ಡಾ. ಅರವಿಂದ ಮಾಲಗತ್ತಿ
ನನ್ನ ತಮ್ಮ ತಾಯಿಯ ಹೊಟ್ಟೆಯಲ್ಲಿ ಇರುವಾಗಲೇ ನನ್ನಪ್ಪ ತೀರಿಕೊಂಡ. ಆತನ ಮರ್ಮಾಂಗಕ್ಕೆ ಚೇಳು ಕಚ್ಚಿದ್ದರಿಂದ ಯಾರಲ್ಲೂ ಹೇಳಿಕೊಳ್ಳಲಾಗದೆ ಕಣ್ಮುಚ್ಚಿದ. ಆತ ಪ್ರಾಥಮಿಕ ಶಾಲೆಯಲ್ಲಿ ಮಾಸ್ತರ್ ಆಗಿದ್ದ. ಅಂದಿನಿಂದ ನನ್ನ ತಾಯಿ ವಿಧವೆಯಾಗಿ ಐದು ಜನ ಮಕ್ಕಳನ್ನು ಕಟ್ಟಿಕೊಂಡು ಅವರಿಗಾಗಿ ತನ್ನನ್ನೇ ತಾನು ಸವೆಸಿಕೊಂಡಳು.
ನನ್ನವ್ವ ಜನಪದ ಹಾಡುಗಾರ್ತಿ, ಆಶು ಕವಯಿತ್ರಿಯೂ ಹೌದು. ನನ್ನಪ್ಪ ತೀರಿಕೊಂಡಾಗ ಆತನ ಮೇಲೆಯೂ ಹಾಡು ಕಟ್ಟಿ ಹಾಡಿದವಳು. ಆ ಹಾಡು ಹೇಳುವಾಗಲೆಲ್ಲ ಆಕೆಗೆ ದುಃಖ ಉಮ್ಮಳಿಸಿದಾಗ, ಆಕೆಯೊಂದಿಗೆ ನಾನು ದುಃಖಿಸಿದ್ದೇನೆ. ಗಂಡನನ್ನು ಕಳೆದುಕೊಂಡ ಅವ್ವ ಜೀವನದುದ್ದಕ್ಕೂ ಆತನ ನೆನಪಿನಲ್ಲಿ ಕಾಲ ಕಳೆದಳು. ಸಂದರ್ಭ ಬಂದಾಗೆಲ್ಲ ದೇವರನ್ನು ಶಪಿಸುತ್ತಿದ್ದಳು. ಒಂದರ್ಥದಲ್ಲಿ ನಾನು ನಾಸ್ತಿಕನಾಗಲು ಅವಳ ಬೈಗುಳಗಳೇ ಕಾರಣ. ಮಂಗಳೂರಿನಲ್ಲಿದ್ದಾಗ ತರಗತಿಯಲ್ಲಿ ನವೋದಯದ ಬಗ್ಗೆ ಪಾಠ ಮಾಡಿ ಊಟಕ್ಕೆ ಮನೆಗೆ ಬಂದಿದ್ದೆ. ಊಟ ಮಾಡುತ್ತಲೇ ರಾಜಾರಾಮ್ ಮೋಹನ್ ರಾಯರ ಚಿಂತನೆಯಲ್ಲಿ ಮುಳುಗಿದ್ದೆ. ಆಗ ನಾನು ತಾಯಿಗೆ ಕೇಳಿದೆ –
“ಯವ್ವ ನೀನು ಇನ್ನೊಂದು ಮದುವೆಯಾಗಿ ಹೋಗಬಹುದಿತ್ತಲ್ಲ, ಯಾಕೆ ಮದುವೆ ಆಗ್ಲಿಲ್ಲ? ” ಎಂದೆ.
ಇಷ್ಟು ಕೇಳಿದ್ದೆ ತಡ ಕೆಕ್ಕರಗಣ್ಣಿಂದ ದಿಟ್ಟಿಸಿ ನೋಡುತ್ತಾ ಮುಂದೆ ಇದ್ದ ಊಟದ ತಟ್ಟೆಯನ್ನು ಜಾಡಿಸಿ ಮುಂದಕ್ಕೆ ತಳ್ಳಿಬಿಟ್ಟಳು. “ಯಾಕೆ ನಾನು ನಿನಗೆ ಇಷ್ಟು ಭಾರ ಆದ್ನಾ? ಇನ್ನು ಮದುವೆನೇ ಆಗಿಲ್ಲ ಹಿಂಗ್ ಹೇಳ್ತೀಯಾ, ಮದುವೆಯಾದ ಮೇಲೆ ಗತಿ ಏನೊ? ಬಾಳ ಓದಿ, ಬಾಳ ಶಾಣ್ಯಾ ಆಗಿದಿ. . . ನಾನು ಬದುಕಿದ್ದು ಸಾರ್ಥಕ ಆಯ್ತು. . . ಸಾಕಿನ್ನ, ನಾ ಇಲ್ಲಿ ಇರೋದಿಲ್ಲ. ನನಗೆ ಊರಿಗೆ ಕಳ್ಸು. . . ” ಎಂದು ಹಠ ಹಿಡಿದು ಕುಳಿತಳು. ಅವಳಿಗೆ ಏನೇ ತಿಳಿ ಹೇಳಿದರೂ ಯಾವ ಪರಿಣಾಮಗಳೂ ಆಗಲಿಲ್ಲ. ಅನ್ನ ನೀರು ಬಿಟ್ಟಳು. ನಾನು ‘ತಪ್ಪಾಯಿತು’ ಎಂದು ಪರಿಪರಿಯಾಗಿ ಬೇಡಿದರೂ ಕೇಳಲಿಲ್ಲ. ಅಂತಹ ಹಠಮಾರಿ ಅವಳು.
“ಅತ್ತು ಅತ್ತು ಮುತ್ಯಾಗ ನುಂಗಿದೆ, ನಿಮ್ಮ ಅಪ್ಪನಿಗೂ ನುಂಗಿದೆ, ಇನ್ನಾರಿಗೆ ನುಂಗಬೇಕು ಅಂತ ಅಳುತ್ತೀಯಾ? ” ಎಂದು ಪಕ್ಕದಲ್ಲಿಯೇ ಬಿದ್ದ ಒಡಕು ಡಬ್ಬಿಯಿಂದ ಹೊಡೆದಿದ್ದಳಂತೆ, ನನ್ನ ಹಣೆಯಲ್ಲಿ ಈಗಲೂ ಆ ಗಾಯವಿದೆ. ಅನಂತರ ಬಾಚಿ ತಬ್ಬಿ ಅತ್ತಿದ್ದಳಂತೆ! ಅದನ್ನು ನನ್ನ ಚಿಕ್ಕಮ್ಮ ಕಥೆ ಮಾಡಿ ಹೇಳುತ್ತಿದ್ದಳು. ಅತೀ ಸಿಟ್ಟು, ಮರುಕ್ಷಣವೇ ಮಂಜುಗಡ್ಡೆಯಂತೆ ಕರಗಿ ನೀರಾಗುವವಳು. ಸಿಟ್ಟು ಬಂದಾಗ ದೇವರಿಗೆ ಬೈಯುತ್ತಿದ್ದಳು ಮತ್ತೆ ಅದೇ ದೇವರಿಗೆ ಹರಕೆ ಹೊರುತ್ತಿದ್ದಳು.
ಮಂಗಳೂರಿನ ಮನೆಯಲ್ಲಿ ಇದ್ದಾಗ, ಊಟಕ್ಕೆ ಕುಳಿತ ಸಂದರ್ಭದಲಿ ನನ್ನ ತಾಯಿ ಎಡಗೈಯಿಂದ ಊಟ ಮಾಡುವುದನ್ನು ಗಮನಿಸಿದ್ದೆ, ಬಲಗೈಗೆ ಏನೋ ಆಗಿರಬಹುದು ಅದಕ್ಕೆ ಎಡಗೈಯಿಂದ ಊಟ ಮಾಡುತ್ತಿದ್ದಾಳೆ ಎದ್ದುಕೊಂಡಿದ್ದೆ. ಒಂದೆರಡು ಬಾರಿ ಕೇಳಿದರೂ ಹಾರಿಕೆಯ ಉತ್ತರ ಕೊಟ್ಟು ಮರೆಸಿ ಬಿಡುತ್ತಿದ್ದಳು. ಹೀಗೆ ಹೆಚ್ಚು ಕಾಲ ಕಳೆದಿತ್ತು. ಆಕೆಗೆ ಎಡಗೈಯೇ ಬಲಗೈಯಾಗಿ ಹೋಗಿತ್ತು. ಒಮ್ಮೆ ನಿಷ್ಟೂರವಾಗಿ ಬೈದು, ಅವಳಂತೆ ಊಟ ಮಾಡುವುದನ್ನು ಬಿಟ್ಟು ಎದ್ದಾಗ, “ನೀನು ನನ್ನನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುವುದಾದರೆ ಹೇಳುವೆ” ಎಂದು ಗುಟ್ಟು ಬಿಟ್ಟುಕೊಟ್ಟಳು.
ನೀನು ಮದುವೆಯಾಗಲಿ ಎಂದು ದೇವರಿಗೆ ಹರಕೆ ಹೊತ್ತಿರುವೆ, ಒಮ್ಮೆ ಕರೆದುಕೊಂಡು ಹೋಗು ಎಡಗೈಯಿಂದ ಊಟ ಮಾಡುವುದನ್ನು ಬಿಡುವೆ ಎಂದಳು. ಆಕೆ ಮೊದಲು ತನ್ನ ಸಂಬಂಧಿಕರಲ್ಲಿ ಇರುವ ಹೆಣ್ಣಿನ ಬಗ್ಗೆ ಮದುವೆಯಾಗಲು ಹೇಳಿದ್ದಳು. ನಾನು ಧರಣಿಯನ್ನು ಮದುವೆಯಾಗುವುದು ಅಷ್ಟು ಇಷ್ಟವಿರಲಿಲ್ಲ. . . ಮದುವೆಗೆ ಒಪ್ಪಿದ್ದೆನಲ್ಲ ಎನ್ನುವುದೇ ಆಕೆಗೆ ಹೆಚ್ಚು ಸಂತೋಷವಾಗಿತ್ತು. “ನಿನ್ನ ಹಣೆಬರಹ ಆಗಿದ್ದಾಗಲಿ ಆಗು” ಎಂದಳು. ಮೈಸೂರಿಗೆ ಬಂದಾಗ ಒಮ್ಮೆ ಏನಾಗಿತ್ತೋ ಏನೋ ಧರಣಿಯೊಂದಿಗೆ ಕಟಿಯಾಗಿ ಜಗಳ ಕಾದಿದ್ದಳು.
ನಾನು ಕಂಡದ್ದು ಅದೇ ಮೊದಲು ಅದೇ ಕೊನೆ. ನಾನು ಇಬ್ಬರ ಮೇಲೂ ರೇಗಿದ್ದೆ. ಅನಂತರದ ದಿನಗಳಲ್ಲಿ “ನಮ್ಮ ಮನೆಯಲ್ಲಿ ಅಚ್ಚುಮೆಚ್ಚಿನ ಸೊಸೆ ಎಂದರೆ ನೀನೇ” ಎಂದೂ, ನಮ್ಮ ಜಾತಿಯ ಸೊಸೆಯರಿಗಿಂತಲೂ ಧರಣಿಯೇ ಬಹಳ ಒಳ್ಳೆಯವಳು ಎಂದು ಹಾಡಿ ಹೊಗಳುತ್ತಿದ್ದಳು. ಧರಣಿಯು ಅನ್ಯೋನ್ಯವಾಗಿದ್ದು ಅಂತೆಯೇ ಅವಳನ್ನು ನೋಡಿಕೊಂಡಿದ್ದಾಳೆ.
ಮನೆ ಕೆಲಸದ ತಂಗಮ್ಮನ್ನೊಂದಿಗೆಯೂ ಹಾಗೇ ಚೌಕಾಬಾರ ಆಡುವಾಗ ಅವಳೊಂದಿಗೆ ಕದನ “ನಡೆ ಎದ್ದು ಹೋಗು” ಎನ್ನುವವಳು ಮತ್ತೆ ಒಪ್ಪಂದ ಮತ್ತೆ ಅವಳೊಂದಿಗೆ ಆಟ! ಕೆಲವೊಮ್ಮೆ ಮಕ್ಕಳಂತೆ ಇನ್ನೂ ಕೆಲವೊಮ್ಮೆ ಕಾಳಿಯಂತೆ ಕೆಲವೊಮ್ಮೆ ದೇವತೆಯಂತೆ. ಹೀಗೆಯೇ ಅವತಾರಗಳು.
ಆಗಾಗ “ಮಗನೇ ಜೀವನದಲ್ಲಿ ಎರಡು ಜೋಳಿಗೆ ಇರಬೇಕು. ಒಂದು ಹೆಗಲ ಮುಂದೆ ಇನ್ನೊಂದು ಹೆಗಲ ಹಿಂದೆ ಹಾಕಬೇಕು. ಬೈದದ್ದು ಬೈಸಿಕೊಂಡದ್ದು ಕೊಟ್ಟದ್ದು, ಕೆಟ್ಟದ್ದೆಲ್ಲ ಹಿಂದಿನ ಜೋಳಿಗೆಗೆ, ಹೊಗಳಿದ್ದು, ಹೊಗಳಿಸಿಕೊಂಡಿದ್ದು, ಇಸ್ಕೊಂಡಿದ್ದು, ಒಳ್ಳೆಯದೆಲ್ಲ ಮುಂದಿನ ಜೋಳಿಗೆ ಹಾಕ್ಬೇಕು” ಎಂದು ಹೇಳುತ್ತಿದ್ದಳು ಅಂತೆಯೇ ಆಕೆ ಬದುಕಿದವಳು.
ಅವಳಿಲ್ಲದ ದಿನಗಳಲ್ಲಿ ಎಲ್ಲವೂ ಮರುಕಳಿಸುತ್ತವೆ. ಅವಳು ಹಾಡು ಕಟ್ಟಿ ಹಾಡುವುದನ್ನು ಕೇಳಿ ನಾನೂ ಅವಳಂತೆಯೇ ಕಟ್ಟಿ ಹಾಡುತ್ತಿದ್ದೆ. ನಾನು ಕವಿಯಾದದ್ದು ಅವಳಿಂದಲೇ. ನಾನು ತಾಯಿಯ ಕುರಿತು ಬರೆಯುತ್ತಿದ್ದ ಖಂಡ ಕಾವ್ಯದ ಕೆಲ ಭಾಗಗಳನ್ನು ಅವಳಿಗೆ ಓದಿ ಹೇಳಿದ್ದೆ, ಆಗ ನನ್ನ ಎರಡು ಕೆನ್ನೆಗಳನ್ನು ಹಿಡಿದು ನನ್ನ ಹಣೆಗೆ ಲೊಚಲೊಚನೆ ಮುತ್ತು ಕೊಡುತ್ತಾ – “ಯಪ್ಪಾ ನಾನು ಹುಟ್ಟಿದ್ದು ಸಾರ್ಥಕ ಆಯ್ತು ನೋಡು” ಎಂದಿದ್ದಳು. ನನ್ನ ತಾಯಿಯ ಕುರಿತು ಬರೆದಷ್ಟು ಮತ್ತಿನ್ನಾರ ಬಗ್ಗೆಯೂ ನಾನು ಅಷ್ಟೊಂದು ಬರೆದಿಲ್ಲ. ಆಕೆ ನನ್ನ ಕಾವ್ಯದಲ್ಲಿ ನದಿಯಾಗಿ ಹರಿದಿದ್ದಾಳೆ; ಎದೆಯಲ್ಲಿ ಕಡಲಾಗಿ ನಿಂತಿದ್ದಾಳೆ.
aravindmalagatti@gmail.com





