Mysore
27
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ನಂಜನಗೂಡು: ಸುಲಬ ಹೆರಿಗೆಗಾಗಿ ಈ ರಸ್ತೆಗೆ ಬನ್ನಿ

– ಶ್ರೀಧರ್ ಆರ್ ಭಟ್

ಮೈಸೂರು: ಸುಲಬ ಹೆರಿಗೆಗಾಗಿ ಈ ರಸ್ತೆಗೆ ಬನ್ನಿ ಎಂದು ಇಲ್ಲಿ ಫಲಕ ಹಾಕಿಲ್ಲ. ಆದರೆ, ರಸ್ತೆ ದುಸ್ಥಿತಿ ಹಾಗಿದೆ. ನಿತ್ಯ ಸಾವಿರಾರು ಜನ ಹಾಗೂ ವಾಹನಗಳ ಸಂಚರಿಸುವ ನಂಜನಗೂಡು ರಸಬಾಳೆ ಖ್ಯಾತಿಯ ದೇವರಸನಹಳ್ಳಿಯ ರಸ್ತೆಯೇ ಇದು. ಗುಂಡಿಯಲ್ಲಿ ರಸ್ತೆಯೋ, ಗುಂಡಿಗಳಿಂದಲೇ ರಸ್ತೆಯೋ ಎಂಬುದೇ ತಿಳಿಯದಂತಾಗಿದೆ.

ನಂಜನಗೂಡು ನಗರದ ಹಳ್ಳದಕೇರಿಯಿಂದ ದೇವರಸನಹಳ್ಳಿ ಮೂಲಕ ಹೊಸೂರು, ಮಾಡ್ರಳ್ಳಿ, ಕೆಬ್ಬೇಪುರ, ಉಪ್ಪಿನಹಳ್ಳಿ, ಶ್ರೀನಗರ ಮೂಲಕ ಎಡಕ್ಕೆ ತಿರುಗಿದರೆ ಹೆಡತಲೆ, ಬಲಕ್ಕೆ ಹೊರಳಿದರೆ ಕಳಲೆ ಗೇಟ್ ತಲುಪಬಹುದಾದ ಕೃಷಿಕರು, ಕಾರ್ಮಿಕರು, ಶಾಲಾ ಬಾಲಕ-ಬಾಲಕಿಯರು ನಿತ್ಯ ಸಂಚರಿಸುವ ಲೋಕೋಪಯೋಗಿ ಇಲಾಖೆ ರಸ್ತೆಯ ವ್ಯಥೆ ಇದು.

ಈ ದಶಕದ ಆರಂಭದಲ್ಲಿ ಡಾಂಬರ್ ಕಂಡಿದ್ದು ಬಿಟ್ಟರೆ ಮುಂದೆಂದು ದುರಸ್ಥಿಯನ್ನೇ ಕಾಣದ ರಸ್ತೆ ಇದಾಗಿದೆ. ದಕ್ಷಿಣ ಕಾಶಿ ಶ್ರೀ ಕಂಠೇಶ್ವರನ ಸನ್ನಿಧಿಯಿಂದ ಕೇವಲ ಮೂರೇ ಮೂರು ಕಿ.ಮೀ ದೂರದ ದೇವರಸನಹಳ್ಳಿ ಹಾಗೂ ಮುಂದಿನ ಊರುಗಳಿಗೆ ತಲುಪುವ ಏಕೈಕ ಮಾರ್ಗ ಇದಾಗಿದೆ. ವಾಹನ ಚಾಲಕರು ರಸ್ತೆಯ ಒಂದು ಗುಂಡಿ ತಪ್ಪಿಸಿಕೊಳ್ಳಲು ಪಕ್ಕಕ್ಕೆ ಸರಿದರೆ ಮೂರು ಗುಂಡಿಗಳನ್ನು ಹತ್ತಿಳಿಯಬೇಕಾದ ಅನಿವಾರ್ಯತೆ ಇಲ್ಲಿದೆ.

ಬೇಸಿಗೆಯಾದರೆ ಧೂಳಿನ ಸ್ನಾನ, ಮಳೆಗಾಲವಾದರೆ ಹಳ್ಳ ಯಾವುದು, ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯಲಾರದ ಪರಿಸ್ಥಿತಿಯಲ್ಲಿ ಜೀವ ಕೈನಲ್ಲಿ ಹಿಡಿದುಕೊಂಡು ಭಯದಿಂದಲೇ ವಾಹನ ಚಾಲನೆ ಮಾಡಬೇಕಾಗರುವುದು ಈ ರಸ್ತೆಯಲ್ಲಿ ಸಂಚರಿಸುವವರ ಪಾಡಾಗಿದ್ದು, ನೂರಾರು ಜನ ಈಗಾಗಲೆ ಇಲ್ಲಿ ಬಿದ್ದು ಮೂಳೆ ಮುರಿದುಕೊಂಡು ನಾಟಿ ವೈದ್ಯರಾದ ಕಾಳಿರಯ್ಯ, ಶಿವಕುಮಾರ್‌ ಅವರ ಪೇಶೆಂಟುಗಳಾಗಿದ್ದಾರೆ.

“ಕಳೆದ 20 ವರ್ಷದಿಂದ ನಮ್ಮೂರ ರಸ್ತೆಗೆ ಡಾಂಬರ್ ಇರಲಿ ಹಿಡಿ ಮಣ್ಣು ಹಾಕಿಲ್ಲ ಇಗಲೂ ರಸ್ತೆ ಅಭಿವೃದ್ದಿಯಾಗದಿದ್ದರೆ ಮುಂದಿನ ಮಳೆಗಾಲ ಕಳೆಯುವುದರೊಳಗೆ ಇಲ್ಲೊಂದು ರಸ್ತೆ ಇತ್ತಾ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ”.
– ದೇವರಸನಹಳ್ಳಿ ರಾಜು

“ಹಿಂದಿನ ಜನಪ್ರತಿನಿಧಿಗಳ ತಾತ್ಸಾರದಿಂದಾಗಿ ಈ ರಸ್ತೆ ದುಸ್ಥಿತಿಗೆ ತಲುಪಿದೆ. ರಸ್ತೆ ದುರಸ್ಥಿಗಾಗಿ ಒತ್ತಾಯಿಸಿ ಅನೇಕ ಪ್ರತಿಭಟನೆಗಳು ನಡೆಸಿ ಕಂಡ ಕಂಡವರಿಗೆ ಮನವಿ ನೀಡಿದ್ದು ಈವರಿಗೂ ಪ್ರಯೋಜನವಾಗಿಲ್ಲ. ಈ ರಸ್ತೆಯ ಅವ್ಯವಸ್ಥೆ ಕಂಡ ಹಾಲಿ ಶಾಸಕರು ದೇವರಸನಹಳ್ಳಿ ರಸ್ತೆಯ ಅಭಿವೃದ್ದಿಗಾಗಿ 18 ಕೋಟಿ ರೂ.ಗಳ ಪ್ರಸ್ಥಾವನೆ ಸರ್ಕಾರಕ್ಕೆ ಕಳಿಸಿದ್ದು ಕೆಲವೇ ದಿನಗಳಲ್ಲಿ ಅದು ಮಂಜೂರಾಗಿ ಕೆಲಸ ಆರಂಭವಾಗಬಹುದು”.

– ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಮುದ್ದು ಮಾದಶೆಟ್ಟಿ ಗೋಳೂರು

ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪಂಚಾಯಿತಿಯವರು ಏನೂ ಮಾಡಿಲ್ಲ. ರಸ್ತೆ ಅವಸ್ಥೆ ಕುರಿತಂತೆ ಒಂದು ನಿರ್ಣಯವನ್ನೂ ಕೈಗೊಂಡಿಲ್ಲ. ಶಾಸಕರು, ಸಂಸದರಾದವರು ಇತ್ತ ಮುಖ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿ ಕಳಲೆಯವರಿಗೂ ಈ ರಸ್ಥೆ ಅಭಿವೃದ್ದಿ ಎಂದು ಭೂಮಿ ಪೂಜೆ ನಡೆಯಿತು. ಆದರೆ, ರಸ್ತೆಯ ದುರಸ್ಥಿ ಕಳಲೆ ಗೇಟಿ ದಾಟಿ ಮುಂದೆ ಬಂದೇ ಇಲ್ಲಾ ಬಿಡುಗಡೆಯಾದ ಹಣ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. 10 ವರ್ಷದಿಂದ ಈ ರಸ್ತೆಯಲ್ಲಿ ಅಟೋ ಚಲಾಯಿಸಿ ಜೀವನವೇ ಸಾಕು ಎಂಬಂತಾಗಿದೆ ಶಾಲಾ ಮಕ್ಕಳು, ವ್ಯಾಪಾರಿಗಳು,ರೈತರು ಸೇರಿದಂತೆ ನಮ್ಮೆಲ್ಲರ ಪರಿಸ್ಥಿತಿ.

Tags:
error: Content is protected !!