Mysore
18
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ಕೆ.ಶೆಟ್ಟಿಹಳ್ಳಿಯ ನಿರ್ದಿಗಂತದಲ್ಲಿ ‘ಊರ ಹಬ್ಬ’

ಹಾಡಿ, ಕುಣಿದು ಸಂಭ್ರಮಿಸಿದ ಮಕ್ಕಳು; ‘ವಾಲಿ ವಧೆ’ ನಾಟಕ ಪ್ರದರ್ಶನ

ಮೈಸೂರು: ಚುಮು ಚುಮು ಚಳಿಯ ನಡುವೆ ನಿರ್ದಿಗಂತದ ತುಂಬೆಲ್ಲ ಶನಿವಾರ ಮಕ್ಕಳ ಕಲರವ, ಹಾಡು-ಕುಣಿತದ ಸಂಭ್ರಮದ ಸದ್ದು ಜೋರಾಗಿತ್ತು.

ಶ್ರೀರಂಗಪಟ್ಟಣ ಸಮೀಪದ ಕೆ.ಶೆಟ್ಟಿಹಳ್ಳಿಯ ನಿರ್ದಿಗಂತ ಸಂಸ್ಥೆಯಲ್ಲಿ ಶನಿವಾರ ಸಂಜೆ ನಡೆದ ‘ಊರ ಹಬ್ಬ’ ಮಕ್ಕಳ ರಂಗಪ್ರತಿಭೆಗೆ ಸಾಕ್ಷಿಯಾದವು. ಮೊದಲು ಕಪ್ಪು ವಸ ಧರಿಸಿದ ಕೆ. ಶೆಟ್ಟಿಹಳ್ಳಿ ಗ್ರಾಮದ ಮಕ್ಕಳು ಸಂವಿಧಾನ ಪೀಠಿಕೆಯನ್ನು ರಾಗ ವಾಗಿ ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಬಳಿಕ ಮಕ್ಕಳು ನಡೆಸಿಕೊಟ್ಟ ಕೋಲಾಟ ನೃತ್ಯ ಪ್ರೇಕ್ಷಕ ರನ್ನು ಜಾನಪದ ಲೋಕಕ್ಕೆ ಕರೆದೊಯ್ದಿತು.

ಸಂಜೆ ೬.೧೦ ರಿಂದ ರಾತ್ರಿವರೆಗೆ ನಡೆದ ರಂಗಪ್ರಯೋಗಗಳು, ರಂಗಗೀತೆಗಳ ಗಾಯನವು ಮಕ್ಕಳನ್ನು ಮಾತ್ರವಲ್ಲದೇ ಹಿರಿಯರೂ ತಲೆ ದೂಗುವಂತೆ ಮಾಡಿದವು. ಮಕ್ಕಳ ಹಾಡುಗಾರಿಕೆ, ನರ್ತನದ ಮನೋಜ್ಞ ಅಭಿನಯಕ್ಕೆ ಮನ ಸೋತ ಪೋಷಕರು ಸಂತಸದಿಂದ ಹಿಗ್ಗಿದರು. ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಕೆ.ಶೆಟ್ಟಿ ಹಳ್ಳಿಯ ೩೫ ಮಕ್ಕಳಿಗೆ ಒಂದೂವರೆ ತಿಂಗಳಿನಿಂದ ನಿರ್ದಿಗಂತ ಸಂಸ್ಥೆಯಿಂದ ಹಾಡು, ನೃತ್ಯ ಕಲಿಕೆ ತರಬೇತಿ ನೀಡಲಾಗಿತ್ತು.

ಬಳಿಕ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಗಜಾನನ ಯುವಕ ಮಂಡಳಿ ತಂಡ ಪ್ರಸ್ತುತಪಡಿಸಿದ ‘ವಾಲಿ ವಧೆ’ ನಾಟಕ ನೋಡುಗರ ಮನ ಸೆಳೆಯಿತು.

ಕೆರೆ ಸಂರಕ್ಷಣೆಯ ಮಹತ್ವ ಸಾರಿದ ಮಕ್ಕಳು:  ಕಲುಷಿತಗೊಳ್ಳುತ್ತಿರುವ ಕೆರೆ ಸಂರಕ್ಷಣೆಯ ಬಗ್ಗೆ ಮಕ್ಕಳು ನಾಟಕದ ಮೂಲಕ ಸಂದೇಶ ಸಾರಿದರು. ಹಾಡು, ನೃತ್ಯದೊಂದಿಗೆ ಕೆರೆಗಳ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಕೆ.ಶೆಟ್ಟಿಹಳ್ಳಿ ಕೆರೆ ಪ್ರಧಾನವಾಗಿಟ್ಟುಕೊಂಡ ಅಲ್ಲಿನ ಮಕ್ಕಳು ಕೆರೆಯಲ್ಲಿ ಬಟ್ಟೆ ಒಗೆಯುವುದು, ಹಸು ತೊಳೆಯುವುದು, ಮಲ, ಮೂತ್ರ ವಿಸರ್ಜನೆ ಮಾಡುವುದು, ಕಸ ಎಸೆಯುವುದರಿಂದ ಕೆರೆಗಳು ನಾಶ ಹೊಂದುತ್ತಿರುವ ಬಗ್ಗೆ ಕಿರು ನಾಟಕದ ಮೂಲಕ ಬೆಳಕು ಚೆಲ್ಲಿದರು. ಕೆರೆ ಕಲುಷಿತಗೊಳಿಸುವುದನ್ನು ತಡೆದು ಸಂರಕ್ಷಣೆ ಮಾಡುವ ಬಗ್ಗೆ ಸಂದೇಶವನ್ನು ಸಾರಿದರು. ಮಕ್ಕಳ ಮನೋಜ್ಞ ಅಭಿನಯಕ್ಕೆ ಮನಸೋತ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದರು.

” ಕೆ.ಶೆಟ್ಟಿಹಳ್ಳಿಗೆ ನಿರ್ದಿಗಂತ ಬಂದ ಮೇಲೆ ಕೆ.ಶೆಟ್ಟಿಹಳ್ಳಿ ಗ್ರಾಮದವರು ನಿರ್ದಿಗಂತದ ಜೊತೆಗೆ ಒಂದಾಗಿದ್ದಾರೆ. ನಮ್ಮ ಕೆ.ಶೆಟ್ಟಿಹಳ್ಳಿಯ ಮಕ್ಕಳ ಪ್ರತಿಭೆವನ್ನು ಗುರುತಿಸಿ, ಅವರ ಮನೋವಿಕಾಸ ಹೆಚ್ಚಿಸಿ ಅವರ ಗ್ರಹಿಕೆಯನ್ನು ಉತ್ತಮಪಡಿಸಲು ಇದೇ ಮೊದಲ ಬಾರಿಗೆ ಊರ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇನ್ನು ಮುಂದೆ, ತಿಂಗಳಿಗೆ ಅಥವಾ ೨ ತಿಂಗಳಿಗೆ ಒಂದು ಬಾರಿ ಈ ಊರ ಹಬ್ಬ ಕಾರ್ಯಕ್ರಮವನ್ನು ನಿರ್ದಿಗಂತದ ವತಿಯಿಂದ ಮಾಡಲಾಗುವುದು. ಈ ಮೂಲಕ ನೀವು, ನಾವು ಒಂದಾಗಿ ಬದುಕೋಣ.”

ಪ್ರಕಾಶ್ ರಾಜ್, ನಟ ಹಾಗೂ ನಿರ್ದಿಗಂತ ಸಂಸ್ಥೆಯ ಸ್ಥಾಪಕ

ಪ್ರೇಕ್ಷಕರ ಮನಗೆದ್ದ ಸಮೂಹ ನೃತ್ಯ..!

ಕೆ.ಶೆಟ್ಟಿಹಳ್ಳಿಯ ಕೆಲವು ಮಕ್ಕಳು ಹಾಡುತ್ತಿದ್ದರೆ, ಕೆಲವು ಮಕ್ಕಳು ಕೈ ಕೈ ಹಿಡಿದು ಹೆಜ್ಜೆ ಹಾಕಿ ಪ್ರೇಕ್ಷಕರ ಗಮನ ಸೆಳೆದರು. ಪುಟಾಣಿಗಳು ನೃತ್ಯಕ್ಕೆ ಹೆಜ್ಜೆ ಹಾಕಿ ಮುಗಿಸುತ್ತಿದಂತೆ ವೇದಿಕೆ ಏರಿದ ನಿರ್ದಿಗಂತ ಸಂಸ್ಥೆಯ ಸ್ಥಾಪಕ ಹಾಗೂ ನಟ ಪ್ರಕಾಶ್ ರಾಜ್ ‘ನಮ್ಮೂರ್ ಮಕ್ಕಳು ಹೆಂಗೆ’ ಎಂದು ಜೋಶ್‌ನಿಂದ ಪ್ರೇಕ್ಷಕರಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ನೆರೆದಿದ್ದ ನೋಡುಗರು ಸೂಪರ್ ಎಂದರು.

Tags:
error: Content is protected !!