Mysore
28
scattered clouds

Social Media

ಭಾನುವಾರ, 25 ಜನವರಿ 2026
Light
Dark

ಅಲ್ಪ ಸಂಖ್ಯಾತರ ಓಲೈಕೆ ಬಜೆಟ್ ಖಂಡಿಸಿ ಬಿಜೆಪಿ ಪ್ರತಿಭಟನೆ

ಮಂಡ್ಯ: ಅಲ್ಪಸಂಖ್ಯಾತರ ಓಲೈಕೆ ಮಾಡಿ, ರೈತರನ್ನು ಕಡೆಗಣಿಸಿರುವ ರಾಜ್ಯ ಬಜೆಟ್ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಾಮ ಬಳಿದುಕೊಂಡು ಶಂಕ-ಜಾಗಟೆ ಬಾರಿಸಿ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ, ಮುಲ್ಲಾಗಳು ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರುಗಳಿಗೆ ಗೌರವ ಧನ 6 ಸಾವಿರ ರೂ. ಹೆಚ್ಚಳ ಮಾಡಿರುವ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ಕಾಲೋನಿಗಳು ಹಾಗೂ ಬಡಾವಣೆ ಅಭಿವೃದ್ಧಿಗೆ 1 ಸಾವಿರ ಕೋಟಿ ನೀಡಿದ್ದಾರೆ. ಹೆಚ್ಚುವರಿ ಉರ್ದು ಶಾಲೆಗಳ ನಿರ್ಮಾಣಕ್ಕೆ ಹಾಗೂ ಉತ್ತೇಜನಕ್ಕಾಗಿ 100 ಕೋಟಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಮಾತನಾಡಿ, ಮೇಕೆದಾಟು ಮಾಡಿ ದೊಡ್ಡ ಹಂಗಾಮ ಸೃಷ್ಠಿಸಿದ್ದ ಕಾಂಗ್ರೆಸ್ ಪಕ್ಷ, ಈ ಬಾರಿಯ ಬಜೆಟ್‌ನಲ್ಲಿ ಆ ಯೋಜನೆಗೆ ನಯಾ ಪೈಸೆ ಸಹ ಇಟ್ಟಿಲ್ಲ ಇದು ಇವರ ಬದ್ಧತೆಯೇ ಎಂದು ಪ್ರಶ್ನಿಸಿದರು.

ನಂದಿನಿ ಹಾಲಿನ ಪ್ರೋತ್ಸಾಹ ಧನವನ್ನು 5 ರಿಂದ 7 ರೂ.ಗಳಿಗೆ ಏರಿಕೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ, ಈವರೆಗೂ ಅದು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ಮಾತನಾಡಿ, ಅಲ್ಪಸಂಖ್ಯಾತ ಮಹಿಳೆಯರ ಸರಳ ವಿವಾಹಕ್ಕೆ 50 ಸಾವಿರ ರೂ.ಗಳವರೆಗೆ ಅನುದಾನ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇತರೆ ವರ್ಗದ ಜನರಿಗೆ ಅನ್ಯಾಯ ಮಾಡಿದ್ದಾರೆ. ಸಮ ಸಮಾಜ ನಿರ್ಮಾಣ ನಮ್ಮ ಕನಸು ಎನ್ನುವ ಮುಖ್ಯಮಂತ್ರಿಗಳು ಎಲ್ಲಿ ಸಮ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಮುಖಂಡರಾದ ಯೋಗೇಶ್, ಆನಂದ್, ಶಿವಣ್ಣ, ಪ್ರಸನ್ನಕುಮಾರ್, ಚಂದ್ರು, ಶಿವಕುಮಾರ್, ಶಿವಲಿಂಗಯ್ಯ, ಶಿವಕುಮಾರ್ ಆರಾಧ್ಯ, ಜ್ಯೋತಿ, ಶ್ವೇತಾ, ಲಕ್ಷ್ಮಿ ವಸಂತ್, ಮಳವಳ್ಳಿ ಕೃಷ್ಣ, ಧನಂಜಯ, ನಾಗಾನಂದ, ಎಂ.ಸಿ. ಸಿದ್ದು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!