ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪ್ರಾಧಿಕಾರದಿಂದ ಸಕಲ ಸಿದ್ಧತೆ; ಮಾ.೧ಕ್ಕೆ ರಥೋತ್ಸವ
ಮಹಾದೇಶ್ ಎಂ.ಗೌಡ
ಹನೂರು: ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.೨೫ರಿಂದ ಮಾ.೧ರವರೆಗೆ ಐದು ದಿನಗಳ ಕಾಲ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಜರುಗಲಿದ್ದು, ಲಕ್ಷಾಂತರ ಜನರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಫೆಬ್ರವರಿ ೨೫ರಂದು ಸಾಲೂರು ಬೃಹನ್ ಮಠಕ್ಕೆ ಉತ್ಸವ ಮೂರ್ತಿಯನ್ನು ಬಿಜಯಂ ಗೈಯಿಸುವುದು, ಫೆ.೨೬ರಂದು ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, ವಿಶೇಷ ಸೇವೆ ಉತ್ಸವಾದಿಗಳು ಹಾಗೂ ಜಾಗರಣೆ ಉತ್ಸವ, ಫೆ.೨೭ರಂದು ಶ್ರೀ ಸ್ವಾಮಿಗೆ ವಿಶೇಷ ಸೇವೆ ಮತ್ತು ಉತ್ಸವಾದಿಗಳು, ಫೆ.೨೮ರಂದು ಮಹಾಶಿವರಾತ್ರಿ ಅಮಾವಾಸ್ಯೆ ವಿಶೇಷ, ಸೇವೆ ಮತ್ತು ಉತ್ಸವಾದಿಗಳು, ಮಾ.೧ರಂದು ಮಹಾರಥೋತ್ಸವ, ಬೆಳಿಗ್ಗೆ ೮.೧೦ರಿಂದ ೮.೪೫ರವರೆಗೆ ರಥೋತ್ಸವ ನಡೆಯಲಿದೆ. ನಂತರ ಗುರು ಬ್ರಹ್ಮೋತ್ಸವ ಮತ್ತು ಅನ್ನ ಬ್ರಹ್ಮೋತ್ಸವ, ರಾತ್ರಿ ಸ್ವಾಮಿಗೆ ಅಭಿಷೇಕ, ಪೂಜೆ ಮುಗಿದ ನಂತರ ಕೊಂಡೋತ್ಸವ ನಡೆಯಲಿದೆ.
ಪಾದಯಾತ್ರೆಯ ಮೂಲಕ ಆಗಮಿಸುವ ಭಕ್ತಾದಿಗಳಿಗೆ ತಾಳಬೆಟ್ಟದಿಂದ ಮ.ಬೆಟ್ಟದವರೆಗಿನ ಮಾರ್ಗ ಮಧ್ಯದಲ್ಲಿ ೨೦ ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡ ಲಾಗುತ್ತಿದೆ. ಬೆಟ್ಟದ ಪ್ರಮುಖ ಸ್ಥಳಗಳಲ್ಲಿ ಟ್ಯಾಂಕ್‌ಗಳ ಮೂಲಕ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ದಾಸೋಹ ಭವನದ ಸಮೀಪವೇ ಜಾತ್ರಾ ಮಹೋತ್ಸವ ಸಂಬಂಧ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು, ಒಂದು ಬಾರಿಗೆ ೨ ಸಾವಿರ ಜನರು ಪ್ರಸಾದ ಸ್ವೀಕರಿಸಬಹುದಾಗಿದೆ.
ಈಗಾಗಲೇ ಸುಮಾರು ೬ ಲಕ್ಷ ಲಾಡುಗಳನ್ನು ತಯಾರು ಮಾಡಿಕೊಳ್ಳಲಾಗುತ್ತಿದೆ. ರಾಜ ಗೋಪುರದ ಎಡ ಭಾಗ ಹಾಗೂ ಬಲಭಾಗದಲ್ಲಿ ನೆರಳಿನ ವ್ಯವಸ್ಥೆ, ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಳದಲ್ಲಿ ಹಾಗೂ ದಾಸೋಹ ಸ್ಥಳದ ಮುಂಭಾಗದಲ್ಲಿ ಶಾಮಿಯಾನ ಅಳವಡಿಸಲಾಗಿದೆ.
ತಾಳಬೆಟ್ಟದಲ್ಲಿ ೫೦ ಹಾಗೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಜನಸಂದಣಿ ಇರುವ ಹೆಚ್ಚಿರುವ ಕಡೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಪೌರಕಾರ್ಮಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಪಾದಯಾತ್ರೆಯ ಮೂಲಕ ಮ.ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ, ೬೦ ವರ್ಷ ಮೇಲ್ಪಟ್ಟವರಿಗೆ ರಾಜಗೋಪುರದ ಪ್ರವೇಶ ದ್ವಾರದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅತಿಥಿ ಗಣ್ಯರಿಗೆ, ಜನಪ್ರತಿನಿಽಗಳಿಂದ ಶಿಫಾರಸು ಪತ್ರ ಪಡೆದು ಬರುವವರಿಗೆ ದೇವಸ್ಥಾನದ ಕಾರ್ಯಾಲಯದಲ್ಲಿ ವಿಶೇಷ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಸ್ ಪಡೆದು ಗೇಟ್ ನಂ.೪ರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೇ ಪ್ರವೇಶ ದ್ವಾರದಲ್ಲಿಯೇ ಅಂಗವಿಕಲರು ಕೂಡ ತೆರಳಿ ದರ್ಶನ ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.
ಬೆಟ್ಟದಲ್ಲಿ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಗಾಜಿನ ಬಾಟಲಿಯಲ್ಲಿ ಒಂದು ಲೀ. ನೀರಿಗೆ ೨೦ ರೂ. ಪಡೆದು ನೀರು ಮಾರಾಟ ಮಾಡಲಾಗುತ್ತಿದೆ.
ದ್ವಿಚಕ್ರ ವಾಹನಗಳಿಗೆ ನಿರ್ಬಂಧ: ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಸಂಬಂಧ ಟ್ರಾಫಿಕ್ ಜಾಮ್ ತಡೆಗಟ್ಟಲು ಫೆಬ್ರವರಿ ೨೫ರ ಬೆಳಿಗ್ಗೆ ೬ ಗಂಟೆಯಿಂದ ಮಾರ್ಚ್ ೨ರ ಸಂಜೆ ೬ ಗಂಟೆಯವರೆಗೆ ಮ.ಬೆಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವುದನ್ನು ನಿರ್ಬಂಧಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬರುವ ಭಕ್ತರಿಗೆ ಕೌದಳ್ಳಿಯಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಲ್ಲಿಂದ ಕೆಎಸ್‌ಆರ್‌ಟಿಸಿ ಬಸ್ ಮುಖಾಂತರ ಮ.ಬೆಟ್ಟಕ್ಕೆ ತೆರಳಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಇಬ್ಬರು ಡಿವೈಎಸ್ಪಿ, ೯ ಇನ್‌ಸ್ಪೆಕ್ಟರ್, ೩೨ ಎಸ್‌ಐ ಒಳಗೊಂಡಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
೬೦೦ ಬಸ್: ಜಾತ್ರಾ ಮಹೋತ್ಸವಕ್ಕೆ ಕೆಎಸ್ಆರ್‌ಟಿಸಿ ವತಿಯಿಂದ ೬೦೦ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಕೆಟ್ಟು ನಿಂತರೆ ದುರಸ್ತಿಪಡಿಸಲು ೫೦ ಮಂದಿ ತಾಂತ್ರಿಕ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಿ ಕೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಅಶೋಕ್ ತಿಳಿಸಿದ್ದಾರೆ.
” ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಮ.ಬೆಟ್ಟಕ್ಕೆ ಪಾದಯಾತ್ರೆಯ ಮೂಲಕವೇ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ನೂತನ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರ ಮಾಡಲಾಗುವುದು. ಗರ್ಭಗುಡಿಯಲ್ಲಿ ನಡೆಯುವ ವಿಶೇಷ ಪೂಜೆಯನ್ನು ಟಿವಿ ಪರದೆಯ ಮೂಲಕ ನೋಡಲು ಕ್ರಮವಹಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಸದಂತೆ ಹೆಚ್ಚಿನ ಅರಿವು ಮೂಡಿಸಲಾಗುವುದು.”
-ಎ.ಇ.ರಘು, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ





