Mysore
27
broken clouds

Social Media

ಬುಧವಾರ, 14 ಜನವರಿ 2026
Light
Dark

ಕೈ ನಾಯಕರ ಮೇಲಾಟ; ಡಿಕೆಶಿ ನಿರೀಕ್ಷೆಗೆ ಹೊಡೆತ

ಸಿದ್ದರಾಮಯ್ಯ ಅವರ ಮಾತಿನಿಂದ ರಾಜ್ಯ ರಾಜಕೀಯದಲ್ಲಿ ಕೋಲಾಹಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಡಿದ ಮಾತು ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿವೆ. ಅಂದ ಹಾಗೆ ಸಿದ್ದರಾಮಯ್ಯ ಅವರು ಆಡಿದ ಮಾತುಗಳೇನು? ಈ ಹಿಂದೆ ದೇವರಾಜ ಅರಸರು ಏಳು ವರ್ಷ, ಏಳು ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಅವರ ದಾಖಲೆಯನ್ನು ಮುರಿಯುವ ವಿಶ್ವಾಸ ನನಗಿದೆ ಎಂಬುದು ಅವರಾಡಿದ ಒಂದು ಮಾತು. ಇದೇ ಕಾಲಕ್ಕೆ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದರು.

ಯಾವಾಗ ಅವರು ಇಂತಹ ಮಾತುಗಳನ್ನು ಆಡಿದರೋ? ಆಗ ಸಹಜವಾಗಿಯೇ ರಾಜಕೀಯ ವಲಯಗಳಲ್ಲಿ ಕುತೂಹಲ ಕಾಣಿಸಿ ಕೊಂಡಿತು. ಕಾರಣ ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಪದೇ ಪದೇ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಮಾತ ನಾಡುತ್ತಿದ್ದರು. ಅಂತಹವರು ಇದ್ದಕ್ಕಿದ್ದಂತೆ ಮುಂದಿನ ಚುನಾವಣೆ ಯಲ್ಲಿಯೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು ಮತ್ತು ಏಳು ವರ್ಷ, ಏಳು ತಿಂಗಳ ಕಾಲ ಆಡಳಿತ ನಡೆಸಿದ ದೇವರಾಜ ಅರಸರ ದಾಖಲೆಯನ್ನು ಮುರಿಯುವ ವಿಶ್ವಾಸ ವ್ಯಕ್ತಪಡಿಸಿದರು. ಹೀಗೆ ಅವರಾಡಿದ ಎರಡೂ ಮಾತುಗಳು ಸಹಜವಾಗಿಯೇ ರಾಜಕೀಯ ವಲಯಗಳನ್ನು ಬಡಿದೆಬ್ಬಿಸಿವೆ. ಏಕೆಂದರೆ ೨೦೨೩ರಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಽಕಾರಕ್ಕೆ ಬಂದಾಗಿನಿಂದ ಒಂದೇ ವಿಷಯ ಅದನ್ನು ತಲ್ಲಣಗೊಳಿ ಸುತ್ತಿದೆ. ಅದೆಂದರೆ, ಕಾಂಗ್ರೆಸ್ ಅಧಿಕಾರಾವಧಿಯ ಮೊದಲರ್ಧ ಭಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ. ಎರಡನೇ ಭಾಗದಲ್ಲಿ ಹಾಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಯಾಗಲಿದ್ದಾರೆ ಎಂಬುದು.

ಈ ವಿಷಯ ಎಷ್ಟು ಸಂಘರ್ಷಗಳಿಗೆ ಕಾರಣವಾಗಿದೆಯೆಂದರೆ, ಸಿದ್ದರಾಮಯ್ಯ ಅವರ ಆಡಳಿತಾವಽಯ ಉದ್ದಕ್ಕೂ ಈ ಮಾತಿನ ಪರ, ವಿರೋಧವಾಗಿ ಚರ್ಚೆಗಳು ನಡೆಯುತ್ತಾ ಬಂದಿವೆ. ಕುತೂಹಲದ ಸಂಗತಿ ಎಂದರೆ ಅಽಕಾರ ಹಂಚಿಕೆಯ ಬಗ್ಗೆ ಮಾತನಾಡದಂತೆ ಕಾಂಗ್ರೆಸ್ ವರಿಷ್ಠರು ಪದೇ ಪದೇ ರಾಜ್ಯ ಕಾಂಗ್ರೆಸ್ಸಿಗರನ್ನು ಎಚ್ಚರಿಸಿದ್ದಾರೆಯೇ ಹೊರತು, ಮುಖ್ಯಮಂತ್ರಿ ಹುದ್ದೆಗೆ ಸಂಬಂಽಸಿದಂತೆ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಅಥವಾ ಆಗಿಲ್ಲ ಎಂದು ಹೇಳಿಲ್ಲ. ಒಂದು ವೇಳೆ ಅವರೇನಾದರೂ ಅಽಕಾರ ಹಂಚಿಕೆಯ ಕುರಿತಂತೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರೆ ಕಳೆದ ಇಪ್ಪತ್ತು ತಿಂಗಳುಗಳ ಉದ್ದಕ್ಕೂ ಈ ವಿಷಯ ಕಾಂಗ್ರೆಸ್ ಪಾಳೆಯವನ್ನು ತಲ್ಲಣಗೊಳಿಸುತ್ತಿರಲಿಲ್ಲ. ಹೀಗೆ ಅದು ತಲ್ಲಣಗೊಳಿಸುತ್ತಿರುವ ಕಾರಣಕ್ಕೇ ಕರ್ನಾಟಕದಲ್ಲಿ ದಲಿತ ಸಿಎಂ ಕೂಗು ಪುನಃ ಮೇಲೆದ್ದಿರುವುದು ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ. ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರು ಸಂಘಟಿತರಾಗಿ ಈ ಕೂಗಿಗೆ ಬಲ ತುಂಬುತ್ತಿರುವುದು.

ಕಾಂಗ್ರೆಸ್ ಮೂಲಗಳ ಪ್ರಕಾರ, ಇತ್ತೀಚೆಗೆ ದಿಲ್ಲಿ ಪ್ರವಾಸ ಮಾಡುತ್ತಿರುವ ಈ ಫೋರ್ ಮ್ಯಾನ್ ಆರ್ಮಿಯ ನಾಯಕರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅದೆಂದರೆ, ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದವಾಗಿದೆಯೇ? ಒಂದು ವೇಳೆ ಆಗಿದ್ದರೆ ಯಾವ ಕಾರಣಕ್ಕೂ ಹಾಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದಕ್ಕೆ ನಮ್ಮ ಸಹಮತವಿಲ್ಲ ಎಂಬುದು. ಹೀಗಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವುದೇ ಆದರೆ, ಅವರ ಜಾಗಕ್ಕೆ ಒಂದೋ ನೀವು ಬನ್ನಿ. ಇಲ್ಲವೇ ಭವಿಷ್ಯದ ಶಾಸಕಾಂಗ ಪಕ್ಷದ ನಾಯಕನ ಹುದ್ದೆಯ ಆಯ್ಕೆಗೆ ಚುನಾವಣೆ ನಡೆಯಲು ದಾರಿ ಮಾಡಿಕೊಡಿ ಎಂಬುದು ಈ ನಾಲ್ವರು ಸಚಿವರ ಮಾತು. ಈ ಸಚಿವರು ಹೇಳಿದ ಮಾತಿನಂತೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಚುನಾವಣೆ ನಡೆದಿದ್ದೇ ಆದರೆ ದಲಿತ ನಾಯಕರೊಬ್ಬರು ಮೊಟ್ಟಮೊದಲ ಬಾರಿ ಕರ್ನಾಟಕದ ಸಿಎಂ ಆಗಲಿದ್ದಾರೆ.

ಏಕೆಂದರೆ ಸದ್ಯದ ಶಾಸಕಾಂಗ ಬಲಾಬಲಗಳನ್ನು ನೋಡಿದರೆ ಶಾಸಕಾಂಗ ಪಕ್ಷದ ಬಹುತೇಕರ ಬೆಂಬಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗಿದೆ ಮತ್ತು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಚುನಾವಣೆ ನಡೆದರೆ ದೊಡ್ಡ ಸಂಖ್ಯೆಯ ಶಾಸಕರು ಡಿ. ಕೆ. ಶಿವಕುಮಾರ್ ಬೆಂಬಲಕ್ಕೆ ನಿಲ್ಲುವುದಿಲ್ಲ. ಇದು ಗೊತ್ತಿರುವುದರಿಂದಲೇ ಡಿ. ಕೆ. ಶಿವಕುಮಾರ್ ಏನು ಹೇಳುತ್ತಿದ್ದಾರೆ? ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನಗೆ ಯಾವ ಶಾಸಕರ ಬೆಂಬಲವೂ ಬೇಡ. ಪಕ್ಷ ಏನು ಹೇಳುತ್ತದೋ ಅದನ್ನು ಮಾಡುತ್ತೇನೆ. ಒಂದು ವೇಳೆ ಪಕ್ಷ ಅಧಿಕಾರದಿಂದ ಕೆಳಗಿಳಿಯಲು ಸೂಚಿಸಿದರೆ ನಾನು ಅದನ್ನು ಪಾಲಿಸುತ್ತೇನೆ, ಅಂತ ತಾನೇ? ಹೀಗೆ ಹೇಳುವ ಮೂಲಕ ಅವರು ಅಽಕಾರ ಹಂಚಿಕೆಯ ಒಪ್ಪಂದ ಪಾಲನೆಯಾಗಲು ಹೈಕಮಾಂಡ್ ಮೇಲೆ ಭಾರ ಹಾಕಿದ್ದಾರೆ. ಅರ್ಥಾತ್, ಅವರಿಗೆ ಶಾಸಕಾಂಗ ಪಕ್ಷದಲ್ಲಿ ತಮಗೆ ಬಹುಮತ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಇಂತಹ ಕಾಲಘಟ್ಟದಲ್ಲೇ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಮತ್ತು ದೇವರಾಜ ಅರಸರ ಆಡಳಿತಾವಧಿಯ ದಾಖಲೆಯನ್ನು ಮುರಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೊಂದು ವೇಳೆ ಅವರು ದೇವರಾಜ ಅರಸರ ದಾಖಲೆಯನ್ನು ಮುರಿಯಬೇಕು ಎಂದರೆ ಈ ಬಾರಿ ಅವರು ೨೦೨೬ರ ಜನವರಿಯವರೆಗಾದರೂ ಮುಖ್ಯಮಂತ್ರಿ ಗಳಾಗಿರಬೇಕು.

ಈಗಿರುವ ಮಾಹಿತಿಗಳ ಪ್ರಕಾರ, ಅಧಿಕಾರ ಹಂಚಿಕೆ ಒಪ್ಪಂದದ ಅನುಸಾರ ಸಿದ್ದರಾಮಯ್ಯ ಅವರು ಪ್ರಸಕ್ತ ವರ್ಷ ನವೆಂಬರ್ ಹೊತ್ತಿಗೆ ಡಿ. ಕೆ. ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟು ಕೊಡಬೇಕು. ಆದರೆ ಅವರು ದೇವರಾಜ ಅರಸರ ದಾಖಲೆ ಮುರಿಯಲು ಬಯಸಿದರೆ ಅಽಕಾರ ಹಂಚಿಕೆ ಒಪ್ಪಂದವನ್ನು ಉಲ್ಲಂಸಬೇಕಾಗುತ್ತದೆ. ಇದೇ ರೀತಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುವ ಅವರ ಇಂಗಿತ ನಿಜವೇ ಆದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಅವರ ಜಾಗ ಅಬಾಧಿತ ಎಂಬ ಸಂದೇಶ ರವಾನೆಯಾಗುತ್ತದೆ. ಇದು ಕೂಡ ಡಿಕೆಶಿ ನಿರೀಕ್ಷೆಗೆ ಹೊಡೆತ ಕೊಡುತ್ತದೆ.

ಹಾಗಾಗುತ್ತದಾ? ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಅವರ ಮಾತು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವುದಂತೂ ನಿಜ. ಮುಂದೇನೋ ಕಾದು ನೋಡಬೇಕು.

Tags:
error: Content is protected !!