ಸ್ವಾಮಿ ಪೊನ್ನಾಚಿ
ನೀವು ಯಾವುದೋ ಸಾಹಿತ್ಯಕ ಕಾರ್ಯಕ್ರಮವೊಂದಕ್ಕೆ ಹೋಗಿರುತ್ತೀರಿ. ಅಲ್ಲಿ ನಿಮ್ಮ ಇಷ್ಟದ ಬರಹಗಾರ ಅಥವಾ ಸಾಹಿತ್ಯ ಲೋಕದ ತಾರೆಯರ ಜೊತೆ ಒಂದು ಸೆಲ್ಛಿ ತೆಗೆದುಕೊಂಡು; ಇಂತಹವರ ಜೊತೆಯಲ್ಲಿ ಎಂದು ಸಂಭ್ರಮದಿಂದ ಎಫ್‌ಬಿನಲ್ಲೋ ಇನ್ಸ್ಟಾಗ್ರಾಂನಲ್ಲೋ ಅಪ್ಲೋಡ್ ಮಾಡಿರುತ್ತೀರಿ. ಅದು ನಿಮಗೆ ಮರೆತೇ ಹೋಗಿರುತ್ತದೆ. ಈ ನಡುವೆ ನಿಮಗೂ ಕೂಡ ಬರೆಯುವ ಹುಮ್ಮಸ್ಸಾಗಿ ಉದಯೋನ್ಮುಖ ಬರಹಗಾರರಾಗಿ ಹೆಸರು ಮಾಡುತ್ತೀರಿ. ಇಂತಹದೇ ಒಂದು ಸಾಹಿತ್ಯಕ ಕಾರ್ಯಕ್ರಮದಲ್ಲಿ ನೀವು ಗುಂಪುಗಾರಿಕೆ ಬಗ್ಗೆಯೋ ಪಂಥಗಳ ಬಗ್ಗೆಯೋ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಮಾತನಾಡಿರುತ್ತೀರಿ. ಮಾರನೇ ದಿನ ನಿಮ್ಮ ಹಳೆಯ ಸೆಲ್ಛಿ ಫೋಟೊಗಳನ್ನು ನಿಮ್ಮದೇ ಖಾತೆಯಲ್ಲಿ ಹುಡುಕಿ ತಂದು ಇಂತಹವರ ಜೊತೆ ಫೋಟೊ ತೆಗೆದುಕೊಂಡಿದ್ದಾರೆ. ಇವರು ಅವರ ಗುಂಪು ಎಂದು ನಿಮ್ಮ ಮೇಲೆ ಅಕ್ಷರ ದಾಳಿ ನಡೆಸಿ ನಿಮ್ಮನ್ನು ಅಲ್ಲಿಗೆ ಎಸೆದು ಬಿಟ್ಟಿರುತ್ತಾರೆ. ಇವತ್ತಿನ ನಮ್ಮ ಸಾಹಿತ್ಯ ಲೋಕದ ಪ್ರಜ್ಞೆ ಮತ್ತು ಸಂವೇದನೆ ಫೋಟೊ ನೋಡಿ, ಗುಂಪಿಗೆ ಸೇರಿಸುವಷ್ಟರ ಮಟ್ಟಿಗೆ ಬಂದು ನಿಂತಿದೆ. ಸೈದ್ಧಾಂತಿಕ ವಿಚಾರಗಳ ಸಮಾನ ಮಾನಸಿಕತೆ ಇರಲಿ, ಕೊನೆಗೆ ಆಸಕ್ತಿ ಅಭಿರುಚಿಗಳನ್ನು ನೋಡಿಕೊಂಡಾದರೂ ಗುಂಪಿಗೆ ಸೇರಿಸುತ್ತಾರ? ಉಹುಂ, ನಿಮಗೂ ನಿಮ್ಮನ್ನು ಗುಂಪಿಗೆ ಸೇರಿಸಲ್ಪಟ್ಟಿರುವ ವ್ಯಕ್ತಿಗೂ ಸಂಬಂಧವೇ ಇರುವುದಿಲ್ಲ. ಆದರೂ ನೀವು ಆ ಗುಂಪಿಗೆ ಸೇರಿದವರಾಗಿರುತ್ತೀರಿ. ಮೊದಲೆಲ್ಲ ಪರೀಕ್ಷೆಯಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ ಎಂದು ಕೊಡುತ್ತ್ತಿದ್ದರು. ಈಗ ಕಾಲ ಬದಲಾಗಿದೆ. ಈ ಪದದ ಗುಂಪು ಗುರ್ತಿಸಿ ಎನ್ನುವಂತಾಗಿದೆ!
ನಾವು ಜಗತ್ತು ಮೆಚ್ಚುವಂತಹ ಕಥೆ, ಕಾದಂಬರಿಕಾರರಾಗಬೇಕೆಂದು ಬಹಳಷ್ಟು ಸಾಹಿತ್ಯದ ಕೂಟಗಳಿಗೆ ಸೇರುತ್ತೇವೆ. ಹಾಗೆ ನೋಡಿದರೆ ಪ್ರಾಮಾಣಿಕವಾಗಿ ಮಾರ್ಗದರ್ಶನಗಳು ಕೂಡ ಇಂತಹ ಕೂಟಗಳಿಂದ ಸಿಗುತ್ತಿವೆ. ಅಂತಹ ಕೂಟಗಳಿಂದ ರೂಪುಗೊಂಡ ಬಹಳ ಬರಹಗಾರರು ನಮ್ಮ ನಡುವೆ ಇದ್ದಾರೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಅದು ಅವರ ಪ್ರತಿಭೆಯಿಂದ ಬೆಳೆದದ್ದೋ? ಕೂಟ ರೂಪಿಸಿದ್ದೋ ಅದು ಬೇರೆ ವಿಚಾರ. ಬೆಳೆಯುವುದು? ಮುಖ್ಯ. ಒಂದು ವಸ್ತುವನ್ನು ತಯಾರಿಸಿದಂತಲ್ಲ ಕೂಟ. ಹಾಗೆ ಕೂಟಗಳಿಂದ ಕಮ್ಮಟಗಳಿಂದ ಬರಹಗಾರರನ್ನು ಹುಟ್ಟು ಹಾಕುವಂತಿದ್ದರೆ ಇವತ್ತು ಯೂನಿವರ್ಸಿಟಿಗಳ ತುಂಬಾ ಬಡಾಯಿ ಹೊಡೆಯುವವರಿಗಿಂತ ಹೆಚ್ಚಾಗಿ ಬರಹಗಾರರೇ ಕಾಣಸಿಗುತ್ತಿದ್ದರು. ವಿಷಯ ಇದಲ್ಲ. ಈ ತರಹದ ಗುಂಪುಗಳಿಂದ ಮಾರ್ಗದರ್ಶನ ಪಡೆದುಕೊಂಡ ಕ್ಷಣ ಆ ಗುಂಪಿನವರೇ ಅವಕಾಶಗಳನ್ನು ಕೊಟ್ಟು ಬೆಳೆಸಿದರು ಎಂದು ವ್ಯಕ್ತಿಯ ಪ್ರತಿಭೆಯನ್ನೇ ಅಲ್ಲಗೆಳೆಯವುದಿದೆಯಲ್ಲ! ಇದು ಮಾತ್ರ ಒಂಥರಾ ಹೊಟ್ಟೆ ಉರಿ ಸಂಗತಿ! ನೆಗೆಯಲಾರದವನನ್ನು ಎಷ್ಟು ತಳ್ಳಬಹುದು ಹೇಳಿ. ಒಂದು ಹಂತಕ್ಕೆ ಆತ ನೆಗೆಯುವುದನ್ನೇ ಬಿಟ್ಟು; ತಳ್ಳಿ ಕೊಟ್ಟಿರಬಹುದಾದ ಜಾಗದಲ್ಲೇ ಕುಳಿತಿರುತ್ತಾನೆ. ಅದರ ಆಚೆಗೆ ನೆಗೆಯುವ ಕೆಲಸ ಮಾತ್ರ ಆತನ ಪ್ರತಿಭೆಯದ್ದು. ಇಲ್ಲಿ ನೆಗೆದವರು ಯಾರು? ತಳ್ಳಿಸಿಕೊಂಡವರು ಯಾರು? ಎಂಬುದು ಮಾತ್ರ ಅವರನ್ನು ಓದಿಕೊಂಡವರಿಗೆ ಚೆನ್ನಾಗಿ ಗೊತ್ತಾಗಿಬಿಡುತ್ತದೆ. ಇಷ್ಟು ಮಾತ್ರದ ಪ್ರಜ್ಞೆ ಇದ್ದರೆ ಸಾಕಲ್ಲವೇ!?
ಸ್ವಜಾತಿಯವರನ್ನು ಮುನ್ನಡೆಗೆ ತರುವುದು, ಪ್ರೇಮಕಾಮದ ಋಣಕ್ಕೆ ಅವಕಾಶಗಳನ್ನು ಕಲ್ಪಿಸುವುದು, ವೈಚಾರಿಕ ಗುಲಾಮಗಿರಿಗೆ ಮಹತ್ವ ಕೊಡುವುದು ಸಾಹಿತ್ಯ ಮಾತ್ರವಲ್ಲ; ಎಲ್ಲಾ ಕ್ಷೇತ್ರಗಳಲ್ಲೂ ಇದ್ದಿದ್ದೆ. ಪ್ರಾಮಾಣಿಕವಾಗಿ ಸಲ್ಲಬೇಕಿರುವವರಿಗೆ, ಉದ್ದೇಶಪೂರ್ವಕವಾಗಿ ತಪ್ಪಿಸಿ ಆಯಾ ಜಾಗಕ್ಕೆ ಜಾತಿಕರನ್ನು, ಪ್ರೀತಿಪಾತ್ರರನ್ನು ಪರ್ಯಾಯಮಾಡುವುದಿದೆಯಲ್ಲ, ಇದು ಹೀನಾಯವಾದ ಮತ್ತು ಸಾಂಸ್ಕ ತಿಕಅಧಃಪತನದ ಸಂಗತಿ. ಇವತ್ತಿನ ಬಹುತೇಕ ಹುದ್ದೆಗಳು, ಪ್ರಶಸ್ತಿ ಪುರಸ್ಕಾರಗಳು, ನಗದು ಬಹುಮಾನಗಳು ಇವೇ ಆಧಾರದ ಮೇಲೆ ಬಿಕರಿಯಾಗುತ್ತವೆಂದು ಹಲವರು ಹೇಳುತ್ತಾರೆ. ಕೆಲವರಿಗೆ ಖಂಡಿತವಾಗಿಯೂ ಗೊತ್ತಿರುತ್ತದೆ. ಇಂಥದ್ದನ್ನೆಲ್ಲ ಅಲ್ಲಲ್ಲಿ ಗುಂಪುಗಾರಿಕೆ ಮಾಡಿಕೊಂಡು ಅವರಿಗೆ ಹೀಗೆ ಪ್ರಶಸ್ತಿ ಸಿಕ್ಕಿತು, ಹಾಗೆ ಸಿಕ್ಕಿತು ಎಂದೆಲ್ಲ ಮಾತನಾಡಿಕೊಳ್ಳುವರೇ ವಿನಾ ನೇರವಾಗಿ ವಿರೋಧಿಸುವ ನಿರ್ಭಿಡೆ ಅವರಿಗಿರುವುದಿಲ್ಲ. ನೇರವಾಗಿ ಮಾತನಾಡಿ ನಾನ್ಯಾಕೆ ಕೆಟ್ಟವನಾಗಲಿ ಎನ್ನುವ ಜಾಣಕುರುಡು. ಇದ್ದುದರಲ್ಲಿ ಧೈರ್ಯಮಾಡಿ ಒಬ್ಬಂಟಿಯಾಗಿ ಸಾರ್ವಜನಿಕವಾಗಿ ಪ್ರಶ್ನೆ ಮಾಡಿದವನನ್ನು ಈವತ್ತು ನಾವು ಇವನ್ಯಾರೋ ಅನ್ಯಗ್ರಹದ ತಲೆಕೆಟ್ಟಜೀವಿ ಎಂಬಂತೆ ಕ್ಷುದ್ರನೋಟದಿಂದ ನೋಡುತ್ತೇವೆ. ಒಂದು ಕಾಲದಲ್ಲಿ ಹೋರಾಟಗಳೆಂದರೆ ಅದಕ್ಕೊಂದು ಗಂಭೀರತೆ ಇತ್ತು. ಇವತ್ತಿನ ನಮ್ಮ ಸಾಹಿತಿಗಳ ಹೋರಾಟವೆಲ್ಲ ಟೀ ಕುಡಿಯುವಾಗ, ತಿಂಡಿ ತಿನ್ನುವಾಗಿನ ಬಾಯಿಚಪಲದ ಮಾತುಗಳಾಗಿರುತ್ತವೆ. ಇನ್ನೂ ಮುಂದುವರಿದು ಹೇಳುವುದಾದರೆ ರಾತ್ರಿ ಎಣ್ಣೆ ಹೊಡೆಯುವಾಗ ತಲೆ ಜೋಲಿ ಹೊಡೆಸಿಕೊಂಡು ಏನು ಮಾತನಾಡುತ್ತಿದ್ದೇವೆ ಎಂದು ಪ್ರಜ್ಞೆ ಇಲ್ಲದೆ ಕಕ್ಕುವುದನ್ನೇ ಉಗ್ರ ಹೋರಾಟ ಎಂದುಕೊಳ್ಳಬಹುದು.
ಇಬ್ಬರು ಗಂಡುಮಕ್ಕಳು ಅಥವಾ ಹೆಣ್ಣುಮಕ್ಕಳು ಒಟ್ಟಿಗೆ ಟೀ ಕುಡಿದು, ಪಾನಿಪುರಿ ತಿಂದು, ಇಷ್ಟದ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಲೋಕಾಭಿರಾಮವಾಗಿ ಓಡಾಡಿಕೊಂಡು ಇರುವಂತೆ; ಒಂದು ಗಂಡು ಮತ್ತು ಹೆಣ್ಣು ಜೋಡಿ ಇರಬಾರದಾ? ಪ್ರೇಮ, ಕಾಮವನ್ನು ಮೀರಿ ಒಂದು ಅನೂಹ್ಯ ನಿಷ್ಕಲ್ಮಶ ಸಂಬಂಧ ಇರುವುದಿಲ್ಲವಾ? ಯಾಕೆ ಒಂದು ಗಂಡು ಹೆಣ್ಣು ಒಟ್ಟಿಗೆ ಒಂದೆರಡು ಕಡೆ ಕಾಣಿಸಿಕೊಂಡ ಕೂಡಲೇ ಇಬ್ಬರ ನಡುವೆ ಅದೇ ಇದೆ ಎನ್ನುವುದು? ಅದರ ಕುರಿತು ಹಗುರವಾಗಿ ಅಲ್ಲಿ ಇಲ್ಲಿ ಮಾತಾಡಿ ಮರ್ಯಾದೆ ಕಳೆಯುವುದು. ಆಯಿತು, ಒಂದು ವೇಳೆ ಇಬ್ಬರ ನಡುವೆ ಅದೇ ಇದ್ದುಬಿಟ್ಟಿರಲಿ, ತಪ್ಪೇನು? ಅದು ಅವರ ವೈಯಕ್ತಿಕ ಇಚ್ಛೆ ಮತ್ತು ಆಸಕ್ತಿ. ಅದನ್ನು ಕುರಿತು ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಅದಾಗಿಯೂ ಸುಖಾಸುಮ್ಮನೆ ಒಂದು ಗಂಡು ಮತ್ತು ಹೆಣ್ಣಿನ ನಡುವೆ ಗಾಸಿಪ್ ಹಬ್ಬಿಸುವಂಥ ಕೆಲಸವನ್ನು ಯಾರೋ ಅನಾಗರಿಕರು ಮಾಡಿದರೆ ಹಾಳಾಗಿ ಹೋಗಲಿ ಎಂದು ಬಿಡಬಹುದು. ನಮ್ಮ ಅಕ್ಷರ ಲೋಕದ ಸಂವೇದನಾಶೀಲರು ಈ ಶೀಲದ ಬಗ್ಗೆ ಹೀನಾಯವಾಗಿ ಮಾತನಾಡುವುದು ಮಾತ್ರ ಇವರ ಬೌದ್ಧಿಕತೆಯ ಹೀನಸ್ಥಿತಿ ತೋರಿಸುತ್ತದೆ. ಇಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಕ್ಕೂ ಕಾರಣವಿದೆ. ನನ್ನ ಗೆಳತಿ ಒಬ್ಬಳು ಅಚಾನಕ್ ಬರವಣಿಗೆ ಹವ್ಯಾಸಕ್ಕೆ ತೊಡಗಿಸಿಕೊಂಡು ಪತ್ರಿಕೆಗಳಿಗೆ ಬರೆಯುತ್ತಿದ್ದವಳು ಯಾವುದೋ ಒಂದೆರಡು ಕಾರ್ಯಕ್ರಮದಲ್ಲಿ ಇಷ್ಟದ ಲೇಖಕರೊಂದಿಗೆ ಸಲುಗೆಯಿಂದ ಮಾತನಾಡಿದ್ದಕ್ಕೆ ಅದು ಗಾಸಿಪ್ ಆಗಿ, ಕುಟುಂಬಕ್ಕೆ ಗೊತ್ತಾಗಿ ರಾದ್ಧಾಂತವಾಗಿ ಸದ್ಯ ಈಗ ಆಕೆ ಇದರ ಸಹವಾಸವೇ ಬೇಡ ಎಂದು ಕಾರ್ಯಕ್ರಮಕ್ಕೆ ಹೋಗುವುದನ್ನೇ ಬಿಟ್ಟಿದ್ದಾಳೆ.
ಇದರ ಕುರಿತು ಹಾಗೆ ಹೀಗೆ ಎಂದು ಏನೇ ವಾದ, ಚರ್ಚೆ ಮಾಡಿದರು ಕೂಡ ಕೊನೆಗೆ ನಾವು ಆಡಿದ ಕ್ಷುಲ್ಲಕವಾದ ಮಾತುಗಳೇ ಕಾರಣವಾಗಿರುತ್ತವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಹಾಗಂತ ಇಲ್ಲಿ ಎಲ್ಲವೂ ಚೆನ್ನಾಗಿದೆ ಅಂತ ಅಲ್ಲ. ಚಂದದ ಹೆಣ್ಣುಮಕ್ಕಳಿಗೆ ಅವಕಾಶಗಳ ನೆಪದಲ್ಲಿ ಆಮಿಷ ಒಡ್ಡುವವರು ಇದ್ದಾರೆ. ಚಂದವನ್ನೇ ಬಂಡವಾಳವಾಗಿಸಿಕೊಂಡ ಹೆಣ್ಣುಮಕ್ಕಳೂ ಇದ್ದಾರೆ. ಮಲೆನಾಡು ಕಡೆಯ ಸ್ಛುರದ್ರೂಪಿ ಹೆಣ್ಣು ಮಗಳೊಬ್ಬಳು ಈ ತರಹದ ಕಾಟದಿಂದಾಗಿ ಸಾಹಿತ್ಯ ಲೋಕದಿಂದಲೇ ಮರೆಯಾಗಿಬಿಟ್ಟಳು. ಮತ್ತೊಬ್ಬ ಹೆಣ್ಣುಮಗಳು ಆತ್ಮಹತ್ಯೆಯನ್ನೇ ಮಾಡಿಕೊಂಡಳು. ಇದನ್ನೆಲ್ಲಾ ನಮ್ಮ ಸಾಹಿತ್ಯವಲಯ ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ಇವತ್ತಿಗೂ ದೊಡ್ಡ ಸಾಹಿತಿಗಳ ಜೊತೆಗೆ ಒಬ್ಬ ಮಹಿಳಾ ಸಾಹಿತಿಯನ್ನು ಜಂಟಿ ಹಾಕಿಕೊಂಡು ನಾವು ಮಾತನಾಡುವುದನ್ನು ಬಿಟ್ಟಿಲ್ಲ. ಇಷ್ಟಕ್ಕೂ ವಯೋಮಾನ ಮೀರಿ, ಗಂಡು ಹೆಣ್ಣು ಎನ್ನುವ ಭೇದಭಾವ ಮೀರಿ, ಸರಳವಾದ, ಸಲೀಸಾದ, ಸೊಗಸಾದ ಸಂಬಂಧಗಳು ಇರಬಾರದ? ಹಾಗೆ ಇರುವ ಸಂಬಂಧಗಳಿಗೂ ಸಂಬಂಧ ಕಲ್ಪಿಸಿ ಮಾತನಾಡುವುದು ನಮ್ಮ ವಲಯ ಬಿಟ್ಟರೆ ಎಷ್ಟು ಚಂದ ಇರುತ್ತದೆ ಅಲ್ವಾ!?
ಇನ್ನು ವಿಮರ್ಶೆಗೆ ಬಂದರೆ ಕಟುವಾದ, ತೀಕ್ಷ್ಣವಾದ, ನಿಷ್ಪಕ್ಷಪಾತವಾಗಿ ವಿಮರ್ಶಿಸುವ ವಿಮರ್ಶಕರ ಬಹುದೊಡ್ಡ ಕೊರತೆ ನಮ್ಮ ಸಾಹಿತ್ಯ ಲೋಕದಲ್ಲಿದೆ. ವೈಯಕ್ತಿಕವಾಗಿ ಪರಿಚಯವಿರುವ ಅಥವಾ ತನ್ನದೇ ಜಾತಿಯ ಯಾವುದೇ ಕಾರಣಕ್ಕೆ ಗೊತ್ತಿರುವ ಕೆಲವನ್ನೇ ಓದಿ ಬರೆಯುವ ವಿಮರ್ಶಕರು ತಮಗೆ ಪರಿಚಯವೇ ಇಲ್ಲದವರ ಬರಹಗಳನ್ನು ತರಿಸಿಕೊಂಡು ಓದುವುದು, ಅಭಿಪ್ರಾಯ ಹೇಳುವುದು ತುಂಬಾ ಕಡಿಮೆ. ಇಲ್ಲಿ ಇನ್ನೂ ಒಂದು ಕೆಟ್ಟ ಪದ್ಧತಿ ಇದೆ. ಪರಸ್ಪರ ಬೆನ್ನು ತಟ್ಟಿಕೊಳ್ಳುವುದು. ನನ್ನ ಪುಸ್ತಕ ಬಂದಾಗ ಯಾರು ಅದರ ಬಗ್ಗೆ ಮಾತನಾಡುತ್ತಾರೋ, ಅದನ್ನು ಪ್ರಮೋಟ್ ಮಾಡಿರುತ್ತಾರೋ ಅವರ ಪುಸ್ತಕಗಳ ಬಗ್ಗೆ ಮಾತ್ರ ನಾನು ಮಾತನಾಡುವುದು, ಪ್ರಮೋಟ್ ಮಾಡುವುದು. ನನ್ನ ಪುಸ್ತಕಕ್ಕೆ ರಿಯಾಕ್ಟ್ ಮಾಡದೆ ಇದ್ದವರ ಪುಸ್ತಕ ಎಷ್ಟೇ ಗುಣಮಟ್ಟದ್ದಾಗಿರಲಿ, ನನಗೆ ಮಾಡಿಲ್ಲ, ನಾನ್ಯಾಕೆ ಮಾಡಲಿ ಎನ್ನುವ ಧೋರಣೆಯಿಂದ ಎಷ್ಟೋ ಒಳ್ಳೆಯ ಪುಸ್ತಕಗಳನ್ನು ಕುರಿತು ನಮ್ಮ ಸಾಹಿತಿಗಳು ಮಾತೇ ಆಡುವುದಿಲ್ಲ. ಕೆಲವೊಮ್ಮೆ ವ್ಯಕ್ತಿಯ ಮೇಲಿನ ಪೂರ್ವಗ್ರಹಗಳಿಂದ ಅವರ ಪುಸ್ತಕವನ್ನು ಮುಟ್ಟುವ ಗೋಜಿಗೂ ಹೋಗಿರುವುದಿಲ್ಲ. ಇಲ್ಲಿ ಇನ್ನೂ ಒಂದು ಗೊಂದಲವಿದೆ. ನನ್ನ ಪುಸ್ತಕಕ್ಕೆ ಅವರು ಬರೆದರು, ಅವರ ಪುಸ್ತಕಕ್ಕೆ ನಾನು ಬರೆದರೆ ಪರಸ್ಪರ ಬೆನ್ನು ತಟ್ಟಿಕೊಂಡರು ಎನ್ನುವ ಅಪವಾದದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೂಡ ಕೆಲವು ಚಂದದ ಪುಸ್ತಕಗಳ ಬಗ್ಗೆ ರಿವ್ಯೂ ಮಾಡಲಾಗುವುದಿಲ್ಲ. ಮಾತನಾಡಿದರೂ ಕಷ್ಟ, ಮಾತಾಡದಿದ್ದರೂ ಕಷ್ಟ ಎನ್ನುವಂತಹ ಉಸಿರು ಕಟ್ಟಿಸುವ ಸ್ಥಿತಿ. ಇದೆಲ್ಲದರ ಆಚೆಗೆ ಕೃತಿ ಮೌಲ್ಯದ್ದಾಗಿದ್ದರೆ ಅದು ಯಾರೇ ಬರೆದಿರಲಿ, ಅದರ ಕುರಿತು ಪೂರ್ವಗ್ರಹವಿಲ್ಲದೆ ಮಾತನಾಡುವುದನ್ನು ಮತ್ತು ಇತರರಿಗೆ ಓದುವಂತೆ ಪ್ರೇರೇಪಣೆ ಮಾಡುವ ಗುಣವನ್ನು ನಾವೆಲ್ಲರೂ ಕಲಿಯಬೇಕಾಗಿದೆ. ಆ ಜಿಡ್ಡುತನದಿಂದ ಹೊರ ಬರಬೇಕಾಗಿದೆ. ಸೈದ್ಧಾಂತಿಕವಾಗಿ ನಿಲುವುಗಳು ಬೇರೆಬೇರೆ ಇದ್ದರೂ ಬೇಕಾದಷ್ಟು ವಾದ ವಾಗ್ವಾದಗಳಾಗಿದ್ದರೂ ವೈಯಕ್ತಿಕವಾಗಿ ಪರಸ್ಪರ ಸಂಬಂಧಗಳು ಬಹಳ ಚೆನ್ನಾಗಿರುವಂತೆ ನೋಡಿಕೊಳ್ಳುವುದೇ ದುಸ್ತರವಾಗಿದೆ ಈ ಕಾಲದಲ್ಲಿ. ಒಬ್ಬರ ಜೊತೆ ಗುರುತಿಸಿಕೊಂಡಿದ್ದಾನೆ ಎನ್ನುವ ಕಾರಣಕ್ಕೆ ಕನಿಷ್ಠ ಪಕ್ಷ ಆ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳಲೂ ನಾವು ಹಿಂಜರಿಯುತ್ತೇವೆ. ಪರಿಸ್ಥಿತಿ ಹೀಗಿರುವಾಗ ಆ ವ್ಯಕ್ತಿಯ ಒಲವು ನಿಲುವು ಏನಿದೆ ಎನ್ನುವುದನ್ನು ತಿಳಿದುಕೊಳ್ಳುವುದಾದರೂ ಹೇಗೆ? ಆತನ ಸೈದ್ಧಾಂತಿಕ ವಿಚಾರಗಳು ಹೇಗಿವೆ ಎಂಬುದನ್ನು ವಿಮರ್ಶಿಸುವುದಾದರೂ ಹೇಗೆ? ಈ ಎಲ್ಲಾ ಮನಸ್ಥಿತಿಗಳಿಂದ ನಾವು ಆಚೆ ಬರಬೇಕಾಗಿದೆ. ನಮ್ಮೊಳಗಿನ ನಿಜದ ಸಂವೇದನಾಶೀಲ ವ್ಯಕ್ತಿಯನ್ನು ಜೀವಂತವಿಟ್ಟುಕೊಳ್ಳಬೇಕಾಗಿದೆ.
” ನನ್ನ ಗೆಳತಿ ಒಬ್ಬಳು ಅಚಾನಕ್ ಬರವಣಿಗೆ ಹವ್ಯಾಸಕ್ಕೆ ತೊಡಗಿಸಿಕೊಂಡು ಪತ್ರಿಕೆಗಳಿಗೆ ಬರೆಯುತ್ತಿದ್ದವಳು, ಯಾವುದೋ ಒಂದೆರಡು ಕಾರ್ಯಕ್ರಮಗಳಲ್ಲಿ ಇಷ್ಟದ ಲೇಖಕರೊಂದಿಗೆ ಸಲುಗೆಯಿಂದ ಮಾತನಾಡಿದ್ದಕ್ಕೆ ಅದು ಗಾಸಿಪ್ ಆಗಿ, ಕುಟುಂಬಕ್ಕೆ ಗೊತ್ತಾಗಿ ರಾದ್ಧಾಂತವಾಗಿ ಸದ್ಯ ಈಗ ಆಕೆ ಇದರ ಸಹವಾಸವೇ ಬೇಡ ಎಂದು ಕಾರ್ಯಕ್ರಮಕ್ಕೆ ಹೋಗುವುದನ್ನೇ ಬಿಟ್ಟಿದ್ದಾಳೆ.”





