಪ್ರಕರಣಗಳು ಗೋಚರಿಸುತ್ತಿವೆ. ಇದಕ್ಕಾಗಿ ಆರೋಗ್ಯ ಇಲಾಖೆ ತನ್ನ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬೇಸಿಗೆಯಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿದರೆ ಯಾವ ರೀತಿ ಅದನ್ನು ಉಪ ಶಮನಗೊಳಿಸಬೇಕು ಹಾಗೂ ಪರಿಸ್ಥಿತಿ ಉಲ್ಬಣಗೊಳ್ಳದಂತೆ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸ ಬೇಕು ಮತ್ತು ಮಾರ್ಗೋ ಪಾಯಗಳೇನು ಎಂಬುದರ ಕುರಿತು ಮಾಹಿತಿಯನ್ನು ನೀಡಿದೆ.

ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಕಾರ್ಯ ನಿರ್ವಹಣೆ: ಮೈಸೂರು ಜಿಲ್ಲೆ ಯಲ್ಲಿ ೧೧೩೫ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳು ಇವೆ. ಇವುಗಳು ಗ್ರಾಮ ಮಟ್ಟದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯ ಕುರಿತು ನಿರಂತರವಾಗಿ ಸದಾ ಗಮನಿಸುತ್ತವೆ.ಈ ಸಮಿತಿಯ ಸದಸ್ಯರು ಗ್ರಾಮಗಳಲ್ಲಿ ಕಸ ರಾಶಿ ಬೀಳದ ಹಾಗೆ ನಿರ್ವಹಿಸುತ್ತಾರೆ. ಚರಂಡಿಯಲ್ಲಿ ನೀರು ಒಂದೇ ಕಡೆ ನಿಲ್ಲದಂತೆ ಎಚ್ಚರವಹಿಸುತ್ತಾರೆ. ಶುದ್ಧ ಕುಡಿಯುವ ನೀರು ಸರಬರಾಜಾಗುವುದರ ಬಗ್ಗೆ ನಿಗಾ ವಹಿಸುವುದ ಲ್ಲದೆ, ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತಾರೆ.

ನೊಣ, ಕ್ರಿಮಿಕೀಟಗಳ ಬಗ್ಗೆ ಇರಲಿ ಎಚ್ಚರ: ಸುರಕ್ಷಿತವಲ್ಲದ ರೀತಿಯಲ್ಲಿ ಇಟ್ಟಿರುವ ಹಣ್ಣು-ಪಾನೀಯಗಳಿಂದ ಕಾಯಿಲೆ ಹರಡುವ ಸಂಭವವಿದೆ. ಹಣ್ಣುಗಳ ಮೇಲೆ ನೊಣ,ಇನ್ನಿತರ ಕ್ರಿಮಿ ಕೀಟಗಳು ಕುಳಿತು ರೋಗವಾಹಕಗಳಾಗಿ ಮಾರ್ಪಡುತ್ತವೆ. ನಾಗರಿಕರು ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಆಹಾರ ಸೇವಿಸುವ ಮೊದಲು ಕೈಯನ್ನು ಸ್ವಚ್ಛವಾಗಿ ತೊಳೆದು ಕೊಳ್ಳಬೇಕು ಎಂಬುದೂ ಸೇರಿದಂತೆ ಆರೋಗ್ಯ ನಿರ್ವಹಣೆ ಕುರಿತು ಹಲವು ಕ್ರಮಗಳನ್ನು ಅನುಸರಿಸಬೇಕು.

ಓಆರ್‌ಎಸ್ ಪ್ಯಾಕೆಟ್ ಸಂಗ್ರಹ: ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರಗಳಲ್ಲಿ ಓಆರ್‌ಎಸ್ ದ್ರಾವಣದ ಪೊಟ್ಟಣಗಳನ್ನು ಸಂಗ್ರಹಿಸಿ ಇಡಲಾಗಿದೆ. ಜಿಲ್ಲೆಯಲ್ಲಿ ೫೧೦ ಆರೋಗ್ಯ ಉಪ ಕೇಂದ್ರಗಳು ಇದ್ದು, ಇವುಗಳಲ್ಲಿ ತಲಾ ಒಂದರಿಂದ ಒಂದೂವರೆ ಸಾವಿರ ಓಆರ್‌ಎಸ್ ಪೊಟ್ಟಣಗಳನ್ನು ಸಂಗ್ರಹಿಸಿ ಇಡಲಾಗಿದೆ. ಅಗತ್ಯವಿದ್ದಲ್ಲಿ ಮತ್ತಷ್ಟು ಪೂರೈಸಲಾಗುತ್ತದೆ.

ವಿಶೇಷ ಆರೈಕೆ: ಹೀಟ್ ವೇವ್ ಹಾಗೂ ಕರುಳು ಸಂಬಂಧಿ ಕಾಯಿಲೆಗಳ ಪ್ರಕರಣಗಳು ಕಂಡುಬಂದರೆ ಅವರನ್ನು ವಿಶೇಷವಾಗಿ ಆರೈಕೆ ಮಾಡಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೨ ಹಾಸಿಗೆಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ೫ ಹಾಸಿಗೆಗಳನ್ನು ಮೀಸಲಿಡಲಾಗಿದೆ.

ಸಮಿತಿಯ ಸದಸ್ಯರು,ಅಂಗನವಾಡಿ ಕಾರ್ಯಕರ್ತೆಯರು,ಆಶಾಕಾರ್ಯಕರ್ತೆಯರು ಗ್ರಾಮದ ಪ್ರತಿ ಮನೆಗೂ ತೆರಳಿ, ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ, ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ. ಸಾರ್ವತ್ರಿಕ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಗಮನಕ್ಕೆ ವಿಷಯವನ್ನು ತಲುಪಿಸುತ್ತಾರೆ.

” ಸಾರ್ವಜನಿಕರು ಅವಶ್ಯವಿದ್ದಾಗ ಮಾತ್ರ ಮಧ್ಯಾಹ್ನದ ಬಿಸಿಲಿನಲ್ಲಿ ಓಡಾಡಬೇಕು. ವೈಯಕ್ತಿಕ ಸ್ವಚ್ಛತೆಗೆ ಕಟ್ಟುನಿಟ್ಟಿನ ಗಮನ ಹರಿಸಬೇಕು. ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಆದಷ್ಟೂ ಸ್ವಚ್ಛವಾಗಿ ಟ್ಟುಕೊಳ್ಳಬೇಕು. ಈ ಕ್ರಮಗಳಿಂದ ಕಾಯಿಲೆಗಳು ಬರುವುದನ್ನು ತಡೆಗಟ್ಟಬಹುದು.”

-ಡಾ.ಪಿ.ಸಿ.ಕುಮಾರಸ್ವಾಮಿ, ಡಿಎಚ್‌ಓ, ಮೈಸೂರು.

Tags:
error: Content is protected !!