Mysore
28
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಚಾಮುಲ್‌ಗೆ ಶಕ್ತಿ ತುಂಬಲು ಸಿಎಂ ಬಳಿಗೆ ನಿಯೋಗ

‘ಆಂದೋಲನ’ ಸಂದರ್ಶನದಲ್ಲಿ ಚಾ.ನಗರ ಜಿಲ್ಲಾ ಹಾಲು ಒಕ್ಕೂಟದ ನೂತನ ಅಧ್ಯಕ್ಷ ಮಧುವನಹಳ್ಳಿ ಎಂ.ನಂಜುಂಡಸ್ವಾ ಮಿ

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟ (ಚಾಮುಲ್) ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಧುವನಹಳ್ಳಿ ಎಂ.ನಂಜುಂಡಸ್ವಾಮಿ ಅವರು ದೀರ್ಘ ಕಾಲದಿಂದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಿರ್ದೇಶಕರಾಗಿ ಸೇವೆ ಸಲ್ಲಿಸಿ ವಾರದ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷದ ವರಿಷ್ಠರ ನಿರ್ದೇಶನದಂತೆ ಕೆಎಂಎಫ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಅವರು ಕುದೇರಿನಲ್ಲಿ ಚಾಮುಲ್ ಉತ್ಪನ್ನ ಗಳ ದಾಸ್ತಾನಿಗೆ ಅನುಕೂಲವಾಗುವಂತೆ ಕೆಎಂಎಫ್‌ನಿಂದ ೨ ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಾಣ ಮಾಡಿಸಿರುವು ದಲ್ಲದೇ ಕೆಎಂಎಫ್ ನಿಂದ ಸುಮಾರು ಮೂರೂವರೆ ಕೋಟಿ ರೂ.ಗಳನ್ನು ಬಡ್ಡಿ ರಹಿತವಾಗಿ ಚಾಮುಲ್ಗೆ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಈಗ ನಂಜುಂಡಸ್ವಾಮಿ ಅವರೇ ಚಾಮುಲ್ ಗಾದಿ ಅಲಂಕರಿಸಿದ್ದು, ಚಾಮುಲ್‌ಗೆ ಶಕ್ತಿ ತುಂಬಲು ಮುಖ್ಯಮಂತ್ರಿ ಬಳಿಗೆ ಇಷ್ಟರಲ್ಲಿಯೇ ನಿಯೋಗವನ್ನು ಕರೆ ದೊಯ್ಯಲು ಸಜ್ಜಾಗಿದ್ದಾರೆ. ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಪುತ್ರಿ ಶೀಲಾ ಅವರನ್ನು ತರಬೇಕೆಂದು ಈಗಾಗಲೇ ನಿರ್ಧಾರವಾಗಿದೆ ಎಂದೂ ನಂಜುಂಡಸ್ವಾಮಿ ಅವರು ‘ಆಂದೋಲನ’ ದಿನಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದು, ಅವರ ಮಾತಿನ ಪೂರ್ಣ ಸಾರಾಂಶ ಇಂತಿದೆ.

ಆಂದೋಲನ: ಚಾಮುಲ್ ವಹಿವಾಟು ಹೇಗಿದೆ?

ನಂಜುಂಡಸ್ವಾಮಿ: ಚಾಮುಲ್ ೨೦೧೫ರಲ್ಲಿ ಚಾ.ನಗರ ಹೊರವಲಯದ ಕುದೇರಿನಲ್ಲಿ ೩೯ ಎಕರೆ ವಿಸ್ತೀರ್ಣದಲ್ಲಿ ತನ್ನ ಕಾರ್ಯ ಪ್ರಾರಂಭ ಮಾಡಿದ್ದು, ಅಂದಿಗೂ ಇಂದಿಗೂ ಹಾಲು ಸಂಗ್ರಹ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಲೇ ಇದ್ದು ಸರಾಸರಿ ೨.೪೦ ಲಕ್ಷ ಲೀಟರ್ ಹಾಲು ನಿತ್ಯ ಸಂಗ್ರಹವಾಗುತ್ತಿದೆ. ಮಳೆಗಾಲದಲ್ಲಿ ೩.೧೦ ಲಕ್ಷ ಲೀಟರ್ ಹಾಲು ಸಂಗ್ರಹ ಕಂಡಿದ್ದೂ ಇದೆ. ಒಕ್ಕೂಟ ಶುರುವಾದಾಗ ಕೇವಲ ೧.೬೦ ಲಕ್ಷ ಲೀಟರ್ ಹಾಲಷ್ಟೇ ಬರುತ್ತಿತ್ತು.

ಆಂದೋಲನ: ಚಾಮುಲ್‌ನಲ್ಲಿ ತಯಾರಾಗುವ ಉತ್ಪನ್ನಗಳು ಯಾವುವು?

ನಂಜುಂಡಸ್ವಾಮಿ: ಪೇಡ, ರಸಗುಲ್ಲಾ, ಲಸ್ಸಿ, ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆಯನ್ನು ಸದ್ಯ ತಯಾರಿಸಲಾಗುತ್ತಿದೆ. ಇಷ್ಟರಲ್ಲೇ ಮೈಸೂರು ಪಾಕ್ ತಯಾರಿಸಲು, ಮುಖ್ಯವಾಗಿ ೧೦ ಸಾವಿರ ಲೀಟರ್ ಸಾಮರ್ಥ್ಯದ ಐಸ್‌ಕ್ರೀಮ್ ಘಟಕವನ್ನು ಇನ್ನು ೨-೩ ತಿಂಗಳುಗಳಲ್ಲಿ ತೆರೆಯಲು ಯೋಜನೆ ಹಾಕಿಕೊಳ್ಳಲಾಗಿದೆ. ಕೆಎಂಎಫ್ ೧೪೬ ಐಟಂಗಳನ್ನು ತಯಾರಿಸುತ್ತಿದ್ದು ಅಲ್ಲಿಂದಲೇ ಮೈಸೂರು ಪಾಕ್ ಇತ್ಯಾದಿ ತಿನಿಸು ಇಲ್ಲಿಗೆ ಸದ್ಯ ಸರಬರಾಜಾಗುತ್ತಿವೆ. ಜಿಲ್ಲೆಯ ೪೮ ನಂದಿನಿ ಕ್ಷೀರ ಕೇಂದ್ರಗಳಲ್ಲಿ ಅಲ್ಲದೇ ೪೪೫ ಅಧಿಕೃತ ಮಾರಾಟ ಏಜೆನ್ಸಿಗಳಲ್ಲಿ ಈ ಉತ್ಪನ್ನಗಳು ದೊರೆಯುತ್ತವೆ.

ಆಂದೋಲನ: ಹೊರ ರಾಜ್ಯಗಳ ಕಡೆ ಮಾರುಕಟ್ಟೆ ವಿಸ್ತರಣೆ ಆಗುತ್ತಿದೆಯೇ?

ನಂಜುಂಡಸ್ವಾಮಿ: ಕೇರಳ, ತಮಿಳುನಾಡು, ಭೂತಾನ್, ಒಡಿಶಾ, ದಿಲ್ಲಿಗೆ ಚಾಮುಲ್‌ನಿಂದ ಪ್ರತಿದಿನ ೭೦ ಸಾವಿರ ಲೀಟರ್ ಗುಡ್‌ಲೈಫ್ ಹಾಲನ್ನು ಸರಬರಾಜು ಮಾಡಲಾಗುತ್ತಿದೆ.

ಆಂದೋಲನ: ಹಾಲು ಉತ್ಪಾದಕರು ಎಷ್ಟಿದ್ದಾರೆ. ಅವರಿಗೆ ದೊರೆಯುತ್ತಿರುವ ಸೌಲಭ್ಯಗಳೇನು ?

ನಂಜುಂಡಸ್ವಾಮಿ: ಜಿಲ್ಲೆಯಲ್ಲಿ ೩೨,೭೪೬ ಮಂದಿ ಹಾಲು ಉತ್ಪಾದಕರಿದ್ದು, ೮೮ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳೂ ಒಳಗೊಂಡಂತೆ ಒಟ್ಟು ೪೬೧ ಡೇರಿಗಳಿವೆ.ಹಾಲು ಉತ್ಪಾದಕರು ಅಕಸ್ಮಾತ್ ನಿಧನರಾದರೆ ರೈತ ಕಲ್ಯಾಣ ಟ್ರಸ್ಟ್ ನಿಂದ ಆರ್ಥಿಕ ನೆರವು, ೧ ಲಕ್ಷ ರೂ.ವಿಮೆ ಸೌಲಭ್ಯ, ದನಕರು ಗಳಿಗೆ ವಿಮೆ, ಹಾಲು ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಉಚಿತ ಹಾಸ್ಟೆಲ್ ಇತ್ಯಾದಿ ಅನುಕೂಲಗಳಿವೆ.

ಆಂದೋಲನ: ಖಾಸಗಿ ಡೇರಿಗಳ ಹಾವಳಿ ಇದೆಯೇ?

ನಂಜುಂಡಸ್ವಾಮಿ: ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕುಗಳಲ್ಲಿದೆ. ನಮಗಿಂತ ಲೀಟರ್‌ಗೆ ಐದಾರು ರೂ.ಜಾಸ್ತಿ ನೀಡಿ ಪ್ರಾರಂಭದಲ್ಲಿ ರೈತರನ್ನು ಆಕರ್ಷಿಸುತ್ತಿದ್ದಾರೆ. ಇಂತಹ ಆಮಿಷಕ್ಕೆ ರೈತರು ಒಳಗಾದರೆ ಪ್ರತಿ ಲೀ. ಹಾಲಿಗೆ ೫ ರೂ.ನಂತೆ ದೊರೆಯುವ ಪ್ರೋತ್ಸಾಹಧನ, ಉಚಿತ ಬಿತ್ತನೆ -ಮೇವಿನ ಕಡ್ಡಿ-ಬೀಜ, ಹೈನು ಗರ್ಭಧಾರಣೆ ಇನ್ಸುಲಿನ್ ಇತ್ಯಾದಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ.

ಆಂದೋಲನ: ಒಕ್ಕೂಟ ನಷ್ಟದಲ್ಲಿದೆಯೇ?

ನಂಜುಂಡಸ್ವಾಮಿ: ಚಾಮುಲ್ ವಾರ್ಷಿಕ ವಹಿವಾಟು ೪೬೦ ಕೋಟಿ ರೂ.ಇದೆ. ೧೦ದಿನಗಳಿಗೊಮ್ಮೆ ಉತ್ಪಾದಕರಿಗೆ ಸುಮಾರು ೭ ಕೋಟಿ ರೂ. ಹಾಲಿನ ಹಣವನ್ನು ಭರಿಸಲಾಗುತ್ತಿದೆ. ಚಾಮುಲ್ ನಷ್ಟದಲ್ಲಿಲ್ಲ, ಮಾರ್ಚ್ ವೇಳೆಗೆ ಏನಿಲ್ಲ ಎಂದರೂ ೨ ಕೋಟಿ ರೂ. ಆದಾಯ ಕಾಣಲಿದೆ.

ಆಂದೋಲನ: ಸಿಎಂ ಬಳಿಗೆ ನಿಯೋಗ ಹೋಗುತ್ತೀರಂತೆ?

ನಂಜುಂಡಸ್ವಾಮಿ: ಚಾಮುಲ್ ಪ್ರಾರಂಭ ಆದ ಸಂದರ್ಭದಲ್ಲಿ ಘೋಷಣೆ ಆದ ೮೩ ಕೋಟಿ ರೂ. ಅನುದಾನದ ಪೈಕಿ ೨೬ ಕೋಟಿ ರೂ. ಅಷ್ಟೇ ಬಿಡುಗಡೆಯಾಯಿತು. ಘೋಷಿತ ಪೂರ್ಣ ಅನುದಾನ ಬಾರದೇ ಆಗುತ್ತಿರುವ ತೊಂದರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಈ ಹಣ ಬಿಡುಗಡೆ ಮಾಡಿಸಲು ಸಿಎಂ ಹಾಗೂ ಸಹಕಾರ ಸಚಿವರ ಬಳಿಗೆ ಸದ್ಯದಲ್ಲೇ ಚಾಮುಲ್ ನಿಯೋಗ ಕರೆದೊಯ್ಯಲಾಗುವುದು. ಅದಕ್ಕೂ ಮುಂಚೆ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು,ಸಂಸದರ ಗಮನಕ್ಕೆ ತಂದು ಅವರ ಕಡೆಯಿಂದಲೂ ಸರ್ಕಾರದ ಗಮನ ಸೆಳೆಯಲಾಗುವುದು.

Tags:
error: Content is protected !!