೧.೯೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಸಾಧ್ಯವಾಗಿಲ್ಲ; ಇಂದಿನ ದರಪಟ್ಟಿ ಅನ್ವಯ ಅನುದಾನ ಅಗತ್ಯ
ಎ.ಎಚ್.ಗೋವಿಂದ
ಈಡೇರದ ಕಲಾವಿದರ, ಸಾಹಿತಿಗಳ ಆಶಯ
ಶಾಸಕರು ಅನುದಾನ ತಂದು ಕಾಮಗಾರಿ ಮುಗಿಸಲಿ
ಭವನ ಕಾಮಗಾರಿ ಮುಗಿಯಲು ದಶಕ ಬೇಕೇನು?
ಕೊಳ್ಳೇಗಾಲ: ಅಪಾರ ಮೌಖಿಕ ಕಾವ್ಯ ಸಂಪತ್ತು ಹೊಂದಿರುವ ತಾಲ್ಲೂಕಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಸಿಗಲಿ ಎಂಬ ಉದ್ದೇಶದಿಂದ ಪಟ್ಟಣದಲ್ಲಿ ನಿರ್ಮಿಸಿರುವ ಸುವರ್ಣ ಕನ್ನಡ ಗಡಿ ಭವನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ೧.೯೫ ಕೋಟಿ ರೂ. ವೆಚ್ಚದ ಭವನ ಕಾಮಗಾರಿ ೧೪ ವರ್ಷಗಳು ಉರುಳಿದರೂ ಮುಗಿದಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವದಿಂದ ಕಂಗೊಳಿಸಬೇಕಿದ್ದ ಭವನ ಇನ್ನು ಸಜ್ಜುಗೊಂಡಿಲ್ಲ.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಚನ್ನಯ್ಯ, ಲಿಂಗಯ್ಯ, ಮಲೆ ಮಹದೇಶ್ವರ, ಬಿಳಿಗಿರಿರಂಗಸ್ವಾಮಿ ಅವರ ಪವಾಡಗಳ ಕುರಿತ ಮೌಖಿಕ ಕಾವ್ಯ ಪರಂಪರೆಗೆ ವೇದಿಕೆಯಾಗಬೇಕು. ಜನಪದ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅನುಕೂಲವಾಗಲಿ ಎಂಬ ಆಶಯದೊಂದಿಗೆ ಸುಸಜ್ಜಿತ ಗಡಿ ಭವನ ಬೇಕೆಂಬ ಜನತೆಯ ಬಯಕೆ ಇನ್ನೂ ಈಡೇರಿಲ್ಲ.
೨೦೧೦ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್, ಸಂಸದ ಆರ್.ಧ್ರುವನಾರಾಯಣ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆದು ಪಟ್ಟಣದಲ್ಲಿ ಕನ್ನಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
೨೦೧೧ರಲ್ಲಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಶಾಸಕರಾಗಿದ್ದ ಜಿ.ಎನ್.ನಂಜುಂಡಸ್ವಾಮಿ ಅವರು ೧.೨೫ ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ಕೆಲಸ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಹೆಚ್ಚುವರಿ ಹಣಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಸರ್ಕಾರದಿಂದ ಹಣ ಬಿಡುಗಡೆಯಾಗಲಿಲ್ಲ.
ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿಯಲ್ಲಿ ಕೆ.ಆರ್.ಐ.ಡಿ.ಎಲ್. ಅಧಿಕಾರಿಗಳು ಒಟ್ಟು ೧.೯೫ ಕೋಟಿ ರೂ. ವೆಚ್ಚದಲ್ಲಿ ೨ ಅಂತಸ್ತಿನ ಭವನ ನಿರ್ಮಿಸಿದ್ದಾರೆ. ಕಟ್ಟಡದೊಳಗೆ ಕಚೇರಿ, ೩೦ಗಿ೧೫ ಮೀಟರ್ ಅಳತೆಯಲ್ಲಿ ಸಭಾಂಗಣ, ೨ ಕಂಪ್ಯೂಟರ್ ಕೊಠಡಿ, ಗ್ರಂಥಾಲಯ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಹಾಗೂ ವಿಶ್ರಾಂತಿ ಕೊಠಡಿಗಳಿವೆ.
ಇನ್ನು ಭವನಕ್ಕೆ ಬಣ್ಣ ಬಳಿಯುವುದು, ವಿದ್ಯುತ್ ಮತ್ತು ನೀರು ಸಂಪರ್ಕ ಕಲ್ಪಿಸುವುದು, ಸುತ್ತುಗೋಡೆ ನಿರ್ಮಾಣ ಮತ್ತು ಪೀಠೋಪಕರಣ ಅಳವಡಿಕೆ ಹಾಗೂ ಅಂತಿಮ ರೂಪರೇಷೆ ನೀಡುವುದು ಬಾಕಿಯಿದೆ. ಅನುದಾನದ ಕೊರತೆಯಿಂದ ಈ ಕೆಲಸಗಳನ್ನು ಮುಗಿಸಿಲ್ಲ. ೨೦೧೨-೧೩ರ ದರಪಟ್ಟಿಯ ಅನ್ವಯ ಕಾಮಗಾರಿ ನಡೆಸಲಾಗಿ ಅನುದಾನ ಸಾಕಾಗಲಿಲ್ಲ ಎನ್ನುತ್ತಾರೆ ಕೆಆರ್‌ಐಡಿಎಲ್ ಅಧಿಕಾರಿಗಳು.
ಪ್ರಸ್ತುತ ಸಾಮಗ್ರಿಗಳ ದರ ಪಟ್ಟಿ ಅನ್ವಯ ಬಾಕಿ ಕಾಮಗಾರಿ ಮುಗಿಸಲು ೮೦ ಲಕ್ಷ ರೂ. ಬೇಕಿದೆ. ಈ ಬಗ್ಗೆ ಕೆಆರ್‌ಐಡಿಎಲ್ ೩ ವರ್ಷಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಕೋವಿಡ್ ಕಾರಣದಿಂದ ಸರ್ಕಾರ ಅನುದಾನ ನೀಡಲಿಲ್ಲ. ಪರಿಣಾಮ ಭವನ ಕಾಮಗಾರಿ ಪೂರ್ಣಗೊಂಡಿಲ್ಲ.
” ಗಡಿ ಭಾಗದಲ್ಲಿ ಕನ್ನಡ ಪರ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಕನ್ನಡ ಗಡಿ ಭವನ ಅಗತ್ಯ ಬಹಳ ಇದೆ. ಈಗ ಭವನ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸರ್ಕಾರ ಆದಷ್ಟೂ ಬೇಗ ಅನುದಾನ ನೀಡಿ ಗಡಿ ಭವನ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕು.”
-ನಾಗರಾಜು ಕೊಂಗರಹಳ್ಳಿ, ಕಸಾಪ ತಾಲ್ಲೂಕು ಅಧ್ಯಕ್ಷರು
” ಭವನದ ಉಳಿಕೆ ಕಾಮಗಾರಿ ಹಾಗೂ ಕಾಂಪೌಂಡ್ ನಿರ್ಮಿಸಲು ೮೦ ಲಕ್ಷ ರೂ. ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಬಿಡುಗಡೆಯಾದ ಬಳಿಕ ಕಾಮಗಾರಿ ಪೂರ್ಣಗೊಳಿಸಲಾಗುವುದು. ಶಾಸಕರ ಗಮನಕ್ಕೂ ತರಲಾಗಿದೆ.”
-ಚಿಕ್ಕಲಿಂಗಯ್ಯ, ಎಇಇ, ಕೆಆರ್‌ಐಡಿಎಲ್, ಕೊಳ್ಳೇಗಾಲ
” ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಳಪಡುವ ಗಡಿ ಭವನ ಕಾಮಗಾರಿ ಪೂರ್ಣಗೊಳಿಸಲು ೯೫ ಲಕ್ಷ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಕಟ್ಟಡ ಹಾಗೂ ನೆಲಹಾಸು ಕಾಮಗಾರಿ ಪೂರ್ಣಗೊಂಡಿದೆ. ಕಾಂಪೌಂಡ್, ವೈರಿಂಗ್ ಕೆಲಸ ಹಾಗೂ ಸಣ್ಣಪುಟ್ಟ ಕೆಲಸ ಬಾಕಿ ಇದೆ. ಇವೆಲ್ಲವನ್ನೂ ಈ ಹಣ ಬಿಡುಗಡೆಯಾದ ತಕ್ಷಣ ಪೂರ್ಣಗೊಳಿಸಲಾಗುವುದು.”
– ಎ.ಆರ್.ಕೃಷ್ಣಮೂರ್ತಿ, ಶಾಸಕರು
” ನಾನು ಶಾಸಕನಾಗಿದ್ದಾಗ ೭೦ ಲಕ್ಷ ರೂ. ಬಿಡುಗಡೆಯಾಗಿತ್ತು. ಆದರೆ, ಹಣ ಬೇರೆ ಖಾತೆಗೆ ಹೋಗಿದ್ದರಿಂದ ಇದನ್ನು ಉಪಯೋಗಿಸಿಕೊಳ್ಳಲು ಆಗಲಿಲ್ಲ. ನಂತರ ಬಂದ ಶಾಸಕರು ಈ ಬಗ್ಗೆ ಗಮನಹರಿಸಿದ್ದರೆ ಇಷ್ಟು ಹೊತ್ತಿಗೆ ಭವನ ಪೂರ್ಣಗೊಳ್ಳುತ್ತಿತ್ತು.”
-ಎನ್.ಮಹೇಶ್, ಮಾಜಿ ಶಾಸಕರು





