ಸುಡು ಬಿಸಿಲಿನಲ್ಲೇ ಪೇಪರ್ ಮಾರಾಟ ಮಾಡಿ ದಿನದೂಡುತ್ತಿರುವ ಹಿರಿಯ ಜೀವ; ಸಂಕಷ್ಟದಲ್ಲಿ ಪೇಪರ್ ಪ್ರಕಾಶಣ್ಣನಿಗೆ ಬೇಕಿದೆ ನೆರವು
ಕೆ. ಬಿ. ಶಂಶುದ್ಧೀನ್
ಕುಶಾಲನಗರ: ಇಲ್ಲಿನ ಗಣಪತಿ ದೇವಾಲಯದ ಮಳಿಗೆಗಳನ್ನು ತೆರವು ಗೊಳಿಸಿದ ಪರಿಣಾಮ ಏಳು ದಶಕಗಳಿಂದ ಇಲ್ಲಿ ಆಸರೆ ಪಡೆದಿದ್ದ ಪೇಪರ್ ಪ್ರಕಾಶಣ್ಣ ಈಗ ಸೂರಿಲ್ಲದೆ ಬಿಸಿಲಿನಲ್ಲಿಯೇ ಪೇಪರ್ ಮಾರಾಟ ಮಾಡುವಂತಾಗಿದ್ದು, ಹಿರಿಯ ಜೀವಕ್ಕೆ ನೆರವು ಒದಗಿಸಬೇಕಿದೆ.
ಮುಂಜಾನೆಯಿಂದ ಮುಸ್ಸಂಜೆಯವರೆಗೂ ಪ್ರಕಾಶಣ್ಣನ ಪೇಪರ್ ಅಂಗಡಿಯಿಂದ ದಿನಪತ್ರಿಕೆಗಳನ್ನು ಕೊಂಡು ನೂರಾರು ಮಂದಿ ಓದುತ್ತಿದ್ದರು. ಸೈಕಲ್ ಗಾಡಿಯೊಂದಿಗೆ ಹಿಂದೆ ಮತ್ತು ಮುಂದೆ ಪೇಪರ್‌ಗಳನ್ನು ಇಟ್ಟು ಇದೇ ಪ್ರಕಾಶಣ್ಣ ಪಟ್ಟಣದ ಮನೆಗಳು ಹಾಗೂ ಅಂಗಡಿಗಳಿಗೂ ವಿತರಿಸುತ್ತಿದ್ದರು. ಪತ್ರಿಕೆ ವಿತರಿಸಿ ಬಸವಳಿದರೆ ಮರಳಿ ತಮ್ಮ ಪೇಪರ್ ಅಂಗಡಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು.
ಈ ಅಂಗಡಿಗೂ ಪ್ರಕಾಶಣ್ಣನಿಗೂ ಬರೋಬ್ಬರಿ ಏಳು ದಶಕಗಳ ನಿರಂತರ ನಂಟು. ಒಂದು ರೀತಿಯ ಭಾವನಾತ್ಮಕವಾದ ವ್ಯವಹಾರದ ಒಡನಾಟ. ಪ್ರತಿನಿತ್ಯವೂ ಮುಂಜಾನೆ ೫ ಗಂಟೆಯ ಒಳಗೆ ಮನೆಯಿಂದ ಬಂದು ಪೂಜೆ ಸಲ್ಲಿಸಿ ಪೇಪರ್‌ಗಳ ಗಂಟನ್ನು ಬಿಚ್ಚುತ್ತಿದ್ದರು. ಆದರೀಗ ಗಣಪತಿ ದೇವಾಲಯವನ್ನು ಅಭಿವೃದ್ಧಿಗೊಳಿಸುವ ಸಂಬಂಧ ದೇವಾಲಯ ಸಮಿತಿಯವರು ಕಟ್ಟಡವನ್ನು ತೆರವು ಮಾಡುತ್ತಿರುವ ಪರಿಣಾಮ ಪೇಪರ್ ಪ್ರಕಾಶಣ್ಣ ಸೂರು ಹಾಗೂ ನೆರಳೂ ಕೂಡ ಇಲ್ಲದಂತಹ ದುಸ್ಥಿತಿಗೆ ಸಿಲುಕಿದ್ದಾರೆ. ಮುಂಜಾನೆ ಮೈಕೊರೆವ ಚಳಿ ಹಾಗೂ ಮಧ್ಯಾಹ್ನ ಸುಡುವ ಬಿಸಿಲಿಗೆ ಆಸರೆಯಾಗಿದ್ದ ಗಣಪತಿ ದೇವಾಲಯದ ಮಳಿಗೆಗಳನ್ನು ತೆರವು ಗೊಳಿಸಿದ ಪರಿಣಾಮ ಇದೀಗ ಇಳಿ ವಯಸ್ಸಿನ ಪೇಪರ್ ಪ್ರಕಾಶಣ್ಣನ ಸ್ಥಿತಿ ಅಧೋಗತಿಯಾಗಿದೆ. ಸ್ಥಳೀಯ ಕಾರು ನಿಲ್ದಾಣದ ಮುಂಬದಿಯ ಚರಂಡಿ ಬಳಿ ವಿವಿಧ ದಿನಪತ್ರಿಕೆಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಸಂಕಟದಲ್ಲಿಯೇ ಹಳೆಯದ್ದನ್ನು ಮೆಲುಕು ಹಾಕಿದ ಪೇಪರ್ ಪ್ರಕಾಶಣ್ಣ, ನನಗೀಗ ೭೫ ವರ್ಷ. ನನಗೆ ೧೫ ವರ್ಷವಿದ್ದಾಗ ಈ ಊರಿನ ಗಣ್ಯ ವ್ಯಕ್ತಿಯಾಗಿದ್ದ ಆರ್. ಗುಂಡೂರಾವ್ ಮೊದಲು ಏಜೆನ್ಸಿಯನ್ನು ಕೊಡಿಸಿದ್ದರು. ಅವರು ಮುಖ್ಯ ಮಂತ್ರಿಯಾಗಿದ್ದಾಗಲೂ ಊರಿಗೆ ಬಂದಾಗ ನನ್ನನ್ನು ಕರೆದು ಮಾತಾಡಿಸುತ್ತಿದ್ದರು. ಈಗ ನೋಡಿ ಅಂತಹ ಮಹನೀಯರೇ ಯಾರೂ ಇಲ್ಲ. ಹಾಗಾಗಿ ನನಗೆ ಈಗ ಇಂತಹ ಸ್ಥಿತಿ ಬಂದಿದೆ ಎಂದು ಪ್ರಕಾಶಣ್ಣ ಕಣ್ಣೀರಾದರು. ಸ್ಪಂದಿಸುವ ಮನಸ್ಸು ಉಳ್ಳವರು ಕೂಡಲೇ ಪೇಪರ್ ಪ್ರಕಾಶಣ್ಣಗೆ ಸ್ಪಂದಿಸುವಂತಾಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನನಗೆ 15 ವರ್ಷ ಇದ್ದಾಗಿನಿಂದಲೂ ಪೇಪರ್ ಹಾಕುತ್ತಿದ್ದೇನೆ. ಈಗ 75 ವರ್ಷವಾದರೂ ಈ ಕಾಯಕ ಬಿಟ್ಟಿಲ್ಲ. ನನ್ನ ಪತ್ನಿ ಕೂಡ ಮೃತಪಟ್ಟಿದ್ದಾರೆ. ಅವರು ಇದ್ದಾಗ ನನಗೆ ಮಧ್ಯಾಹ್ನ ವಿಶ್ರಾಂತಿ ಮಾಡಲು ಸಮಯ ಸಿಗುತ್ತಿತ್ತು. ಈಗ ವಿಶ್ರಾಂತಿ ಹೋಗಲಿ, ಎರಡೂ ಹೊತ್ತು ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದೇನೆ.
-ಪ್ರಕಾಶ್, ಪೇಪರ್ ಏಜೆಂಟ್, ಕುಶಾಲನಗರ





