ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಬಹಳಷ್ಟು ನಿರೀಕ್ಷೆ ಹೊಂದಿದ್ದ ರೈತ ಮುಖಂಡರು
ಮಹಾದೇಶ್ ಎಂ.ಗೌಡ
ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.೧೭ರಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ರೈತ ಸಂಘದ ಮುಖಂಡರು ರಾಜ್ಯ ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮ.ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆದರೆ ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಚಿವ ಸಂಪುಟ ಸಭೆ ನಡೆಸಲು ಮೂರನೇ ಬಾರಿ ದಿನಾಂಕ ನಿಗದಿಪಡಿಸಿ ಅದನ್ನೂ ಮುಂದೂಡಿರುವುದಕ್ಕೆ ರೈತ ಸಂಘದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲಿ ಇಲಾಖೆಗಳ ಕಚೇರಿ ಸ್ಥಾಪನೆ, ಪಶು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ನೇಮಕ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸುಧಾರಣೆ, ಗ್ರಾಮೀಣ ರಸ್ತೆಗಳ ದುರಸ್ತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಭೆ ನಡೆಯಬೇಕಿತ್ತು. ಆದರೆ, ಸಭೆ ಮುಂದೂಡಿರುವುದರಿಂದ ನಿರಾಸೆಯಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ. ಈಗ ಮಾರ್ಚ್ ಮೊದಲ ವಾರ ಅಥವಾ ನಾಲ್ಕನೇ ವಾರ ಸಚಿವ ಸಂಪುಟ ಸಭೆ ನಡೆಯುವ ನಿರೀಕ್ಷೆ ಇದೆ.
ಫೆಬ್ರವರಿ ೨೦ರಿಂದ ಮ.ಬೆಟ್ಟದಲ್ಲಿ ಜಾತ್ರೆ ನಡೆಯಲಿದ್ದು, ಮಾ.೩ರ ನಂತರ ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಸಚಿವ ಸಂಪುಟ ಸಭೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ, ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಅಲ್ಲದೆ, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಮಾವೇಶವನ್ನೂ ಮುಂದೂಡಲಾಗಿದೆ. ಮುಖ್ಯಮಂತ್ರಿಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ ೧೭ರಂದು ಹಮ್ಮಿಕೊಂಡಿದ್ದ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಟ್ಟಾರೆ ಬಜೆಟ್ ಅಧಿವೇಶನ ಮುಗಿದ ನಂತರ ಕ್ಯಾಬಿನೆಟ್ ಸಭೆಗೆ ಸಿದ್ಧತೆ ಮಾಡಿ ದಿನಾಂಕ ನಿಗದಿಪಡಿಸಬೇಕಿದೆ.
” ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಜಿಲ್ಲೆಗೆ ವಿಶೇಷ ಅನುದಾನ ಘೋಷಿಸು ವ ನಿರೀಕ್ಷೆ ಇತ್ತು. ಆದರೆ ಸಚಿವ ಸಂಪುಟ ಸಭೆಯನ್ನು ಪದೇಪದೇ ಮುಂದೂಡಲಾಗುತ್ತಿದೆ. ಇದನ್ನು ನೋಡಿದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತದೆಯೋ ಇಲ್ಲವೋ ಎಂಬುದೇ ಅನುಮಾನ ಮೂಡಿಸಿದೆ.”
ಗೌಡೇಗೌಡ, ಉಪಾಧ್ಯಕ್ಷರು, ರಾಜ್ಯ ರೈತ ಸಂಘ ಚಾಮರಾಜನಗರ.





