ಗ್ರಾಹಕರಿಗೆ ಹೊರೆಯಾಗದಂತೆ ದರ ಏರಿಕೆ ಮಾಡುತ್ತಿದ್ದೇವೆ ಎನ್ನುತ್ತಾ ಸರ್ಕಾರ ಹಾಲಿನ ದರವನ್ನು ನಿರಂತರವಾಗಿ ಏರಿಕೆ ಮಾಡುತ್ತಿದೆ.
ಕರ್ನಾಟಕ ಹಾಲು ಮಂಡಳಿಯು ಕೆಲ ತಿಂಗಳ ಹಿಂದಷ್ಟೇ ಪ್ರತಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ ೫೦ ಮಿಲಿ ಹೆಚ್ಚುವರಿ ಹಾಲನ್ನು ನೀಡುವುದಾಗಿ ಹೇಳಿ ಪ್ರತಿ ಹಾಲಿನ ಪ್ಯಾಕೇಟ್ ಮೇಲೆ ೨ ರೂ. ಏರಿಕೆ ಮಾಡಿತ್ತು. ಈಗ ಪ್ರತಿ ಲೀಟರ್ ಹಾಲಿಗೆ ೫ ರೂ. ಏರಿಕೆ ಮಾಡಲು ಮುಂದಾಗಿದ್ದು, ಹೆಚ್ಚುವರಿಯಾಗಿ ನೀಡಿದ್ದ ಹಾಲಿನ ಪ್ರಮಾಣವನ್ನೂ ಇಳಿಸಲಾಗುವುದು ಎಂದಿದೆ.
ನಮಗೆ ಹಾಲು ಮಂಡಳಿಯು ಹಾಲಿನ ಪ್ರಮಾಣವನ್ನು ಇಳಿಸುವುದರಲ್ಲಿ ಯಾವುದೇ ತಕರಾರು ಇಲ್ಲ. ಆದರೆ, ಬೆಲೆ ಏರಿಕೆ ಮಾಡುತ್ತಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಈ ಹಿಂದೆ ಇದ್ದ ೨ ರೂ.ಗಳನ್ನು ಒಳಗೊಂಡಂತೆ ೫ ರೂ. ಏರಿಕೆಯಾಗುತ್ತಿದೆಯೋ ಅಥವಾ ೨ ರೂ.ಗಳಲ್ಲದೆ ಹೆಚ್ಚುವರಿಯಾಗಿ ೫ ರೂ. ಏರಿಕೆಯಾಗುತ್ತಿದೆಯೇ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು.
೨ ರೂ.ಗಳೊಂದಿಗೆ ಮತ್ತೆ ಹೊಸದಾಗಿ ೫ ರೂ. ಏರಿಕೆಯಾದರೆ, ಒಟ್ಟು ೭ ರೂ. ಏರಿಕೆಯಾದಂತಾಗುತ್ತದೆ. ಈ ಬಗ್ಗೆ ಕರ್ನಾಟಕ ಹಾಲು ಮಹಾಮಂಡಳಿ ಸ್ಪಷ್ಟನೆ ನೀಡಬೇಕು. ಅಲ್ಲದೇ ಪ್ರತಿ ಜಿಲ್ಲಾ ಹಾಲು ಒಕ್ಕೂಟವು ಹಾಲಿನ ಉಪ ಉತ್ಪನ್ನಗಳಾದ ಮೊಸರು, ಲಸ್ಸಿ, ಮಜ್ಜಿಗೆ, ಪೇಡ, ಮೈಸೂರು ಪಾಕ್, ಇತ್ಯಾದಿಗಳ ಮೇಲೆ ತನ್ನಿಚ್ಚೆಯಂತೆ ದರ ಏರಿಕೆ ಮಾಡುತ್ತಿವೆ. ಇವುಗಳ ಬಗ್ಗೆಯೂ ಸ್ಪಷ್ಟನೆ ನೀಡುವುದು ಅಗತ್ಯ.
-ವಿಜಯ್ ಹೆಮ್ಮಿಗೆ, ಮೈಸೂರು.




