Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಮೈಸೂರು ವಿವಿ: ಬೋಧಕ ಸಿಬ್ಬಂದಿ ಭರ್ತಿ ಸನ್ನಿಹಿತ

ಕೆ.ಬಿ.ರಮೇಶನಾಯಕ

೨೨೦ ಬೋಧಕ ಸಿಬ್ಬಂದಿ, ೭೬ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಮನವಿ

ಮೈಸೂರು: ದಶಕಗಳಿಂದ ಬೋಧಕ, ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ಕಂಗೆಟ್ಟಿ ರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಶುಭ ಸುದ್ದಿ ಹೊರ ಬೀಳುವ ಸಾಧ್ಯತೆ ಇದೆ.

ಮೈಸೂರು ವಿವಿಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.೫೦ ರಷ್ಟಾದರೂ ಭರ್ತಿ ಮಾಡಬೇಕೆಂಬ ವಿವಿಯ ಮನವಿಗೆ ಸ್ಪಂದಿಸಿರುವ ಸರ್ಕಾರ ಪ್ರಸ್ತಾವನೆಯನ್ನು ತರಿಸಿಕೊಂಡಿದೆ. ಹಣಕಾಸು ಇಲಾಖೆ ಒಪ್ಪಿಗೆ ನೀಡಿದ ತಕ್ಷಣ ನೇಮಕಾತಿಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಖಾಯಂ ಅಧ್ಯಾಪಕರು ಇಲ್ಲದೆ ಅತಿಥಿ ಪ್ರಾಧ್ಯಾಪಕರೇ ತುಂಬಿಕೊಂಡಿರುವುದರಿಂದ ನಿರೀಕ್ಷಿತ ಸಂಶೋಧನೆ, ಪ್ರಬಂಧ ಮಂಡನೆಗಳು ಆಗದೆ ಕಳಾಹೀನವಾಗಿರುವ ಮೈಸೂರು ವಿವಿಯಲ್ಲಿ ದಶಕಗಳಿಗೂ ಹೆಚ್ಚು ಕಾಲದಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.

ವಿವಿಯಲ್ಲಿ ೬೬೪ ಹುದ್ದೆಗಳನ್ನು ಸೃಜಿಸಲಾಗಿದ್ದು, ಹಾಲಿ ೨೩೮ ಹುದ್ದೆಗಳು ಮಾತ್ರ ಖಾಯಂ ಹುದ್ದೆಗಳಾಗಿವೆ. ನಿವೃತ್ತಿಯಿಂದ ತೆರವಾದ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡದ ಕಾರಣ ಖಾಯಂ ಹುದ್ದೆಗಳಿಗಿಂತ ಅತಿಥಿ ಪ್ರಾಧ್ಯಾಪಕರ ಹುದ್ದೆಗಳ ಹೆಚ್ಚಾಗಿವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ೮೦೦ ಮಂದಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ವಾರದಲ್ಲಿ ೪ ಗಂಟೆ ಪಾಠ ಮಾಡುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ೮ ಸಾವಿರ ರೂ., ೮ ಗಂಟೆ ಬೋಧನೆ ಮಾಡುವವರಿಗೆ ೧೬ ಸಾವಿರ ರೂ., ೧೨ ಗಂಟೆ ಬೋಧನೆ ಮಾಡುವವರಿಗೆ ೨೮ ಸಾವಿರ ರೂ.ವೇತನ ಕೊಡಲಾಗುತ್ತದೆ.

ಖಾಯಂ ಬೋಧಕರಿಗೆ ವಿವಿಧ ಭತ್ಯೆಗಳೂ ಸೇರಿದಂತೆ ಒಂದು ಲಕ್ಷ ರೂ. ಗಳಿಗಿಂತಲೂ ಹೆಚ್ಚು ಭರಿಸಬೇಕಿರುವ ಕಾರಣ ಖಾಯಂ ನೇಮಕಾತಿಗೆ ಸರ್ಕಾರ ಮನಸ್ಸು ಮಾಡುತ್ತಲೇ ಇರಲಿಲ್ಲ. ಆದರೆ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು(ಯುಜಿಸಿ) ಖಾಯಂ ಬೋಧಕರ ಸಂಖ್ಯೆ ಯುಜಿಸಿ ನಿಯಮಾವಳಿ ಪ್ರಕಾರ ನಿಗದಿಪಡಿಸಿರುವ ಸಂಖ್ಯೆಗಿಂತ ಕೆಳಗೆ ಕುಸಿದರೆ ಕಷ್ಟವಾದೀತು ಎನ್ನುವ ಸಲಹೆ ನೀಡಿರುವ ಕಾರಣ ಮತ್ತೊಮ್ಮೆ ವಿವಿಯು ಸರ್ಕಾರದ ಗಮನಕ್ಕೆ ತಂದಿದೆ ಎಂದು ಹೇಳಲಾಗಿದೆ.

ಶೀಘ್ರದಲ್ಲೇ ಅನುಮತಿ: ಮೈಸೂರು ವಿವಿಯಲ್ಲಿ ಹಾಲಿ ಶೇ.೩೬ರಷ್ಟು ಖಾಯಂ ಹುದ್ದೆಗಳಿದ್ದು, ಶೇ.೬೪ರಷ್ಟು ಖಾಲಿ ಇವೆ. ತುರ್ತಾಗಿ ೭೬ ಬ್ಯಾಕ್ಲಾ ಗ್ ಹುದ್ದೆಗಳು, ೨೨೦ ಬೋಧಕ ಸಿಬ್ಬಂದಿಯನ್ನು ನೇಮಕಾತಿ ಮಾಡಿ ಕೊಳ್ಳಲು ಅನುಮತಿ ನೀಡುವಂತೆ ಸಲ್ಲಿಸಿರುವ ಪ್ರಸ್ತಾವನೆಗೆ ಶೀಘ್ರ ಅನು ಮತಿ ದೊರೆಯುವ ಸಾಧ್ಯತೆ ಇದೆ. ಕಳೆದ ತಿಂಗಳು ಕುಲಪತಿಗಳ ಸಭೆ ಕರೆದಿದ್ದ ಉನ್ನತ ಶಿಕ್ಷಣ ಸಚಿವರು ಪ್ರಸ್ತಾವನೆ ಸಲ್ಲಿಸುವಂತೆ ನೀಡಿದ ಸೂಚನೆ ಮೇರೆಗೆ ಹುದ್ದೆಗಳ ಮಾಹಿತಿಯನ್ನು ರವಾನಿಸಲಾಗಿದೆ.

ಇದಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೂಡ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಮಾತನಾಡಿದ್ದಾರೆ. ಎಂ.ಕೆ.ಸವಿತಾ ಅವರು ಕುಲಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿವಿಯಲ್ಲಿ ಕಾಡುತ್ತಿರುವ ಹಲವಾರು ಸಮಸ್ಯೆಗಳ ಪಟ್ಟಿ ಮಾಡಿದ್ದು, ಅದರಲ್ಲಿ ಬಹುಮುಖ್ಯವಾಗಿ ಬೋಧಕ, ಬೋಧಕೇತರ ಸಿಬ್ಬಂದಿ ಸಮಸ್ಯೆ ಕಾಡುತ್ತಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಸರ್ಕಾರವೇ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರಿಂದ, ಬ್ಯಾಕ್‌ಲಾಗ್, ಬೋಧಕ ಸಿಬ್ಬಂದಿ ನೇಮಕಕ್ಕೆ ಮಾತ್ರ ಅನುಮತಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ವಾರ್ಷಿಕ ೮೦ ಕೋಟಿ ರೂ. ವೇತನ: ಸರ್ಕಾರ ನೇಮಕಾತಿಗೆ ಅನುಮತಿ ನೀಡಿದರೆ ವಾರ್ಷಿಕ ೮೦ ಕೋಟಿ ರೂಪಾಯಿಗಳನ್ನು ವೇತನಕ್ಕೆ ಭರಿಸಬೇಕಾಗಿದೆ. ಖಾಯಂ ಬೋಧಕರು, ಬ್ಯಾಕ್‌ಲಾಗ್ ಹುದ್ದೆಗಳಿಗೆ ನೇಮಕಗೊಂಡವರಿಗೆ ಸರ್ಕಾರವೇ ನೇರವಾಗಿ ವೇತನ ಪಾವತಿ ಮಾಡುವುದರಿಂದ ವಿವಿಗೆ ಯಾವುದೇ ಹೊರೆಯಾಗದು. ಈಗಿನ ಸ್ಥಿತಿಯಲ್ಲಿ ವಿವಿಯ ಆದಾಯದ ಮೇಲೆ ಪರಿಣಾಮ ಬೀರಿರುವ ಜತೆಗೆ ಸರ್ಕಾರದಿಂದಲೂ ವಿಶೇಷ ಅನುದಾನ ನೀಡದಿರುವ ಕಾರಣ ಕೆಲವು ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ವರ್ಷದಿಂದ ವರ್ಷಕ್ಕೆ ನಿವೃತ್ತ ನೌಕರರ ಪಿಂಚಣಿಯನ್ನು ಭರಿಸಲು ಪರದಾಡಲಾಗುತ್ತಿದೆ. ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಶುಲ್ಕ ಮತ್ತಿತರ ಆದಾಯಗಳಿಂದ ನಿರ್ವಹಣೆ ಮಾಡಲು ಪರದಾಡುತ್ತಿರುವುದರಿಂದ ಸರ್ಕಾರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

” ಮೈಸೂರು ವಿವಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸುತ್ತಲೇ ಬರಲಾಗಿತ್ತು. ಸರ್ಕಾರ ಮತ್ತೆ ಪ್ರಸ್ತಾವನೆ ಸಲ್ಲಿಸುವಂತೆ ಹೇಳಿದ್ದರಿಂದ ಹಣಕಾಸು ವಿಭಾಗದಿಂದ ಅಧಿಕೃತವಾಗಿ ಕಳುಹಿಸಲಾಗಿದೆ. ಸರ್ಕಾರದಿಂದ ಶೀಘ್ರದಲ್ಲೇ ಅನುಮತಿ ದೊರೆಯುವ ನಿರೀಕ್ಷೆಯಲ್ಲಿದ್ದೇವೆ. ಗುಣಮಟ್ಟದ ಬೋಧನೆ, ಸಂಶೋಧನೆಗಳು ಆಗಬೇಕಿ ರುವ ಕಾರಣ ಬೋಧಕ ಸಿಬ್ಬಂದಿ ನೇಮಕವಾಗಬೇಕಿದೆ.”

-ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ

Tags:
error: Content is protected !!