ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನೂತನವಾಗಿ 9 ವಿಶ್ವವಿದ್ಯಾನಿಲಯಗಳನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ, ಅವು ಶೈಕ್ಷಣಿಕವಾಗಿ ಹಾಗೂ ಸಂಶೋಧನಾತ್ಮಕವಾಗಿ ಯಾವುದೇ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ.
ಹೀಗೆ ಅಭಿವೃದ್ಧಿ ಕಾಣದ ಎಲ್ಲಾ ನೂತನ ವಿಶ್ವವಿದ್ಯಾನಿಲಯಗಳನ್ನು ಮಾತ್ರ ವಿವಿಗಳೊಂದಿಗೆ ವಿಲೀನಗೊಳಿಸಲು ಮುಂದಾಗಿದ್ದು, ಇದು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಅವರ ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ವಿಶ್ವದ ಅತ್ಯುನ್ನತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯವನ್ನೂ ಸೇರಿದಂತೆ ಹಲವು ವಿಶ್ವವಿದ್ಯಾನಿಲಯಗಳನ್ನು ಕುಂದಿಸುವ ಪ್ರಯತ್ನದಿಂದಲೋ ಏನೋ ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಎಂಬಂತೆ ಯಾವ ಪೂರ್ವಸಿದ್ಧತೆಗಳೂ ಇಲ್ಲದೇ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಯಿತು. ಹೀಗೆ ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಸ್ಥಾಪನೆಯಾದ್ದರಿಂದ ಉನ್ನತ ಶಿಕ್ಷಣಕ್ಕೆ ಹಾಗೂ ಹೊಸ ಸಂಶೋಧನೆಗಳಿಗೆ ಅವಕಾಶ ವಿಸ್ತೃತಗೊಳ್ಳಬಹುದು ಎಂದು ಭಾವಿಸಲಾಗಿತ್ತು. ಆದರೆ, ವರ್ಷಗಳು ಕಳೆದ ಬಳಿಕ ಹೊಸ ವಿಶ್ವವಿದ್ಯಾನಿಲಯಗಳ ದುಸ್ಥಿತಿ ಕಂಡು ಬೇಸರವಾಯಿತು. ದೊಡ್ಡ ಸರ್ಕಾರಿ ಕಾಲೇಜುಗಳನ್ನು ವಿಶ್ವವಿದ್ಯಾನಿಲಯಗಳನ್ನಾಗಿಸಿ, ಅಲ್ಲಿ ಕಚೇರಿಗಳನ್ನು ಸ್ಥಾಪಿಸಿ, ರಿಜಿಸ್ಟ್ರಾರ್, ಪರೀಕ್ಷಾಂಗಗಳೆಂದು ಫಲಕಗಳನ್ನು ಅಳವಡಿಸಿದ ಮಾತ್ರಕ್ಕೆ ವಿಶ್ವವಿದ್ಯಾನಿಲಯಗಳಾಗುವುದಿಲ್ಲ. ಅದಕ್ಕೆ ತಕ್ಕಂತೆ ಎಲ್ಲಾ ಸೌಲಭ್ಯಗಳನ್ನೂ ಒದಗಿಸಬೇಕು. ಇದ್ದ ಪಠ್ಯಕ್ರಮಗಳನ್ನೂ ತಿರುಚಿ, ಗೊಂದಲ ಮೂಡಿಸಿದ್ದಲ್ಲದೆ ಅಧಿಕಾರಿಗಳ ನೇಮಕಾತಿಯಲ್ಲೂ ತೊಡಕುಗಳನ್ನು ಮಾಡುತ್ತಿದ್ದರೆ ವಿಶ್ವವಿದ್ಯಾನಿಲಯಗಳು ಬೆಳವಣಿಗೆ ಕಾಣುವುದಾದರೂ ಹೇಗೆ? ಅಲ್ಲದೆ ಈ ನೂತನ ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ದೊರಕಬೇಕಾದ ಯಾವುದೇ ಸೌಲಭ್ಯಗಳೂ ಸರಿಯಾಗಿ ಸಿಗುತ್ತಿರಲಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹೊಸ ವಿಶ್ವವಿದ್ಯಾನಿಲಯಗಳನ್ನು ಮೊದಲಿನ ಹಳೆಯ ವಿಶ್ವವಿದ್ಯಾನಿಲಯಗಳೊಂದಿಗೆ ವಿಲೀನಗೊಳಿಸಲು ಮುಂದಾಗಿರುವುದು ಉತ್ತಮ ನಿರ್ಧಾರ.
-ಡಾ.ಬಿ.ಕೆ.ಪ್ರಮಿಳಾದೇವಿ, ನಿವೃತ್ತ ಸಹ ಪ್ರಾಧ್ಯಾಪಕರು.



