Mysore
18
broken clouds

Social Media

ಭಾನುವಾರ, 11 ಜನವರಿ 2026
Light
Dark

ಒಣಗಿದ ಮರದಡಿ ಆತಂಕದ ನೆರಳು!

ಎಚ್.ಎಸ್.ದಿನೇಶ್ ಕುಮಾರ್

ಮೈಸೂರು ನಗರದಲ್ಲಿ ಒಣಗಿ ನಿಂತ, ಟೊಳ್ಳಾದ ಮರಗಳ ತೆರವಿಗೆ ಇಲ್ಲ ಕ್ರಮ

ತೆರವಿಗೆ ನಗರಪಾಲಿಕೆ-ಅರಣ್ಯ ಇಲಾಖೆ ನಡುವೆ ಸಮನ್ವಯತೆ ಕೊರತೆ 

ಮರ ತೆರವಿಗೆ ನಗರ ಪಾಲಿಕೆಗೆ ಹಲವು ಅರ್ಜಿಗಳು ಸಲ್ಲಿಕೆ

ಆತಂಕದಿಂದಲೇ ತೆರಳುವ ಪಾದಚಾರಿಗಳು, ವಾಹನ ಸವಾರರು

ಸಾರ್ವಜನಿಕರ ದೂರುಗಳು ಅರಣ್ಯ ಇಲಾಖೆಗೆ ರವಾನೆ 

ಮೈಸೂರು: ರಸ್ತೆಗಳ ಮಗ್ಗುಲಿನಲ್ಲಿ, ಮನೆಯ ಆಸು-ಪಾಸು ಒಣಗಿ ನಿಂತ ಮರ ಅಥವಾ ಕೊಂಬೆಗಳು ಕೆಳಗೆ ಬಿದ್ದರೆ, ಅದರ ಪ್ರಹಾರಕ್ಕೆ ಸಿಲುಕುವ ಜನರ ಬದುಕಿನ ಬಣ್ಣವೇ ಹದಗೆಡಬಹುದು. ಸ್ವಲ್ಪ ಏರು ಪೇರಾದರೆ ಜೀವಕ್ಕೂ ಎರವಾಗಬಹುದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವೆಡೆ ಒಣಗಿರುವ ವೃಕ್ಷಗಳು, ರೆಂಬೆ- ಕೊಂಬೆಗಳು ಇದ್ದು, ನಾಗರಿಕರಲ್ಲಿ ಆತಂಕ ಮೂಡಿಸಿವೆ.

ಬೇಸಿಗೆ ಕಾಲ ಅಥವಾ ಮಳೆಗಾಲ ಬಂತೆಂದರೆ ಸಾಕು ರಸ್ತೆಯಲ್ಲಿ ಓಡಾಡುವ ಜನರಿಗೆ ಹಾಗೂ ವಾಹನ ಸವಾರರಿಗೆ ಆತಂಕ ಶುರುವಾಗುತ್ತದೆ. ಯಾವಾಗ, ಎಲ್ಲಿ, ಹೇಗೆ ಮರ ಅಥವಾ ಬೃಹತ್ ಕೊಂಬೆಗಳು ತಲೆ, ಮೈ ಮೇಲೆ ಬೀಳುತ್ತವೆಯೋ ತಿಳಿಯುವುದಿಲ್ಲ.

ಒಣಗಿದ ಮರಗಳಿಂದ ಆಗಾಗ ಅಪಾಯವಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಾರೆ. ನಗರದ ಹೃದಯಭಾಗ ಸೇರಿದಂತೆ ವಿವಿಧ ಬಡಾವಣೆಗಳ ಹಲವು ರಸ್ತೆಗಳಲ್ಲಿ ಒಣಗಿದ ಮರಗಳು ಬಲಿಗಾಗಿ ಕಾದು ನಿಂತಿವೆ. ಮರಗಳ ರೆಂಬೆ-ಕೊಂಬೆಗಳು ಒಣಗಿ ನೇತಾಡುತ್ತಿದ್ದರೂ ಮರಗಳನ್ನು ತೆರವು ಮಾಡದೇ ನಗರಪಾಲಿಕೆ ನಿರ್ಲಕ್ಷ್ಯ ತೋರುತ್ತಿದೆ.

ಸದ್ಯ ನಗರದಲ್ಲಿ ಬದಲಾದ ವಾತಾವರಣದಿಂದ ಗಾಳಿ ಹಾಗೂ ಬಿಸಿಲು ಹೆಚ್ಚಾಗಿದ್ದು, ಒಣಗಿದ ಮರ ಅಥವಾ ಕೊಂಬೆಗಳನ್ನು ತೆರವು ಮಾಡಬೇಕಿದೆ. ಈ ಹಿಂದೆ ಒಣಗಿದ ಮರಗಳಿಂದ ಸಾಕಷ್ಟು ಅವಾಂತರಗಳು ಸಂಭವಿಸಿದ್ದರೂ ನಗರಪಾಲಿಕೆ ಮೌನ ವಹಿಸಿದೆ. ಅರಣ್ಯ ಇಲಾಖೆ ಕೂಡ ಈ ಬಗ್ಗೆ ಮೌನವಾಗಿರುವುದು ವಿಪರ್ಯಾಸ.

ಮೂರು ದಿನಗಳ ಹಿಂದೆ ಸರಸ್ವತಿಪುರಂ ಬಳಿ ಆಟೊವೊಂದರ ಮೇಲೆ ಒಣಗಿದ ಮರ ಬಿದ್ದ ಕಾರಣ ಆಟೊ ಸಂಪೂರ್ಣ ಜಖಂಗೊಂಡಿತ್ತು. ಇದರಿಂದ ನಷ್ಟ ಅನುಭವಿಸಿದವರು ಆಟೊ ಚಾಲಕರು. ವಿಶೇಷವೆಂದರೆ ಈ ಮರವನ್ನು ತೆರವುಗೊಳಿಸಬೇಕು. ಅನುಮತಿ ನೀಡಿ ಎಂದು ನಗರಪಾಲಿಕೆ ಕಳೆದ ಡಿಸೆಂಬರ್‌ನಲ್ಲಿಯೇ ಮನವಿ ಮಾಡಿತ್ತು. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಂದಿಸಿರಲಿಲ್ಲ ಎನ್ನಲಾಗಿದೆ.

ಹೀಗಾಗಿ ನಗರಪಾಲಿಕೆ ಅಧಿಕಾರಿಗಳು ಅಸಹಾಯಕರಾಗಿ ಕೂರಬೇಕಾಯಿತು. ಅಂತಿಮವಾಗಿ ಗಾಳಿಯ ಹೊಡೆತಕ್ಕೆ ಒಣಗಿದ ಮರ ಧರೆಗುರುಳಿದೆ. ಎರಡೂ ಇಲಾಖೆಗಳಲ್ಲಿ ಸಮನ್ವಯತೆ ಇಲ್ಲದ ಕಾರಣ ಹಾಗೂ ಅವರ ತಿಕ್ಕಾಟದಿಂದ ಅಂತಿಮವಾಗಿ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಬೇಕಿದೆ.

ನಮ್ಮ ಮನೆಯ ಮುಂದೆ ಮರದಲ್ಲಿ ಕೊಂಬೆಯೊಂದು ಒಣಗಿದೆ… ನಮ್ಮ ಮಳಿಗೆಯ ಮುಂದೆ ಒಣಗಿದ ಮರವಿದೆ… ಪ್ರಮುಖ ರಸ್ತೆಯಲ್ಲಿ ಮರ ಬೀಳುವ ಸ್ಥಿತಿಯಲ್ಲಿದೆ… ನಮ್ಮ ಶಾಲೆಯ ಆವರಣದಲ್ಲಿ ಮರವೊಂದು ಒಣಗಿದ್ದು, ಯಾವ ಗಳಿಗೆಯಲ್ಲಿ ಬೇಕಿದ್ದರೂ ಧರಾಶಾಯಿ ಯಾಗುವ ಸ್ಥಿತಿಯಲ್ಲಿದೆ… ಹೀಗೆ ನಗರಪಾಲಿಕೆಗೆ ಪ್ರತೀ ದಿನ ಸಾರ್ವಜನಿಕರಿಂದ ಕನಿಷ್ಠ ೨ರಿಂದ ೩ ದೂರುಗಳ ಅರ್ಜಿ ಬರುತ್ತವೆ.

ಸಣ್ಣಪುಟ್ಟ ಕೊಂಬೆಗಳಾಗಿದ್ದರೆ ನಗರಪಾಲಿಕೆಯ ತೋಟಗಾರಿಕೆ ವಿಭಾಗದ ಸಿಬ್ಬಂದಿ ಹಾಗೂ ಅಭಯ ತಂಡದ ನೆರವಿನೊಂದಿಗೆ ಅವುಗಳನ್ನು ತಕ್ಷಣವೇ ತೆರವುಗೊಳಿಸುವ ಕೆಲಸ ನಡೆಯುತ್ತದೆ. ಆದರೆ, ಒಣಗಿರುವ ದೊಡ್ಡ ಕೊಂಬೆಗಳು ಅಥವಾ ಮರಗಳನ್ನು ತೆರವುಗೊಳಿಸಬೇಕಾದರೆ ಅರಣ್ಯ ಇಲಾಖೆಯ ಟ್ರೀ ಕೋರ್ಟ್ ಅನುಮತಿ ಅತ್ಯಗತ್ಯ. ಹೀಗಾಗಿ ನಗರಪಾಲಿಕೆ ಅಧಿಕಾರಿಗಳು ಅಂತಹ ಅರ್ಜಿಗಳನ್ನು ಅರಣ್ಯ ಇಲಾಖೆಗೆ ಕಳುಹಿಸಿ ಸುಮ್ಮನಾಗುತ್ತಾರೆ. ಆದರೆ, ಬರುವ ಅರ್ಜಿಗಳ ವಿಲೇವಾರಿಗೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವುದಿಲ್ಲ. ಅಷ್ಟೇಕೆ ಕೆಲ ಪ್ರಕರಣಗಳಲ್ಲಿ ಮೂರು ತಿಂಗಳಾದರೂ ಅರಣ್ಯ ಇಲಾಖೆ ಅರ್ಜಿಗಳನ್ನು ವಿಲೇವಾರಿ ಮಾಡುವ ಗೋಜಿಗೆ ಹೋಗುವುದಿಲ್ಲ.

ಹೀಗಾಗಿ ನಗರಪಾಲಿಕೆ ಅಧಿಕಾರಿಗಳು ಏನೂ ಮಾಡಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿ ಇರುವಂತಾಗುತ್ತದೆ. ಅರಣ್ಯ ಇಲಾಖೆ ಅನುಮತಿ ಇಲ್ಲದೆ ನಗರಪಾಲಿಕೆ ಅಧಿಕಾರಿಗಳು ಒಣ ಮರಗಳ ತೆರವಿಗೆ ಮುಂದಾದರೆ, ಅವರ ವಿರುದ್ಧ ಎ-ಐಆರ್ ದಾಖಲಾಗುವ ಸಾಧ್ಯತೆ ಇದೆ. ಯಾವುದೇ ಮರ ಒಣಗಿರಲಿ ಅಥವಾ ಹಸಿಯಾಗಿರಲಿ ಅರಣ್ಯ ಇಲಾಖೆ ಅದನ್ನು ಆಸ್ತಿ ಎಂದೇ ಪರಿಗಣಿಸುತ್ತದೆ. ಅದನ್ನು ಸಾರ್ವಜನಿಕವಾಗಿ ಹರಾಜು ಹಾಕಿದ ನಂತರವಷ್ಟೇ ಮರವನ್ನು ಕಡಿಯಬೇಕು ಎಂದು ಟ್ರೀ ಕೋರ್ಟ್ ಹೇಳುತ್ತದೆ ಎಂಬುದಾಗಿ ನಗರಪಾಲಿಕೆ ತೋಟಗಾರಿಕೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ಕೆ.ಮೋಹನ್‌ಕುಮಾರ್ ಹೇಳುತ್ತಾರೆ.

ಆದ್ಯತೆ ಮೇರೆಗೆ ಅರ್ಜಿಗಳ ವಿಲೇವಾರಿ ಅಗತ್ಯ: 

ಮೈಸೂರು ನಗರದಾದ್ಯಂತ ಸಾಕಷ್ಟು ಮರಗಳು ಒಣಗಿ ನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ನಗರಪಾಲಿಕೆ ಅಧಿಕಾರಿಗಳು ಅವುಗಳನ್ನು ತೆರವು ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಸವಾರರು ಹಾಗೂ ಜನರು ಆತಂಕದಿಂದಲೇ ಮರಗಳನ್ನು ನೋಡುತ್ತಾ ಹೋಗಬೇಕಿದೆ. ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ದೂರು ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಬೇಕಿದೆ.

” ಅರಣ್ಯ ಇಲಾಖೆ ಅರ್ಜಿ ವಿಲೇವಾರಿ ಮಾಡಬೇಕು ನಾವು ಅರಣ್ಯ ಇಲಾಖೆಗೆ ಕಳುಹಿಸಿದ ಅರ್ಜಿ ವಿಲೇವಾರಿಯಾದ ನಂತರ ಒಣಗಿದ ಅಥವಾ ಅನುಪಯುಕ್ತ ಮರಗಳನ್ನು ಹರಾಜು ಹಾಕಿ, ನಂತರ ತೆರವುಗೊಳಿಸಬೇಕು. ಇಂತಹ ಪ್ರಕ್ರಿಯೆ ಅರಣ್ಯ ಇಲಾಖೆಯಿಂದ ಬೇಗ ಆದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವುದು ಅಥವಾ ಜೀವಹಾನಿ ತಪ್ಪುತ್ತದೆ.”

-ಪಿ.ಕೆ.ಮೋಹನ್‌ಕುಮಾರ್, ಎಇಇ, ನಗರಪಾಲಿಕೆ ತೋಟಗಾರಿಕೆ ವಿಭಾಗ

ಒಣಮರ-ರೆಂಬೆಗಳು ಮನೆ ಸಮೀಪ ಅಥವಾ ರಸ್ತೆ ಬದಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಆತಂಕ ನಿಮಗಿದೆಯೆ? ಕೂಡಲೇ ಆ ಮರದ ಫೋಟೋ ತೆಗೆದು ವಿಳಾಸದೊಂದಿಗೆ ಪತ್ರಿಕೆಗೆ ಕಳುಹಿಸಿ
9071777071

Tags:
error: Content is protected !!