ಕೀರ್ತಿ
ನಿತ್ಯ ಹಾಲು ತುಂಬಿದ ಕ್ಯಾನ್‌ಗಳನ್ನು ತಲೆಯ ಮೇಲಿಟ್ಟುಕೊಂಡು ಮನೆ ಮನೆಗೆ ಹಾಲು ಹಾಕುವ ಕಾಯಕವನ್ನು ಇಳಿ ವಯಸ್ಸಿನಲ್ಲಿಯೂ ಬಿಡದೆ ಮಾಡುತ್ತಿದ್ದಾರೆ ಹಿನಕಲ್‌ನ ಮಾಯಮ್ಮ.
ಮೈಸೂರಿನ ಹಿನಕಲ್‌ನಲ್ಲಿರುವ ಮಾಯಮ್ಮ ಕಳೆದ ೫೮ ವರ್ಷಗಳಿಂದ ಹಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ಹಾಲಿನ ಕ್ಯಾನ್‌ಗಳಿರುವ ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಅವರು ನಡೆಯುತ್ತಿದ್ದರೆ, ನಡಿಗೆ ಸರಾಗವಾಗಿರುತ್ತದೆ.
ಮುಂಜಾನೆ ನಾಲ್ಕು ಗಂಟೆಗೆ ಎದ್ದು ಹಾಲು ಕರೆದು, ಮಾರಲು ಹೊರಡುವುದು ಕಳೆದ ೫೮ ವರ್ಷಗಳಿಂದಲೂ ಮಾಯಮ್ಮನಿಗೆ ಅಭ್ಯಾಸವೇ ಆಗಿ ಹೋಗಿದೆ. ಮಾಯಮ್ಮ ಅವರಿಗೆ ೬ ವರ್ಷವಿದ್ದಾಗ ತಮ್ಮ ತಂದೆ-ತಾಯಿಯ ಕಷ್ಟ ಕಂಡು, ತಾನೂ ಅವರೊಂದಿಗೆ ಜತೆಯಾಗಿ ದುಡಿಯಬೇಕು ಅನಿಸಿತು.
ಬಡತನ, ಹಸಿವು ಮಾಯಮ್ಮರಿಗೆ ಕೆಲಸ ಮಾಡುವುದನ್ನು ಅನಿವಾರ್ಯವಾಗಿಸಿತು. ಶಾಲೆಯ ಮೆಟ್ಟಿಲೇರಿದ ಮಾಯಮ್ಮ ಅವರಿಗೆ ಬದುಕಿಗೆ ಬೇಕಾದ ವ್ಯಾಪಾರದ ಲೆಕ್ಕಾಚಾರಗಳೆಲ್ಲ ಕರಗತವಾಗಿದೆ. ಮುಂಜಾನೆ ಹಿನಕಲ್‌ನಲ್ಲಿ ಬಸ್ ಹತ್ತಿದರೆ ಜಯಲಕ್ಷ್ಮೀಪುರಂಗೆ ಬಂದಿಳಿಯುತ್ತಾರೆ. ಅಲ್ಲಿಂದ ನೇರ ದಾರಿ ಹಿಡಿದು, ಎರಡು-ಮೂರು ಮನೆಗಳಿಗೆ ಹಾಲು ಪೂರೈಸಿ ಮನೆಗೆ ವಾಪಸ್ಸಾಗುತ್ತಾರೆ.
ಹೆಚ್ಚಾಗಿ ಹಿನಕಲ್‌ನ ಅಕ್ಕಪಕ್ಕದ ಮನೆಗಳಿಗೆ ಹಾಲು ಹಾಕುವ ಮಾಯಮ್ಮ, ಜಯಲಕ್ಷಿ ಪುರಂನ ಕೆಲ ಮನೆಗಳಿಗೆ ಮಾತ್ರ ಹಾಲು ಹಾಕುತ್ತಾರೆ. ಆ ಮೂಲಕ ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ಮೂರು ಹಸುಗಳು, ಆರು ಎಮ್ಮೆಗಳೇ ಇವರ ಜೀವನಕ್ಕೆ ಆಧಾರ. ‘ನಾನು ಹಾಲುಹಾಕಲು ಪ್ರಾರಂಭಿಸಿದಾಗ ಒಂದು ಸೇರು ಹಾಲಿಗೆ ಒಂದು ರೂಪಾಯಿ. ಐದು ಸೇರು ಹಾಲು ಕರ್ಕೊಂಡು ಹೋಗ್ತಿದ್ವಿ. ಐದು ರೂಪಾಯಿ ಕೊಡ್ತಿದ್ರು. ನಾಲ್ಕಾಣೆ ಬಸ್ಸಿಗೇ ಆಗ್ತಿತ್ತು!’ ಎನ್ನುತ್ತಾ, ಈಗ ಬಸ್‌ನಲ್ಲಿ ಫ್ರೀಯಾಗಿ ಕರೆದುಕೊಂಡು ಹೋಗುವುದರಿಂದ ಬಸ್ಸಿನ ಖರ್ಚು ಉಳಿತಾಯ’ ಎಂದು ನಗುತ್ತಾರೆ ಮಾಯಮ್ಮ. ಇಳಿ ವಯಸ್ಸಿನಲ್ಲಿಯೂ ಅದಮ್ಯ ಉತ್ಸಾಹದ ಚಿಲುಮೆಯಂತಿ ರುವ ಮಾಯಮ್ಮ ಅವರ ಕಾಯಕ ಪ್ರೀತಿ ಮೆಚ್ಚುವಂತಹದ್ದು.
೬೬ ವರ್ಷದ ಮಾಯಮ್ಮ ಈಗಲೂ ಉತ್ಸಾಹದಿಂದ ದುಡಿಯುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದು, ಒಬ್ಬ ಮಗಳು ಅಂಧೆಯಾಗಿದ್ದಾರೆ. ಮತ್ತೊಬ್ಬ ಮಗಳನ್ನು ಮದುವೆ ಮಾಡಿ ಕಳುಹಿಸಿದ್ದಾರೆ. ಮಗನ ಜತೆಯಲ್ಲಿಯೇ ಇದ್ದರೂ ಮಗಳನ್ನು ನೋಡಿಕೊಳ್ಳಲು ಮಗನೊಬ್ಬನಿಗೆ ಕಷ್ಟವಾಗಬಾರದು ಎಂದು ಮಾಯಮ್ಮ ಶಕ್ತಿ ಇರುವವರೆಗೂ ನಾನೂ ದುಡಿಯು ತ್ತೇನೆ ಎಂದು ದುಡಿಯುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ದುಡಿಯುವ ಮಾಯಮ್ಮ ಕುಟುಂಬದೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.





